ಮುಂಡರಗಿ: ಹಳ್ಳ ದಾಟುವ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಕೊಚ್ಚಿಕೊಂಡು ಹೋಗಿ, ಮೃತಪಟ್ಟ ಘಟನೆ ತಾಲ್ಲೂಕಿನ ನಾಗರಹಳ್ಳಿ ಗ್ರಾಮದ ಬಳಿ ಬುಧವಾರ ತಡರಾತ್ರಿ ನಡೆದಿದೆ.
ಮೃತ ಯುವಕ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಏಣಗಿ ಬಸಾಪುರ ಗ್ರಾಮದ ರವಿಕುಮಾರ ಕರಬಸಪ್ಪ ಸುತಾರಿ (30) ಎಂದು ಗುರುತಿಸಲಾಗಿದೆ.
ರವಿಕುಮಾರ ಹಾಗೂ ಮಂಜಪ್ಪ ಬೊಮ್ಮಸಂದ್ರ ಅವರು ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ತಾಲ್ಲೂಕಿನ ನಾಗರಳ್ಳಿ ಹಾಗೂ ಬೆಣ್ಣಿಹಳ್ಳಿ ಗ್ರಾಮಗಳ ಮಧ್ಯದಲ್ಲಿರುವ ಹಳ್ಳ ದಾಟುತ್ತಿದ್ದರು. ಆಗ ನೀರಿನ ರಭಸಕ್ಕೆ ಬೈಕ್ ಹಾಗೂ ಸವಾರರಿಬ್ಬರೂ ಹಳ್ಳದಲ್ಲಿ ಬಿದ್ದಿದ್ದಾರೆ. ಹಿಂಬದಿಯ ಸವಾರ ಮಂಜಪ್ಪನು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರವಿಕುಮಾರನನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಆದರೆ, ನೀರಿನ ರಭಸಕ್ಕೆ ರವಿಕುಮಾರನು ನೀರಿನಲ್ಲಿ ಕೊಚ್ಚಿಹೋಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ, ಹಳ್ಳದಲ್ಲಿ ಕೊಚ್ವಿಹೋಗಿದ್ದ ರವಿಕುಮಾರ ಮೃತದೇಹಕ್ಕಾಗಿ ಹುಡುಕಾಡಿದ್ದಾರೆ. ಗುರುವಾರ ಬೆಳಿಗ್ಗೆ 10 ಗಂಟೆಗೆ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ.
ಯುವಕನೊಬ್ಬ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮುಂಡರಗಿ ಪಟ್ಟಣ ಸೇರಿದಂತೆ ಬೆಣ್ಷಿಹಳ್ಳಿ, ನಾಗರಹಳ್ಳಿ, ಮಕ್ತುಂಪೂರ, ಕೊರ್ಲಹಳ್ಳಿ ಮೊದಲಾದ ಗ್ರಾಮಗಳ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಅರಬಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿಗೆ ಮುಳ್ಳಿನ ಗಿಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.
‘ನಾಗರಳ್ಳಿ- ಬೆಣ್ಣಿಹಳ್ಳಿ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಹಳ್ಳಕ್ಕೆ ಕಿರುಸೇತುವೆ ನಿರ್ಮಿಸದೆ ಇರುವುದರಿಂದ ಇಲ್ಲಿ ಪ್ರತಿವರ್ಷ ಸಾಕಷ್ಟು ಜನರು ಸಾಯುತ್ತಿದ್ದಾರೆ. ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೂ ಇಲ್ಲಿ ಸರ್ಕಾರ ಸೇತುವೆ ನಿರ್ಮಿಸುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
ನಂತರ ತಹಶೀಲ್ದಾರ್ ಪಿ.ಎಸ್.ಎರ‍್ರಿಸ್ವಾಮಿ ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. 20 ದಿನದೊಳಗೆ ಬೃಹತ್ ಪೈಪುಗಳ ಮೂಲಕ ಹಳ್ಳದ ನೀರು ಸರಾಗವಾಗಿ ಹರಿದು ಹೋಗಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. ವರ್ಷದೊಳಗೆ ಹಳ್ಳಕ್ಕೆ ಶಾಶ್ವತವಾಗಿ ಕಿರು ಸೇತುವೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ರಸ್ತೆಯನ್ನು ತೆರವುಗೊಳಿಸಿದರು.
ಬಸವರಾಜ ರಾಮೇನಹಳ್ಳಿ, ಜಗದೀಶ ಅಡರಗಟ್ಟಿ, ಅಣ್ಣಪ್ಪ ಪಾಟೀಲ, ವೆಂಕಟೇಶ ಇಟಗಿ, ರಾಮನಗೌಡ ಹೊರಗಿನಮನಿ, ಕೊಟ್ರೇಶ ನಾಗರಳ್ಳಿ, ಶೀರಪ್ಪ ಲಕ್ಕುಂಡಿ ಇದ್ದರು.
Highlights - ನಾಗರಹಳ್ಳಿ ಗ್ರಾಮದ ಬಳಿಯ ಹಳ್ಳದಲ್ಲಿ ಘಟನೆ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಹೋದ ಯುವಕ ಗುರುವಾರ ಬೆಳಿಗ್ಗೆ 10 ಗಂಟೆಗೆ ಮೃತದೇಹ ಪತ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.