ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌; ಗದಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

ಜಿಲ್ಲೆಗೆ ಸಿಗದ ವಿಶೇಷ ಪ್ಯಾಕೇಜ್‌; ಕೈಗೂಡದ ಕೈಗಾರಿಕೆಗಳ ಸ್ಥಾಪನೆ ಕನಸು
Published 7 ಜುಲೈ 2023, 16:12 IST
Last Updated 7 ಜುಲೈ 2023, 16:12 IST
ಅಕ್ಷರ ಗಾತ್ರ

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ವಿಶೇಷ ಯೋಜನೆಗಳು ಘೋಷಣೆ ಆಗಿಲ್ಲ. ಇದು ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.

ಆದರೆ, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಜನತೆಗೆ ನೀಡಿದ್ದ ಗ್ಯಾರಂಟಿಗಳ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವುದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಸಿಕ್ಕಿರುವುದು ಹೊಸ ನಿರೀಕ್ಷೆಗಳನ್ನು ಮೂಡಿಸಿದೆ.

ಜಿಲ್ಲೆಗೆ ಸಿಕ್ಕಿದ್ದೇನು?

ಗದಗ ಜಿಲ್ಲೆಯ ಲಕ್ಕುಂಡಿ, ಮಾಗಡಿ ಪಕ್ಷಿಧಾಮ, ಕಪ್ಪತ್ತಗುಡ್ಡವನ್ನು ಪ್ರವಾಸೋದ್ಯಮ ತಾಣಗಳನ್ನಾಗಿ ಸಮಗ್ರವಾಗಿ ಅಭಿವೃದ್ದಿ ಪಡಿಸುವುದಾಗಿ ಘೋಷಿಸಿದ್ದಾರೆ. ಜತೆಗೆ ಗದಗ ನಗರದ ಸರ್ಕಾರಿ ವಸ್ತು ಸಂಗ್ರಹಾಲಯ ಅಭಿವೃದ್ದಿಗೆ ಬಜೆಟ್‌ನಲ್ಲಿ ಆದ್ಯತೆ ಸಿಕ್ಕಿದೆ.

‘ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು ₹770 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಈ ಯೋಜನೆಯಲ್ಲಿ ಗದಗ ಜಿಲ್ಲೆಯ ಜತೆಗೆ ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಬೀದರ್‌, ಉತ್ತರಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳೂ ಸೇರಿದ್ದು, ಒಟ್ಟು 899 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಹೇಳಿದ್ದಾರೆ. ಇದರಲ್ಲಿ ಗದಗ ಜಿಲ್ಲೆಯ ಎಷ್ಟು ಕೆರೆಗಳಿಗೆ ನೀರು ತುಂಬಿಸುತ್ತಾರೆ ಎಂದು ಕಾದುನೋಡಬೇಕಿದೆ.

‘ಜಲಸಂಪನ್ಮೂಲ ಇಲಾಖೆಯ ವತಿಯಿಂದ ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 899 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಗದಗ ಜಿಲ್ಲೆಯ ಎಲ್ಲಾ ದೊಡ್ಡ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜಾಲನೆ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.

‘ಗದಗ ವೈದ್ಯಕೀಯ ಕಾಲೇಜಿನ 450 ಹಾಸಿಗೆಗಳ ಆಸ್ಪತ್ರೆಯ ಬಾಕಿ ಉಳಿದಿರುವ ಮೂಲಸೌಕರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಉದ್ದೇಶಕ್ಕಾಗಿ ಅಗತ್ಯ ಇರುವ ಹಣಕಾಸನ್ನು ಒದಗಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣಕ್ಕೆ ಈ ಬಜೆಟ್‌ನಲ್ಲಿ ₹80 ಕೋಟಿ ಮೀಸಲಿಟ್ಟಿದ್ದು ಅದರಲ್ಲಿ ದೇವನಹಳ್ಳಿ, ಕೋಲಾರ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಬೀದರ್‌, ಯಾದಗಿರಿ ಮತ್ತು ದಾವಣಗೆರೆ ಜತೆಗೆ ಗದಗ ನಗರವೂ ಸೇರಿದೆ.

ಮಹದಾಯಿ ನ್ಯಾಯಾಧೀಕರಣದಿಂದ ಕಳಸಾ ಬಂಡೂರಿ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ 3.90 ಟಿಎಂಸಿ ಅಡಿ ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ಅನುಮತಿ ದೊರಕಿದ್ದು, ಅವಶ್ಯವಿರುವ ಅರಣ್ಯ ತೀರುವಳಿ ಪಡೆದು, ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಹುಸಿಯಾದ ವಿಶೇಷ ಪ್ಯಾಕೇಜ್‌:

ಗದಗ ಜಿಲ್ಲೆ ರಜತ ಮಹೋತ್ಸವ ಸಂಭ್ರಮದಲ್ಲಿದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂಬುದು ಜಿಲ್ಲೆಯ ಜನರ ಆಶಯವಾಗಿತ್ತು. ಆದರೆ, ಜನರ ನಿರೀಕ್ಷೆಗಳು ಹುಸಿಯಾಗಿದ್ದು, ಪ್ಯಾಕೇಜ್‌ ಘೋಷಣೆಯಾಗಿಲ್ಲ.

ಜವಳಿ ಪಾರ್ಕ್‌, ಫುಡ್‌ ಪಾರ್ಕ್‌ಗೆ ಸಿಗದ ಬೆಂಬಲ:

ಗದಗ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿ ಆಧರಿತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು ಎಂಬುದು ಜನರ ಆಗ್ರಹವಾಗಿತ್ತು. ಫುಡ್‌ ಪಾರ್ಕ್‌ ಸ್ಥಾಪನೆ ಆಗುವುದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಜತೆಗೆ ರೈತರಿಗೆ ಉತ್ತಮ ಬೆಲೆಯೂ ಸಿಗುತ್ತಿತ್ತು. ಅದೇರೀತಿ, ನೇಕಾರಿಕೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಜವಳಿ ಪಾರ್ಕ್‌ ಸ್ಥಾಪನೆ ಮಾಡಬೇಕು ಎಂಬ ಜನರ ಆಗ್ರಹಕ್ಕೆ ಮನ್ನಣೆ ಸಿಕ್ಕಿಲ್ಲ.

Quote - ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವುದು ಜನಪರ ಬಜೆಟ್. ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಮುಂಗಡಪತ್ರದಲ್ಲಿ ಪ್ರಕಟಿಸಿ ಕಾಂಗ್ರೆಸ್ ಪಕ್ಷದ ಬದ್ದತೆಯನ್ನು ಸ್ಷಷ್ಟವಾಗಿ ವ್ಯಕ್ತಪಡಿಸಲಾಗಿದೆ ಎಚ್‌.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT