ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SIT ಪ್ರಕರಣಗಳ ವಿಚಾರಣೆ ದಿನದಂದು ನ್ಯಾಯಾಲಯಗಳ ಸ್ಥಳಾಂತರಕ್ಕೆ ಒಪ್ಪಿಗೆ: ಪಾಟೀಲ

Published 9 ಮೇ 2024, 14:04 IST
Last Updated 9 ಮೇ 2024, 14:04 IST
ಅಕ್ಷರ ಗಾತ್ರ

ಗದಗ: ‘ಹಾಸನದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳನ್ನು ವಿಚಾರಣೆ ದಿನದಂದು ಮಾತ್ರ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಕಾನೂನು ಇಲಾಖೆ ಒಪ್ಪಿದ್ದು, ಈ ಸಂಬಂಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಪತ್ರ ಬರೆಯಲಾಗಿದೆ’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

‘ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೆಲ ಪ್ರಕರಣಗಳು ದಾಖಲಾಗಿದ್ದು, 42 ಎಸಿಎಂಎಂ ಹಾಗೂ ಸಿಟಿ ಸಿವಿಲ್‌ ಆ್ಯಂಡ್‌ ಸೆಷನ್ಸ್‌ ಜಡ್ಜ್‌ 81 (82) ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದಿವೆ. ದೂರುದಾರರು, ಸಂತ್ರಸ್ತೆಯರು ಮತ್ತು ಸಾಕ್ಷಿದಾರರಿಗೆ ರಕ್ಷಣೆ ಒದಗಿಸುವುದು ಮತ್ತು ಅವರ ಗೋಪ್ಯತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನಲೆಯಲ್ಲಿ ಎಸ್‌ಐಟಿ ತನಿಖೆಗಳ ಪ್ರಕರಣ ವಿಚಾರಣೆಗಳ ದಿನಗಳಂದು ಮಾತ್ರ ಈ ನ್ಯಾಯಾಲಯಗಳನ್ನು ಗುರುನಾನಕ್‌ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಬಗ್ಗೆ ನಮ್ಮ ಇಲಾಖೆ ಅನುಮೋದನೆ ನೀಡಿದೆ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

'ಈ ಎರಡೂ ನ್ಯಾಯಾಲಯಗಳು ಸಿವಿಲ್‌ ಕೋರ್ಟ್‌ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆರೋಪಿಗಳ ಪರ ಬಾತ್ಮೀದಾರರು, ಮಾಧ್ಯಮದವರು ಹಾಗೂ ಸಾರ್ವಜನಿಕರು ಸಹ ನ್ಯಾಯಾಲಯಗಳಲ್ಲಿ ನಿರಾತಂಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದರಿಂದ ಮೇಲ್ಕಂಡ ಪ್ರಕರಣಗಳ ವಿಚಾರಣೆ ಸಮಯದೊಳಗೆ ಗೋಪ್ಯತೆ ಕಾಪಾಡಲು ಕಷ್ಟವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು. ಹಾಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ’ ಎಂದು ತಿಳಿಸಿದರು.

ಪಿತ್ರೋಡಾ ಜನರ ಕ್ಷಮೆ ಕೇಳಲಿ:

ಭಾರತದ ವೈವಿಧ್ಯದ ಕುರಿತಾಗಿ ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸುಧಾರಿತರು, ಸುಸಂಸ್ಕೃತರು ಎನಿಸಿಕೊಂಡ ಬುದ್ಧಿಜೀವಿಗಳು ಕೆಲವೊಮ್ಮೆ ಬಣ್ಣದ ಮೇಲೆ ಜನಾಂಗ ಪ್ರತ್ಯೇಕಿಸುವುದನ್ನು ಭಾರತೀಯ ಸಂಸ್ಕೃತಿ ಸಹಿಸುವುದಿಲ್ಲ ಎಂಬುದನ್ನು ಅರಿತಿರುವುದಿಲ್ಲ. ಹೋಲಿಕೆ ಮಾಡುವ ಜೊತೆಗೆ ಆಫ್ರಿಕನ್‌ರನ್ನು ನೋಡುವ ಅವರ ಮನಸ್ಥಿತಿ ಏನಿದೆಯೋ ಅದು ತಪ್ಪು. ಸುಸಂಸ್ಕೃತರು ಇಂತಹ ಆಲೋಚನಾ ಪ್ರಕ್ರಿಯೆ ಹೊಂದಬಾರದು. ಪಿತ್ರೋಡಾ ತಮ್ಮ ಹೇಳಿಕೆ ಹಿಂಪಡೆದು, ತಕ್ಷಣವೇ ಜನರ ಕ್ಷಮೆ ಕೇಳಬೇಕು’ ಎಂದರು.

‘ಅದಾನಿ– ಅಂಬಾನಿ ಅವರಿಂದ ಕಾಂಗ್ರೆಸ್‌ ಪಕ್ಷ ಟೆಂಪೊಗಟ್ಟಲೆ ಕಪ್ಪು ಹಣ ಪಡೆದಿದೆಯೇ’ ಎಂದು ಪ್ರಶ್ನಿಸಿರುವ ಪ್ರಧಾನಿ ಮೋದಿ ಹೇಳಿಕೆಗೆ ಆಕ್ಷೇಪಿಸಿದ ಪಾಟೀಲ, ‘ಮೋದಿ ಅವರು ಜನರ ಮುಂದೆ ನಾಟಕ ಆಡುವುದು ಬಿಡಬೇಕು. ಅವರು ಈ ಕ್ಷಣದವರೆಗೆ ಪ್ರಧಾನಿಯಾಗಿದ್ದಾರೆ. ಅವರು ಮಾಡಿದ ಆರೋಪಕ್ಕೆ ಸಾಕ್ಷಿ, ಪುರಾವೆಗಳು ಇದ್ದಲ್ಲಿ ಹಣಕೊಟ್ಟವರನ್ನು ತಕ್ಷಣ ಬಂಧಿಸಿ, ಜೈಲಿಗಟ್ಟಲಿ. ಅವರನ್ನು ತಡೆಯುವವರು ಯಾರು?’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT