ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ |ಕಳಪೆ ಬಿತ್ತನೆ ಬೀಜ ಪೂರೈಕೆ: ಬೀದಿಗಿಳಿದ ಅನ್ನದಾತ

ತೆನೆಯಲ್ಲಿ ಕಾಳು ಮೂಡದಿರುವುದನ್ನು ಕಂಡು ಕಂಗಾಲಾಗಿರುವ ರೈತರು
Published 3 ಜುಲೈ 2023, 6:19 IST
Last Updated 3 ಜುಲೈ 2023, 6:19 IST
ಅಕ್ಷರ ಗಾತ್ರ

- ಕಾಶೀನಾಥ ಬಿಳಿಮಗ್ಗದ

ಮುಂಡರಗಿ: ಪ್ರಸ್ತುತ ವರ್ಷ ಸಕಾಲದಲ್ಲಿ ಮುಂಗಾರು ಮಳೆಯಾಗದೆ ಕಂಗಾಲಾಗಿದ್ದ ತಾಲ್ಲೂಕಿನ ರೈತರು ಈಗ ಕಳಪೆ ಸೂರ್ಯಕಾಂತಿ ಬಿತ್ತನೆ ಬೀಜ ಬಿತ್ತಿ ಅಪಾರ ಪ್ರಮಾಣದ ಬೆಳೆನಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸೂರ್ಯಕಾಂತಿ ಬೆಳೆಯಿಂದ ಸಾಕಷ್ಟು ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ‘ಕಲ್ಲು ಹೋಯಿತು, ಕಲ್ಲಿಗೆ ಹತ್ತಿದ್ದ ಬೆಲ್ಲವೂ ಹೋಯಿತು’ ಎನ್ನುವಂತಾಗಿದೆ.

ಪ್ರತಿ ವರ್ಷ ಮುಂಗಾರು ಪೂರ್ವದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಕೆಲವು ಕಂಪನಿಗಳು ರೈತರಿಗೆ ಸೂರ್ಯಕಾಂತಿ, ಹತ್ತಿ, ಮೆಕ್ಕಜೋಳ ಮೊದಲಾದ ಬಿತ್ತನೆ ಬೀಜಗಳನ್ನು ಪೂರೈಸುತ್ತಲಿವೆ. ಪ್ರಸ್ತುತ ವರ್ಷ ಸುಮಾರು ಐದಾರು ಅಧಿಕೃತ ಕಂಪನಿಗಳು ತಾಲ್ಲೂಕಿನ ರೈತರಿಗೆ ವಿವಿಧ ಬಗೆಯ ಬಿತ್ತನೆ ಬೀಜಗಳನ್ನು ಪೂರೈಸಿವೆ. ಅವುಗಳಲ್ಲಿ ಒಂದು ಖಾಸಗಿ ಕಂಪನಿಯು ಪೂರೈಸಿದ್ದ ಸೂರ್ಯಕಾಂತಿ ಬಿತ್ತನೆ ಬೀಜಗಳು ಸಂಪೂರ್ಣವಾಗಿ ಕಳಪೆಯಾಗಿವೆ.

ತಾಲ್ಲೂಕಿನ ಬರದೂರು, ಮೇವುಂಡಿ, ಹೈತಾಪುರ, ಡಂಬಳ, ಹಳ್ಳಿಕೇರಿ, ಹಳ್ಳಿಗುಡಿ, ಕದಾಂಪುರ, ಶಿರೋಳ, ಮುರುಡಿ, ಮಕ್ತುಂಪುರ ಮೊದಲಾದ ಗ್ರಾಮಗಳ ನೂರಾರು ರೈತರು ಖಾಸಗಿ ಕಂಪನಿ ಪೂರೈಸಿದ್ದ ಕಳಪೆ ಗುಣಮಟ್ಟದ ಸೂರ್ಯಕಾಂತಿ ಬಿತ್ತನೆ ಬೀಜಗಳನ್ನು ಬಿತ್ತಿದ್ದರು. ಈಗ ಸೂರ್ಯಕಾಂತಿ ಗಿಡಗಳ ಹೂವುಗಳಲ್ಲಿ (ತೆನೆಗಳಲ್ಲಿ) ಕಾಳು ಮೂಡುವ ಬದಲಾಗಿ ಹಸಿರು ಹುಲ್ಲು ಮೂಡಿದೆ. ಕೆಲವು ಸೂರ್ಯಕಾಂತಿ ಗಿಡಗಳು ತುಂಬಾ ಕಿರಿದಾಗಿ ಬೆಳೆದಿದ್ದು, ಅವು ತೆನೆ ಮೂಡಿಸುತ್ತವೆ ಎನ್ನುವ ಭರವಸೆ ಇಲ್ಲದಂತಾಗಿದೆ.

ಸಕಾಲದಲ್ಲಿ ಮುಂಗಾರು ಮಳೆಯಾಗದ್ದರಿಂದ ನೀರಾವರಿ ಜಮೀನುಳ್ಳ ರೈತರು ಸೂರ್ಯಕಾಂತಿಯನ್ನು ಬೆಳೆದಿದ್ದರು. ಏಪ್ರಿಲ್‌ನಲ್ಲಿ ಬಿತ್ತಿದ್ದ ಸೂರ್ಯಕಾಂತಿಯು ಈಗ ತೆನೆಯೊಡೆಯುತ್ತಲಿದೆ. ತೆನೆಯಲ್ಲಿ ಕಾಳು ಮೂಡದಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಕೆಲವು ಗಿಡಗಳಲ್ಲಿ ಅಡಿಕೆ ಗಾತ್ರದಷ್ಟು ತೆನೆಗಳು ಮೂಡಿದ್ದು, ಅವುಗಳಲ್ಲಿ ಈವರೆಗೂ ಬೀಜಗಳು ಮೂಡದಿರುವುದು ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಕಾಳು ಮೂಡದ ಸೂರ್ಯಕಾಂತಿ ಗಿಡಗಳೊಂದಿಗೆ ಮುಂಡರಗಿಯಲ್ಲಿ ಬೀದಿಗಿಳಿದ ರೈತ
ಕಾಳು ಮೂಡದ ಸೂರ್ಯಕಾಂತಿ ಗಿಡಗಳೊಂದಿಗೆ ಮುಂಡರಗಿಯಲ್ಲಿ ಬೀದಿಗಿಳಿದ ರೈತ

ಸಾಮಾನ್ಯವಾಗಿ ಬಹುತೇಕ ಕಂಪನಿಗಳು ತಲಾ ಎರಡು ಕೆ.ಜಿ. ತೂಕದ ಸೂರ್ಯಕಾಂತಿ ಬಿತ್ತನೆ ಬೀಜಗಳ ಒಂದು ಪ್ಯಾಕೆಟ್‌ಗೆ ₹2,000ರಿಂದ ₹2,500 ದರ ನಿಗದಿಗೊಳಿಸಿವೆ. ಎರಡು ಕೆ.ಜಿ. ಬೀಜಗಳನ್ನು ಒಂದು ಎಕರೆ ಜಮೀನಿನಲ್ಲಿ ಬಿತ್ತಬಹುದಾಗಿದೆ. ತಲಾ ಒಂದು ಪ್ಯಾಕೆಟ್‌ ಬಿತ್ತನೆ ಬೀಜದ ಜೊತೆಗೆ ರೈತರು ಬಿತ್ತಿದ ತಕ್ಷಣ ಒಂದು ಚೀಲ ಡಿಎಪಿ ಗೊಬ್ಬರ ನೀಡಬೇಕಾಗುತ್ತದೆ. ಒಂದು ಚೀಲ ಡಿಎಪಿಗೆ ₹1,400 ಖರ್ಚು ಮಾಡಬೇಕಿದೆ. ನಂತರ ಕಾಳು ಅಥವಾ ತೆನೆ ಹಿಡಿಯುವ ಸಂದರ್ಭದಲ್ಲಿ ಯೂರಿಯಾ  ಹಾಗೂ ಮತ್ತಿತರ ಪೋಷಕಾಂಶಗಳನ್ನು ಬೆಳೆಗೆ ನೀಡಬೇಕಾಗುತ್ತದೆ. ಕೂಲಿ ಕಾರ್ಮಿಕರ ವೇತನ, ನೀರು, ಗೊಬ್ಬರ ಹಾಗೂ ಮತ್ತಿತರ ಖರ್ಚು-ವೆಚ್ಚಗಳೆಲ್ಲ ಸೇರಿ ಒಟ್ಟು ಒಂದು ಎಕರೆ ಸೂರ್ಯಕಾಂತಿ ಬಿತ್ತನೆ ಮಾಡಲು ರೈತ ಸುಮಾರು ₹15,000ರಿಂದ ₹20,000 ಖರ್ಚು ಮಾಡಬೇಕಾಗುತ್ತದೆ.

ಅಷ್ಟೆಲ್ಲ ಖರ್ಚು ಮಾಡಿದ್ದ ರೈತರು ಈಗ ಸಂಪೂರ್ಣ ಬೆಳೆನಷ್ಟ ಅನುಭವಿಸುವಂತಾಗಿದೆ. ಸದ್ಯ ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಸೂರ್ಯಕಾಂತಿ ಬೀಜವು ₹4,600ರಿಂದ ₹4,700 ಮಾರಾಟವಾಗುತ್ತಲಿದೆ. ಸಮೃದ್ಧ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಕಳಪೆ ಗುಣಮಟ್ಟದ ಸೂರ್ಯಕಾಂತಿ ಬೀಜವನ್ನು ಬಿತ್ತಿದ್ದ ರೈತರ ಬದುಕು ಈಗ ಬೀದಿಗೆ ಬರುವಂತಾಗಿದೆ.

ತಾಲ್ಲೂಕಿನಾದ್ಯಂತ ಕೃಷಿ ಇಲಾಖೆಯು ಪ್ರಸ್ತುತ ಹಂಗಾಮಿನಲ್ಲಿ ಒಟ್ಟು 7,000 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಗುರಿ ಹೊಂದಿತ್ತು. ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಪ್ರಸ್ತುತ ವರ್ಷ ನೀರಾವರಿ ಜಮೀನಿನಲ್ಲಿ 2,500 ಹೆಕ್ಟೇರ್ ಬಿತ್ತನೆಯಾಗಿದೆ. ಒಣ ಜಮೀನಿನಲ್ಲಿ 2,100 ಹೆಕ್ಟೇರ್ ಬಿತ್ತನೆಯಾಗಿದೆ. ಸುಮಾರು 2,000 ಹೆಕ್ಟೇರ್‌ ಪ್ರದೇಶದಲ್ಲಿ ಕಳಪೆ ಗುಣಮಟ್ಟದ ಬೀಜಗಳನ್ನು ಬಿತ್ತಲಾಗಿದೆ ಎಂದು ಅಂದಾಜಿಸಲಾಗಿದೆ.

ಬೀಜ ವಿತರಣೆ ಕಂಪನಿಯಿಂದ ರೈತರಿಗೆ ಮೋಸ ಆಗಿದ್ದರೆ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶವಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
- ಎಚ್‌.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಏಪ್ರಿಲ್ ತಿಂಗಳಿನಲ್ಲಿ ಬಿತ್ತಿದ್ದ ರೈತರ ಬೆಳೆ ಫಲಿತಾಂಶ ಮಾತ್ರ ಈಗ ಲಭ್ಯವಾಗಿದೆ. ಏಪ್ರಿಲ್ ನಂತರ ಬಿತ್ತನೆ ಮಾಡಿದ ರೈತರ ಪೈರು ಸಹ ಬಹುತೇಕ ಇದೇ ರೀತಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಗ ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ತಡವಾಗಿ ಬಿತ್ತನೆ ಮಾಡಿದ ಸೂರ್ಯಕಾಂತಿ ಇನ್ನಷ್ಟೇ ಬೆಳೆದು ದೊಡ್ಡದಾಗಬೇಕಿದೆ. ಅದರ ಫಲಿತಾಂಶವೂ ಇದೇ ರೀತಿಯಾಗಿರುವ ಸಾಧ್ಯತೆ ಇದೆ ಎಂದು ರೈತರು ಹೇಳುತ್ತಿದ್ದಾರೆ.

ರೈತರಿಂದ ಸರಣಿ ಪ್ರತಿಭಟನೆ: ಕಳಪೆ ಬಿತ್ತನೆ ಬೀಜಗಳನ್ನು ಬಿತ್ತಿದ್ದರಿಂದ ಬೆಳೆ ನಷ್ಟ ಸಂಭವಿಸಿದ್ದು, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಮತ್ತು ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸಿದ ಖಾಸಗಿ ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಬೀದಿಗಿಳಿದು ಸರಣಿ ಹೋರಾಟ ಮಾಡುತ್ತಲಿದ್ದಾರೆ.

ಮುಂಡರಗಿ ರೈತರೊಬ್ಬರ ಜಮೀನಿನಲ್ಲಿ ಕಾಳು ಮೂಡದೆ ಮುದುಡಿಕೊಂಡಿರುವ ಸೂರ್ಯಕಾಂತಿ ಹೂವು
ಮುಂಡರಗಿ ರೈತರೊಬ್ಬರ ಜಮೀನಿನಲ್ಲಿ ಕಾಳು ಮೂಡದೆ ಮುದುಡಿಕೊಂಡಿರುವ ಸೂರ್ಯಕಾಂತಿ ಹೂವು

ಜೂನ್ 24ರಂದು ತಾಲ್ಲೂಕಿನ ಕೆಲವು ಗ್ರಾಮಗಳ ರೈತರು ಕಳಪೆ ಬಿತ್ತನೆ ಬೀಜ ಪೂರೈಸಿದ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಖಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಜೂನ್27 ಹಾಗೂ 30ರಂದು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಬಾಗಿಲು ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ಸಾಕಷ್ಟು ಹಣ ಖರ್ಚು ಮಾಡಿ ಬಿತ್ತಿದ್ದ ಸೂರ್ಯಕಾಂತಿಯು ಕೊನೆಯ ಹಂತದಲ್ಲಿ ಕೈಕೊಟ್ಟಿದ್ದು ಸರ್ಕಾರ ಪರಿಹಾರ ವಿತರಿಸದಿದ್ದರೆ ರೈತರ ಬದುಕು ಬೀದಿಗೆ ಬೀಳುತ್ತದೆ
- ಬಸಯ್ಯ ಎಲಿಗಾರ, ಬರದೂರು ಗ್ರಾಮದ ರೈತ
ಕಳಪೆ ಬಿತ್ತನೆ ಬೀಜ ಪೂರೈಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಯಾಂಪಲ್‌ ಸಂಗ್ರಹಿಸಿ ಬೆಂಗಳೂರಿಗೆ ಕಳಿಸಿದ್ದಾರೆ. ವರದಿ ಬಂದ ನಂತರ ಪರಿಹಾರಕ್ಕೆ ಕ್ರಮವಹಿಸಲಾಗುವುದು
- ತಾರಾಮಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ
ಸರ್ಕಾರ ರೈತರಿಗೆ ವೈಜ್ಞಾನಿಕ ಬೆಳೆಹಾನಿ ಪರಿಹಾರ ನೀಡಬೇಕು. ಕಾಟಾಚಾರಕ್ಕೆ ನೀಡಿ ಕೈ ತೊಳೆದುಕೊಂಡರೆ ಪುನಃ ರೈತರೊಂದಿಗೆ ಸೂಕ್ತ ಪರಿಹಾರ ದೊರೆಯುವವರೆಗೂ ಹೋರಾಟ ಮಾಡಲಾಗುವುದು
- ಶಿವಾನಂದ ಇಟಗಿ, ಜಿಲ್ಲಾ ರೈತ ಸಂಘ ಹಾಗೂ ಜಿಲ್ಲಾ ಹಸಿರು ಸೇನೆ ಅಧ್ಯಕ್ಷ

‘ಸಾಮಾನ್ಯವಾಗಿ ಸೂರ್ಯಕಾಂತಿಯು ಹೂವು ಅಥವಾ ತೆನೆ ಬಿಡುವ ಸಮಯದಲ್ಲಿ 'ಪೈಟೋಪ್ಲಾಸ್ಮಾ' ಎಂಬ ಸೂಕ್ಷ್ಮ ರೋಗದಿಂದ ತೆನೆಗಳು ಮುದುಡುತ್ತವೆ. ಕೆಲವು ಸಂದರ್ಭದಲ್ಲಿ ವಿಪರೀತ ಬಿಸಿಲು, ಮಳೆ ಹಾಗೂ ಚಳಿಯಿಂದಲೂ ಈ ರೀತಿಯಾಗುವ ಸಾಧ್ಯತೆ ಇರುತ್ತದೆ. ತಾಲ್ಲೂಕಿನಲ್ಲಿ ಸೂರ್ಯಕಾಂತಿ ಬೆಳೆಗೆ ತಗುಲಿರುವ ರೋಗ ಕುರಿತು ಹವಾಮಾನ ಸೇರಿದಂತೆ ಇನ್ನಿತರೆ ಎಲ್ಲ ಆಯಾಮಗಳಿಂದ ಪರಿಶೀಲನೆ ನಡೆಸಲಾಗುತ್ತದೆ. ನಿಖರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಕೃಷಿ ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿ ತಜ್ಞರು ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ಈಗಾಗಲೇ ಬೆಳೆಯನ್ನು ಪರಿಶೀಲಿಸಲಾಗಿದೆ. ಅವರ ವರದಿಯನ್ನು ಆಧರಿಸಿ ಬೆಳೆನಷ್ಟ ಅನುಭವಿಸಿದ ರೈತರಿಗೆ ಅಗತ್ಯ ಪರಿಹಾರ ವಿತರಿಸಲಾಗುವುದು.
- ವೆಂಕಟೇಶಮೂರ್ತಿ ಟಿ.ಸಿ., ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ
ಒಂದು ಪ್ಯಾಕೆಟ್‌ ಬೀಜದ ಪರಿಹಾರ!
ಕಳೆದ ವರ್ಷ ತಾಲ್ಲೂಕಿನ ಬರದೂರು ಗ್ರಾಮದ ರೈತರು ಬಿತ್ತಿದ್ದ ಸೂರ್ಯಕಾಂತಿ ಬೆಳೆಯು ಇದೇ ರೀತಿಯ ರೋಗಕ್ಕೆ ಈಡಾಗಿತ್ತು. ಬರದೂರು ಗ್ರಾಮದ ಕೆಲವು ರೈತರು ಬೆಳೆದಿದ್ದ ಸೂರ್ಯಕಾಂತಿ ಬೆಳೆಯು ಬಹುತೆನೆ (ಮಲ್ಟಿ ಹೆಡ್) ರೋಗಕ್ಕೆ ಬಲಿಯಾಗಿತ್ತು. ಸೂಕ್ತ ಪರಿಹಾರಕ್ಕಾಗಿ ಗ್ರಾಮದ ರೈತರು ಸುದೀರ್ಘ ಹೋರಾಟ ನಡೆಸಿದ್ದರು. ಹೋರಾಟದ ಫಲವಾಗಿ ರೈತರಿಗೆ ಕೇವಲ ಒಂದು ಪ್ಯಾಕೆಟ್ ಬಿತ್ತನೆ ಬೀಜ ಪೂರೈಸಲಾಗಿತ್ತು ಎಂದು ಬರದೂರು ಗ್ರಾಮದ ರೈತರು ಕಹಿ ನೆನಪನ್ನು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT