ಅಧ್ಯಾತ್ಮದ ಹೊಳಪು ಹೆಚ್ಚಿಸಿದ ಅಲ್ಲಮ

ಶುಕ್ರವಾರ, ಏಪ್ರಿಲ್ 19, 2019
27 °C
ಶಿವಾನುಭವ, ಅಲ್ಲಮಪ್ರಭು ಜಯಂತಿ ಕಾರ್ಯಕ್ರಮ; ತೋಂಟದ ಶ್ರೀ ಅಭಿಮತ

ಅಧ್ಯಾತ್ಮದ ಹೊಳಪು ಹೆಚ್ಚಿಸಿದ ಅಲ್ಲಮ

Published:
Updated:
Prajavani

ಗದಗ: ‘ಅನುಭವ ಮಂಟಪದ ಪೀಠಾಧ್ಯಕ್ಷ ಅಲ್ಲಮಪ್ರಭು ನಿತ್ಯ ನಡೆಯುವ ಚರ್ಚೆಗಳಿಗೆ ಸೂಕ್ತ ಪರಿಹಾರ ನೀಡುತ್ತಿದ್ದರು. ಶ್ರೇಷ್ಠ ಜಂಗಮರಾಗಿದ್ದ ಅವರು ಆಧ್ಯಾತ್ಮಿಕ ಔನ್ನತ್ಯ ಸಾಧಿಸಿದ್ದರು. ಗಹನವಾದ ಆಧ್ಯಾತ್ಮಿಕ ಚಿಂತನೆ ಮತ್ತು ತಾರ್ಕಿಕತೆಗಳನ್ನು ಅವರ ವಚನಗಳಲ್ಲಿ ಕಾಣಬಹುದು’ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಇಲ್ಲಿನ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸಂಗೀತ, ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳು ನಮಗೆಲ್ಲರಿಗೂ ಆದರ್ಶ. ಅವರ ಪರಂಪರೆಯಲ್ಲಿ ಸಾಗುತ್ತಿರುವ ಕಲ್ಲಯ್ಯಜ್ಜನವರು, ಅಂಧ ಹಾಗೂ ಅನಾಥರ ಬಾಳಿಗೆ ಬೆಳಕಾಗುತ್ತಿರುವುದು ಉತ್ತಮ ಕಾರ್ಯ’ ಎಂದರು.

ನಿವೃತ್ತ ಪ್ರಾಧ್ಯಾಪಕ ಆರ್.ಎಲ್.ಪೋಲಿಸಪಾಟೀಲ, ಅಲ್ಲಮಪ್ರಭು ವಚನಗಳ ಕುರಿತು ಉಪನ್ಯಾಸ ನೀಡಿದರು. ‘ಪ್ರಭುದೇವರ ಬಾಲ್ಯ ಕುರಿತು ಹೆಚ್ಚು ಸಂಶೋಧನೆ ನಡೆಯಬೇಕಿದೆ. ಬಲಿಷ್ಠ, ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಪೂರಕವಾದ ವಚನಗಳನ್ನು ಅವರು ರಚಿಸಿದ್ದಾರೆ. ಅವರ ವಚನಗಳು ಸ್ವವಿಮರ್ಶೆ, ಸ್ವಅವಲೋಕನದ ಹಿನ್ನೆಲೆಯಲ್ಲಿ ರಚನೆಗೊಂಡಿವೆ. ಅವರ ವಚನಗಳು ವೈಚಾರಿಕತೆ ಮತ್ತು ಅಧ್ಯಾತ್ಮವನ್ನು ಪ್ರತಿಬಿಂಬಿಸುತ್ತವೆ’ ಎಂದರು.

ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪಡೆದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರನ್ನು ಸನ್ಮಾನಿಸಲಾಯಿತು. ‘ಮನುಷ್ಯ ಜನ್ಮ ಶ್ರೇಷ್ಠವಾದದ್ದು ಎನಿಸಿಕೊಳ್ಳಬೇಕಾದರೆ ಸಾಧನೆ ಮಾಡಬೇಕು. ಸಾಧನೆಗೆ ವೈಕಲ್ಯ ಅಡ್ಡಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮದ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಅವರ ಮಾರ್ಗದಲ್ಲಿ ನಡೆದು ಸೇವೆ ಮಾಡುವ ಅವಕಾಶ ದೊರೆಕಿದ್ದು ನನ್ನ ಭಾಗ್ಯ. ತೋಂಟದ ಶ್ರೀಗಳು ಗವಾಯಿಗಳ ಆಶ್ರಮದ ಸೇವೆಯನ್ನು ಸದಾ ಮುಕ್ತಕಂಠದಿಂದ ಹೊಗಳುತ್ತಿದ್ದರು’ ಎಂದು ಅವರು ಹೇಳಿದರು.

ಪಿ.ಪಿ.ಜಿ. ಸಂಗೀತ ಮಹಾವಿದ್ಯಾಲಯದ ಪ್ರೊ.ಶಿವಬಸಯ್ಯ ಗಡ್ಡದಮಠ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ನಂದಿನಿ ಘಟ್ಟಿ, ಧರ್ಮಗ್ರಂಥ ಪಠಣ, ಭಾವನಾ ಪಟ್ಟಣಶೆಟ್ಟಿ ವಚನ ಚಿಂತನೆ ನೀಡಿದರು. ಶಿವಾನಂದ ಪಲ್ಲೇದ, ಎಸ್.ಯು.ಸಜ್ಜನಶೆಟ್ಟರ, ಶಿವಕುಮಾರ ರಾಮನಕೊಪ್ಪ, ಶೇಖಣ್ಣ ಕವಳಿಕಾಯಿ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಜಿ.ಪಿ.ಕಟ್ಟಿಮನಿ, ಅನ್ನಪೂರ್ಣಾ ಬಡಿಗಣ್ಣವರ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !