ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಆಷಾಢ ಮಾಸದ ಪ್ರುಯುಕ್ತ ಕಳೆದ ಹದಿನೈದು ದಿನಗಳಿಂದ ಹಮ್ಮಿಕೊಂಡಿದ್ದ ‘ಅನುಭಾವಿಗಳ ಅನುಭಾವ ದರ್ಶನ’ ಪ್ರವಚನದ ಮಹಾಮಂಗಲೋತ್ಸವ ನಿಮಿತ್ತ ಸೋಮವಾರ ಪಟ್ಟಣದಲ್ಲಿ ಬಸವಣ್ಣ, ಎಡೆಯೂರ ಸಿದ್ದಲಿಂಗ ಶಿವಯೋಗಿ ಭಾವಚಿತ್ರ ಹಾಗೂ ಶರಣರ ವಚನ ಗ್ರಂಥಗಳ ಕಟ್ಟುಗಳ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ಶ್ರೀಮಠದ ಪೀಠಾಧಿಪತಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅವರು ಉತ್ಸವಕ್ಕೆ ಚಾಲನೆ ನೀಡಿದರು. ಮೆರವಣಿಗೆಯ ಉದ್ದಕ್ಕೂ ಮಹಿಳೆಯರು ಪಲ್ಲಕ್ಕಿ ಹೊತ್ತಿದ್ದು ವಿಶೇಷವಾಗಿತ್ತು. ವಿವಿಧ ಮಂಗಳ ವಾದ್ಯಮೇಳಗಳೊಂದಿಗೆ ಶ್ರೀಮಠದಿಂದ ಹೊರಟ ಅದ್ಧೂರಿ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಧ್ಯಾಹ್ನ ಪುನಃ ಶ್ರೀಮಠಕ್ಕೆ ಆಗಮಿಸಿತು.
ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಹೆಣ್ಣು, ಗಂಡು ಎನ್ನುವ ಬೇಧ-ಭಾವವಿಲ್ಲ. ಬಸವಾದಿ ಪ್ರಮಥರ ತತ್ತ್ವಸಿದ್ಧಾಂತದ ಪ್ರಕಾರ ತೋಂಟದಾರ್ಯ ಮಠದಿಂದ ಮಹಿಳೆಯರಿಗೂ ಪಲ್ಲಕ್ಕಿ ಹೊರುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಸವಾದಿ ಶರಣರು ಹೆಣ್ಣು ಮಕ್ಕಳಿಗೂ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಈಚೆಗೆ ಜಗತ್ತಿನಾದ್ಯಂತ ಹಲವಾರು ಪ್ರಾಕೃತಿಕ ಅವಘಡಗಳು ಸಂಭವಿಸುತ್ತಲಿವೆ. ಭಾರಿ ಮಳೆಗೆ ದೇಶ ತಲ್ಲಣಗೊಂಡಿದೆ. ನಾಡಿನೆಲ್ಲಡೆ ಉತ್ತಮ ಮಳೆ, ಬೆಳೆ ಬರಬೇಕು. ರೈತರು ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿರುತ್ತೇವೆ. ಈ ಆಸೆಯನ್ನು ಇಟ್ಟುಕೊಂಡು ಪ್ರವಚನ ಹಾಗೂ ಪಲ್ಲಕ್ಕಿ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಎಸ್.ಎಸ್.ಗಡ್ಡದ, ಕಾರ್ಯದರ್ಶಿ ಅಡಿವೆಪ್ಪ ಚಲವಾದಿ, ಖಜಾಂಚಿ ಶಿವಕುಮಾರ ಬೆಟಗೇರಿ, ಸಹ ಖಜಾಂಚಿ ವಿಶ್ವನಾಥ ಉಳ್ಳಾಗಡ್ಡಿ, ಸಹಕಾರ್ಯದರ್ಶಿ ವೀರೇಂದ್ರ ಅಂಗಡಿ, ಜಗದ್ಗುರು ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ ಎಚ್.ವಿರೂಪಾಕ್ಷಗೌಡ, ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಪವನ ಚೋಪ್ರಾ, ಅಶೋಕ ಹುಬ್ಬಳ್ಳಿ, ಫಾಲಾಕ್ಷಿ ಗಣದಿನ್ನಿ, ದೇವು ಹಡಪದ, ದೇವಪ್ಪ ರಾಮೇನಹಳ್ಳಿ, ಸದಾಶಿವಯ್ಯ ಕಬ್ಬೂರಮಠ, ಮಂಗಳಾ ಸೀರಿ, ಮಂಗಳಾ ಕರ್ಜಗಿ, ಸುಕನ್ಯಾ ಕಬ್ಬೂರಮಠ, ನೀಲಮ್ಮ ಗಿಂಡಿಮಠ, ಶಿವಗಂಗಾ ನವಲಗುಂದ, ಶಾಂತಾ ಕುಬಸದ, ಈರಮ್ಮ ಹಾಲಗಿ ಇದ್ದರು.
ನಂತರ ನಡೆದ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.