ಗದಗ/ಬೆಳಗಾವಿ: ‘ನಾವೇನು ಶಾಸಕ ಮುನಿರತ್ನ ಅವರು ದಲಿತ ವಿರೋಧಿ ಎಂದಿಲ್ಲ. ಮಾಧ್ಯಮಗಳು ಬಿತ್ತರಿಸಿದ ವಿಷಯದ ಮೇಲೆ ನಂಬಿಕೆ ಇಟ್ಟು ಅವರ ಕ್ರಮ ಸರಿಯಲ್ಲ ಅಂತ ಹೇಳಿದ್ದೇವೆ. ಜಾತಿ ನಿಂದನೆ ಘೋರ ಅಪರಾಧ. ಅದರಲ್ಲೂ ಶಾಸಕನಾಗಿ ಹೇಳಿದ್ದು ಸರಿಯಲ್ಲ. ಮುನಿರತ್ನ ಹೇಳಿಕೆಯನ್ನು ಸಮರ್ಥಿಸಲು ಬಿಜೆಪಿಗೆ ನೈತಿಕತೆ ಇಲ್ಲ’ ಎಂದು ಸಚಿವ ಎಚ್.ಕೆ.ಪಾಟೀಲ ಟೀಕಿಸಿದರು.
‘₹20 ಲಕ್ಷ ಕೊಡಬೇಕು ಅಂತ ಹೇಳಿ ಅವರು ಗೌರವಾನ್ವಿತರು ಮಾತನಾಡುವ ಮಾತು ಆಡಿಲ್ಲ. ಅದನ್ನು ರೆಕಾರ್ಡ್ ಮಾಡಿಕೊಂಡು ಮಾಧ್ಯಮದ ಮೂಲಕ ದೇಶಕ್ಕೆ ತಿಳಿಸಿದ್ದಾರೆ. ಮುನಿರತ್ನ ಅವರಿಗೆ ನೋಟಿಸ್ ಕೊಡುವುದಕ್ಕಿಂತ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡುತ್ತೇವೆ ಎಂದು ಬಿಜೆಪಿ ಹೇಳಬೇಕಿತ್ತು. ಅಮಾನತು ಮಾಡದೇ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
‘ಸರ್ಕಾರ ಜನರ ಪರ ಇರಬೇಕೋ, ಶಾಸಕರ ಪರ ಇರಬೇಕೋ? ಇಷ್ಟೆಲ್ಲಾ ಮಾಡಿದರೆ ಅರೆಸ್ಟ್ ಮಾಡದೇ ಇರಬೇಕಿತ್ತಾ? ಕಾನೂನಿನ ಪ್ರಕಾರ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ. ಆದರೆ, ಷಡ್ಯಂತ್ರ ಎನ್ನುವ ಮೂಲಕ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ’ ಎಂದರು.
ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ಬಾಯಿಗೆ ಬಂದಂತೆ ಮಾತನಾಡಲು ಶಾಸಕ ಮುನಿರತ್ನ ಅವರಿಗೆ ನಾವು ಹೇಳಿದ್ದೆವಾ? ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನವರು ಹೇಳಿದ್ದರಾ’ ಎಂದು ಪ್ರಶ್ನಿಸಿದರು.
‘ಮುನಿರತ್ನ ಬಂಧನದಲ್ಲಿ ದ್ವೇಷದ ರಾಜಕಾರಣವಿಲ್ಲ. ತರಾತುರಿಯಲ್ಲಿ ನಾವು ಯಾರನ್ನೂ ಬಂಧಿಸಿಲ್ಲ’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿ, ‘ಮುನಿರತ್ನ ಬಂಧಿಸಲು ಯಾರು ದ್ವೇಷದ ರಾಜಕಾರಣ ಮಾಡುತ್ತಾರೆ? ಬೈಯಿರಿ ಅಥವಾ ಬ್ಲ್ಯಾಕ್‌ಮೇಲ್ ಮಾಡಿ ಎಂದು ಕಾಂಗ್ರೆಸ್ ನಾಯಕರು ಅವರಿಗೆ ಹೇಳಿದ್ದಾರಾ? ಮಾಡಿದ್ದುಣ್ಣೋ ಮಾರಾಯ ಎನ್ನುವ ಸ್ಥಿತಿ ಅವರದ್ದು’ ಎಂದರು.
‘ಮಹಿಳೆಯರ ಬಗ್ಗೆ ಮುನಿರತ್ನ ಆಡಿದ ಕೀಳು ಮಾತುಗಳನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಜಾತಿ, ಜಾತಿಗಳ ಮಧ್ಯೆ ಸಂಘರ್ಷ ತರುವಂತಹ ಮಾತುಗಳನ್ನು ಯಾರೂ ಆಡಬಾರದು’ ಎಂದರು.
ಎನ್‌ಐಎಗೆ ವಹಿಸುವ ಚಿಂತನೆ ಇಲ್ಲ: ಪಾಟೀಲ
ಬೆಳಗಾವಿ : ‘ನಾಗಮಂಗಲ ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಪಾತ್ರ ಇದೆ’ ಎಂಬ ಆರೋಪಕ್ಕೆ ಭಾನುವಾರ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ.ಪಾಟೀಲ ‘ನಾಗಮಂಗಲ ಇರಲಿ ಯಾವುದೇ ಪ್ರದೇಶ ಇರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವುದೇ ಸರ್ಕಾರದ ಸಂಕಲ್ಪ. ದೊಡ್ಡ ನಟ ಇರಲಿ ಸಣ್ಣ ನಟ ಇರಲಿ. ಯಾರೂ ಕಾನೂನಿಗೆ ಮೀರಿದವರಲ್ಲ. ಕೋಲಾರಕ್ಕೆ ಹೋಗಿ ಶಾಸಕರನ್ನೇ ಹಿಡಿದುಕೊಂಡು ಬಂದರು. ನಮ್ಮ ಪೊಲೀಸರು ಸಮರ್ಥರಿದ್ದಾರೆ. ಈ ಪ್ರಕರಣವನ್ನು ಎನ್‌ಐಎಗೆ ವಹಿಸುವ ಯಾವುದೇ ಚಿಂತನೆ ಇಲ್ಲ’ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯ ನಾಗಮಂಗಲದ ಗಲಾಟೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಕುರಿತು ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ‘ರಾಜ್ಯದಲ್ಲಿ 60 ಸಾವಿರ ಗಣಪನ ಮೂರ್ತಿಗಳಿವೆ. ಒಂದು ಕಡೆ ಆಕಸ್ಮಿಕವಾಗಿ ಇಂಥ ಘಟನೆ ನಡೆದಿರಬಹುದು. ಪೊಲೀಸರು ಆ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುತ್ತಾರೆ. ಇವರ‍್ಯಾಕೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.