ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಕಥನ’ ಗದ್ಯ ಮಹಾಕಾವ್ಯ’

ಡಿ.ಎಸ್‌.ನಾಗಭೂಷಣ ಅವರ ಕೃತಿಯ ನಾಲ್ಕು ಸಾವಿರ ಪ್ರತಿಗಳ ಬಿಡುಗಡೆ
Last Updated 14 ಅಕ್ಟೋಬರ್ 2020, 3:25 IST
ಅಕ್ಷರ ಗಾತ್ರ

ಗದಗ: ‘ಗಾಂಧಿ ಕಥನ’ ಆಧುನಿಕ ಕನ್ನಡದ ಮೊದಲ ಗದ್ಯ ಮಹಾಕಾವ್ಯ. ಇದರಲ್ಲಿ ನಾಯಕ, ಪ್ರತಿನಾಯಕ ಯಾರೂ ಇಲ್ಲ. ಸಾಮುದಾಯಿಕ ಸಹಭಾಗಿತ್ವವೇ ಈ ಕಥನದ ಅತ್ಯಂತ ಮುಖ್ಯ ಲಕ್ಷಣ’ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ ಹೇಳಿದರು.

ಗದಗ ನಗರದ ಹೊರವಲಯದಲ್ಲಿರುವ ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಮಂಗಳವಾರ ನಡೆದ ಡಿ.ಎಸ್‌.ನಾಗಭೂಷಣ ಅವರ ‘ಗಾಂಧಿ ಕಥನ’ ಕೃತಿಯ ನಾಲ್ಕು ಸಾವಿರ ಪ್ರತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಪುಸ್ತಕ ಪರಿಚಯ ಮಾಡಿ ಮಾತನಾಡಿದರು.

‘ವಿದ್ಯಾ ಸಂಸ್ಥೆಯ ಆವರಣದಲ್ಲಿ ಒಂದು ಕೃತಿಯ ನಾಲ್ಕು ಸಾವಿರ ಪ್ರತಿಗಳು ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವುದೇ ಒಂದು ಚಾರಿತ್ರಿಕ ವಿದ್ಯಮಾನ. ಮುದ್ರಣ ಪ್ರಪಂಚದ ಚರಿತ್ರೆಯಲ್ಲೂ ಇದು ಮಹತ್ವದ್ದು’ ಎಂದು ಹೇಳಿದರು.

‌‘ಜನರಿಗೆ ಕುಕ್ಕರ್‌, ಬಣ್ಣದ ಟೀವಿ, ಸೀರೆಗಳನ್ನು ಕೊಡುವವರು ರಾಜ ಕಾರಣಿಗಳು. ಆದರೆ, ಜನತೆಗೆ ಪುಸ್ತಕ ಗಳನ್ನು ಓದಲು ಕೊಡುವವರು ಮುತ್ಸದ್ದಿ ಗಳು. ಶಾಸಕ ಎಚ್‌.ಕೆ.ಪಾಟೀಲರು ಅಂತಹ ಮುತ್ಸದ್ದಿ’ ಎಂದು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿದ ಶಾಸಕ ಎಚ್‌.ಕೆ.ಪಾಟೀಲ ಮಾತನಾಡಿ, ‘ಗಾಂಧೀಜಿ ಕುರಿತಂತೆ ನಮ್ಮೊಳಗೆ ಇರುವ ಅನೇಕ ಪ್ರಶ್ನೆಗಳಿಗೆ ‘ಗಾಂಧಿ ಕಥನ’ ಉತ್ತರ ರೂಪದಂತಿದೆ ಎಂದರು.

‘ದೇಶದ ಶೇ 80ರಷ್ಟು ಜನರಿಗೆ ಗಾಂಧಿ ತತ್ವ ಆದರ್ಶನಗಳನ್ನು ಬೋಧಿಸುವ ಅವಶ್ಯಕತೆ ಇಲ್ಲ. ಪ್ರಾಮಾಣಿಕತೆಯಿಂದ ಜೀವನ ನಡೆಸುತ್ತಿರುವವರೆಲ್ಲರಿಗೂ ಗಾಂಧೀಜಿಯನ್ನು ಪರಿಚಯಿಸಬೇಕು ಅಷ್ಟೇ. ಉಳಿದಂತೆ, ಶೇ 20ರಷ್ಟು ಇರುವ ಮೇಲ್ವರ್ಗ, ಆಡಳಿತ ಮಾಡುವ ಜನರು, ಸಂಪತ್ತಿನ ಸುಪ್ಪತ್ತಿಗೆಯಲ್ಲಿ ತೇಲುವವರಿಗೆ ಗಾಂಧೀಜಿಯನ್ನು ಹೆಚ್ಚು ಅರ್ಥ್ಯಸಿಕೊಡಬೇಕಿದೆ. 11.11.2020ಕ್ಕೆ ಗಾಂಧಿ ಅವರು ಗದಗಕ್ಕೆ ಭೇಟಿ ನೀಡಿ ನೂರು ವರ್ಷಗಳು ತುಂಬಲಿದ್ದು, ಈ ಸಂದರ್ಭವನ್ನು ವಿಶೇಷವಾಗಿ ಆಚರಿ ಸಲು ಯೋಜಿಸಲಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಂಶುಪಾಲ ಡಾ. ಚಂದ್ರಶೇಖರ ವಸ್ತ್ರದ ಮಾತನಾಡಿ, ‘ಗಾಂಧೀಜಿ ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳು ಬಹುಮುಖ್ಯ ಪಾತ್ರವಹಿಸಿವೆ. ಗಾಂಧಿ ಕಥನ ಪುಸ್ತಕದ ವಾಚನ ಪ್ರಕ್ರಿಯೆ ಆರಂಭಗೊಳ್ಳಬೇಕು. ಹದಿಹರೆಯದ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ವಾರಕ್ಕೊಮೆಯಾದರೂ ಗಾಂಧಿ ಕಥನ ವಾಚನದಲ್ಲಿ ಪಾಲ್ಗೊಳ್ಳಬೇಕು. ಗಾಂಧಿ ಓದಿನ ಮೂಲಕವಾದರೂ ಬದಲಾವಣೆಗಳು ಕಾಣುವಂತಾಗಬೇಕು’ ಎಂದು ಹೇಳಿದರು.‌

ಮಾಜಿ ಶಾಸಕ ಡಿ.ಆರ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಸ್ತಕದ ಪ್ರಕಾಶಕ ಎಂ.ಸಿ.ನರೇಂದ್ರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಉಪಾಧ್ಯಕ್ಷೆ ಶೋಭಾ ಮೇಟಿ, ಆರ್‌ಡಿಪಿಆರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌.ಚಟಪಲ್ಲಿ ಇದ್ದರು.

‘ಗಾಂಧಿ ಜೀವಂತ ಜಲನಿಧಿ’

ಸಾಹಿತ್ಯ ವಿಮರ್ಶಕ ಡಿ.ಎಸ್‌.ನಾಗಭೂಷಣ ಮಾತನಾಡಿ, ‘ಬಗೆದಷ್ಟೂ ಜಲ ಚಿಮ್ಮುವ ಜೀವಂತ ಜಲನಿಧಿ ಗಾಂಧೀಜಿ. ಅವರ ವಿಚಾರಗಳು ನಿತ್ಯ ನೂತನ. ಗಾಂಧಿ ಚಿಂತನೆಯ ಮೂಲ ಇರುವುದು ಹಿಂದ್‌ ಸ್ವರಾಜ್‌ನಲ್ಲಿ. ಗಾಂಧೀಜಿ ಅವರು ಗ್ರಾಮ ಅಂದರೆ ಹಳ್ಳಿ ಎಂಬ ಅರ್ಥದಲ್ಲಿ ಹೇಳಿಲ್ಲ. ಸಣ್ಣ ಸಮುದಾಯ ಇರುವ ಎಂಬರ್ಥದಲ್ಲಿ ಹೇಳಿದರು. ಸಣ್ಣ ಸಣ್ಣ ಸಮುದಾಯಗಳನ್ನು ಸಂಘಟನೆ ಮಾಡುವ ಮೂಲಕ ತಮ್ಮನ್ನು ತಾವು ಆಳಿಕೊಳ್ಳುವಂತೆ ಮಾಡಬೇಕು ಎಂಬುದು ಅದರ ಅರ್ಥವಾಗಿತ್ತು. ಇಂದಿನ ರಾಜಕಾರಣಿಗಳು ಗ್ರಾಮ ಸ್ವರಾಜ್ಯದತ್ತ ಚಿಂತಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT