ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ: ಬಾಬಾಸಾಹೇಬರ ಪುಣ್ಯಸ್ಮರಣೆ ಇಂದು

ನೇರವೇರದ ನರಗುಂದ ಉತ್ಸವದ ಕನಸು
Published 12 ಜೂನ್ 2024, 5:40 IST
Last Updated 12 ಜೂನ್ 2024, 5:40 IST
ಅಕ್ಷರ ಗಾತ್ರ

ನರಗುಂದ: ಸ್ವಾತಂತ್ರ್ಯ ಸಂಗ್ರಾಮ ಹಾಗೂ ರೈತ ಹೋರಾಟದಲ್ಲಿ ಬಂಡಾಯ ಸಾರಿದ ನರಗುಂದ ಪಟ್ಟಣ ದೇಶದಲ್ಲಿ ಬಂಡಾಯದ ರಾಜಧಾನಿ ಎಂದೇ ಜನಜನಿತ. ಇದರ ರೂವಾರಿ ನರಗುಂದದ ಭಾಸ್ಕರರಾವ್ (ಬಾಬಾಸಾಹೇಬ) ಅವರ ಪುಣ್ಯಸ್ಮರಣೆ ಜೂನ್ 12ರಂದು ನಡೆಯಲಿದೆ.

ಈ ದಿನದಂದು ನರಗುಂದ ಉತ್ಸವ ಮಾಡಬೇಕೆಂಬ ಸ್ವಾತಂತ್ರ್ಯ ಪ್ರೇಮಿಗಳ ಕನಸು ಕನಸಾಗಿಯೇ ಉಳಿದಿದೆ. ಅನೇಕ ಸಂಘಟನೆಗಲು ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಸರ್ಕಾರಕ್ಕೆ ಮನವಿ ಮಾಡಿದರೂ ಅದು ಸಾಕಾರಗೊಂಡಿಲ್ಲ.

ಐತಿಹಾಸಿಕ ಹಿನ್ನೆಲೆ: 1842–1858ರ ವರೆಗೆ ನರಗುಂದ ಸಂಸ್ಥಾನ ಆಳಿದ ಭಾವೆಯವರ ಚರಿತ್ರೆ ರೋಮಾಂಚನಕಾರಿ. ದತ್ತು ಮಕ್ಕಳಿಗೆ ಹಕ್ಕಿಲ್ಲ ಹಾಗೂ ನಿಶ್ಶಸ್ತ್ರ ಕಾಯ್ದೆ ಮುಂದಿಟ್ಟಿದ್ದ ಬ್ರಿಟಿಷರ ವಿರುದ್ಧ ಬಾಬಾ ಸಾಹೇಬರು ಸಿಡಿದೆದ್ದಿದ್ದರು. ಇದು ಬಂಡಾಯದ ಹೋರಾಟಕ್ಕೆ ಮುನ್ನುಡಿ ಬರೆದಿತ್ತು. 1846ರಲ್ಲಿ ಪುತ್ರ ಜನಿಸಿದ್ದನಾದರೂ ಕೆಲವೇ ವರ್ಷಗಳಲ್ಲಿ ಮೃತ ಪಟ್ಟಿದ್ದ. ಹಾಗಾಗಿ ದತ್ತು ಪುತ್ರರಿಗೆ ಹಕ್ಕಿಲ್ಲ ಎನ್ನುವ ನೀತಿಯಡಿ ನರಗುಂದ ಸಂಸ್ಥಾನವನ್ನು ಕಬಳಲಿಸಲು ಬ್ರಿಟಿಷ್‌ ಅಧಿಕಾರಿಗಳು ಸಂಚು ನಡೆಸಿದ್ದರು. ಬಾಬಾ ಸಾಹೇಬರು ಇದರ ವಿರುದ್ಧ ಬಂಡಾಯ ಸಾರಿದರು.

ಇದನ್ನರಿತು 1858ರ ಮೇ 28ರಂದು ಜನರಲ್ ಲೆಸ್ಟರ್‌ ನರಗುಂದಕ್ಕೆ ಬರುತ್ತಾನೆ. ಈತನು ಶಸ್ತ್ರಾಸ್ತ್ರಗಳನ್ನು ಪಡೆದು ಸಾಗುತ್ತಿರುವಾಗ ಕತ್ತಲು ಆವರಿಸುತ್ತಿದ್ದಂತೆ ಭಾವೆಯವರ ಸೈನಿಕರು ಅವರ ಮೇಲೆ ಆಕ್ರಮಣ ಮಾಡಿ ಮಧ್ಯರಾತ್ರಿಯೇ ಎಲ್ಲ ಶಸ್ತ್ರಾಸ್ತ್ರಗಳನ್ನು ಮರಳಿ ತರುತ್ತಾರೆ. ಇದನ್ನು ಅವಮಾನ ಎಂದು ಪರಿಗಣಿಸಿದ್ದ ಬ್ರಿಟಿಷರು ನರಗುಂದದ ಮೇಲೆ ಯುದ್ಧ ಸಾರಿದ್ದು ದಾಖಲೆಗಳಿಂದ ತಿಳಿಯುತ್ತದೆ.

ಪುರಸಭೆ ಕಚೇರಿಯಾಗಿ ಮಾರ್ಪಟ್ಟ ಅರಮನೆಗೆ ‘ವೀರ ಭವನ’ ಎಂದು ನಾಮಕರಣ ಮಾಡಬೇಕು. ಪುಣ್ಯ ಸ್ಮರಣೆಯನ್ನು ನರಗುಂದ ಉತ್ಸವವನ್ನಾಗಿಸಬೇಕು.
ವಿಜಯ ಕೋತಿನ, ಕನ್ನಡ ಪರ ಸಂಘಟನೆಗಳ ಮುಖಂಡ

ಈ ಘಟನೆಯಿಂದ ಕೆರಳಿದ ಇಂಗ್ಲಿಷರು ನರಗುಂದ ಸಂಸ್ಥಾನದ ಮೇಲೆ ದಾಳಿ ಮಾಡಲು ಮ್ಯಾನ್ಸನ್‌ ನೇತೃತ್ವದಲ್ಲಿ 1858ರ ಮೇ 29ರ ರಾತ್ರಿ ಸುರೇಬಾನ್‌ ತಲುಪಿದ್ದರು. ಇದು ಬಾಬಾಸಾಹೇಬ್‌ ಅವರಿಗೆ ಗೊತ್ತಾಗಿ ಅವರ ಆಪ್ತಮಿತ್ರರಾಗಿದ್ದ ವಿಷ್ಣುಪಂಥರೊಂದಿಗೆ ರಾತ್ರಿಯೇ ಮ್ಯಾನ್ಸನ್‌ ಮೇಲೆ ದಾಳಿ ಮಾಡಿದರು. ಅಲ್ಲಿಯ ಹನಮಂತನ ಗುಡಿಯಲ್ಲಿ ಅಡಗಿದ್ದ ಮ್ಯಾನಸನ್‌ನ ರುಂಡ ಕತ್ತರಿಸಿ, ನರಗುಂದ ಪಟ್ಟಣದ ಅಗಸಿ ಬಾಗಿಲಿಗೆ ಕಟ್ಟಿದ್ದರು. ಬೆಳಗಾಗುವುದರಲ್ಲಿ ಅಗಸಿ ರಕ್ತದಿಂದಾಗಿ ಕೆಂಪಾಗಿ ಹೋಗಿತ್ತು. ಅಂದಿನಿಂದ ಇಂದಿನವರೆಗೂ ಈ ಅಗಸಿ ಬಾಗಿಲು ‘ಕೆಂಪಗಸಿ’ ಎಂದೇ ಜನಪ್ರಿಯವಾಗಿದೆ.

ಮ್ಯಾನ್ಸನ್ ಸಾವಿನ ನಂತರ ನರಗುಂದ ಸಂಸ್ಥಾನದ ಮೇಲೆ ದಾಳಿ ಮಾಡಿದ ಬ್ರಿಟಿಷರು ಜೂನ್ 2ರಂದು ಕೋಟೆ ಒಡೆದು ಒಳಗೆ ನುಗ್ಗಿ ಎಲ್ಲವನ್ನು ಧ್ವಂಸಗೊಳಿಸುತ್ತಾರೆ. ಅಷ್ಟೊತ್ತಿಗೆ ಆಗಲೇ ಬಾಬಾಸಾಹೇಬರು ಮುಂದಿನ ಯುದ್ಧ ತಯಾರಿಗೆ ಬೆಳಗಾವಿ ಮಾರ್ಗದ ಕಡೆ ತೆರಳಿದ್ದರು. ಆದರೆ ಕೊನೆಗೂ ಬ್ರಿಟಿಷರ ಕೈಗೆ ಸೆರೆ ಸಿಕ್ಕರು. 1858ರ ಜೂನ್ 12ರಂದು ಬಾಬಾಸಾಹೇಬ್‌ರನ್ನು ಬೆಳಗಾವಿಯ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗುತ್ತದೆ. ಅದರ ಸ್ಮರಣೆ ಬುಧವಾರ ಸಾಂಕೇತಿಕವಾಗಿ ನಡೆಯಲಿದೆ‌.

ನರಗುಂದದ ಬಾಬಾಸಾಹೇಬ (ಭಾವೆ)
ನರಗುಂದದ ಬಾಬಾಸಾಹೇಬ (ಭಾವೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT