ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸಂಘಟನೆಗೆ ಒತ್ತು ನೀಡಿ: ಸಚಿವ

ಗದಗ ಜಿಲ್ಲಾ ಬಿಜೆಪಿ ಘಟಕದ ನೂತನ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಪದಗ್ರಹಣ ಸಮಾರಂಭ
Last Updated 27 ಜೂನ್ 2022, 16:29 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಸಮಯ ಮೀಸಲಿಡಬೇಕು. ಸಂಘಟನೆ ಕಾರ್ಯ ಅತ್ಯಂತ ಚುರುಕಿನಿಂದ ನಡೆಯಬೇಕು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಗದಗ ಜಿಲ್ಲಾ ಬಿಜೆಪಿ ಘಟಕದ ನೂತನ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಅಲಂಕಾರಿಕ ಹುದ್ದೆಯಲ್ಲ. ಯಾವುದೇ ಕಾರಣಕ್ಕೂ ವ್ಯಕ್ತಿಗತ ನಿರ್ಧಾರ ತೆಗೆದುಕೊಳ್ಳಬಾರದು. ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಚುನಾವಣೆಗೆ ವರ್ಷ ಇರುವಾಗಲೇ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪಕ್ಷದ ಸಂಘಟನೆಗೆ ಖರ್ಚು ವೆಚ್ಚಗಳು ಇರುತ್ತವೆ. ಹಾಗಂತ ತಪ್ಪು ದಾರಿ ತುಳಿಯವಂತಿಲ್ಲ. ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಚಿವರು, ಶಾಸಕರು ಸಹಕಾರ ನೀಡುತ್ತೇವೆ. ಮುಖ್ಯವಾಗಿ ಹಣಕಾಸಿನ ವಿಷಯದಲ್ಲಿ ಕಟ್ಟುನಿಟ್ಟು ಪಾಲಿಸಬೇಕು’ ಎಂದು ನಿರ್ದೇಶನ ನೀಡಿದರು.

ರೋಣ ಮತಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ‘ಪ್ರತಿ ಹಂತದಲ್ಲೂ ಜಾತಿ ಸಮೀಕರಣಕ್ಕೆ ಆದ್ಯತೆ ನೀಡಬೇಕು. ವ್ಯಕ್ತಿ ನಿಷ್ಠೆ, ವ್ಯಕ್ತಿ ಪೂಜೆ ಸಲ್ಲದು. ಸಂಘಟನೆಯಲ್ಲಿ ಎಲ್ಲ ಜಾತಿ ಜನಾಂಗದವರಿಗೆ ಅವಕಾಶ ಕಲ್ಪಿಸಬೇಕು. ಗುಂಪುಗಾರಿಕೆ, ಜಾತೀಯತೆ ಮಾಡಿದರೆ ಪಕ್ಷಕ್ಕೆ ಭಾರಿ ಹೊಡೆತ ಬೀಳಲಿದೆ. ಇಂತಹ ಸೂಕ್ಷ್ಮ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ಶಾಸಕ ರಾಮಣ್ಣ ಲಮಾಣಿ, ನಿಕಟಪೂರ್ವ ಅಧ್ಯಕ್ಷ ಮೋಹನ ಮಾಳಶೆಟ್ಟಿ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮುಖಂಡರಾದ ಎಂ.ಎಸ್.ಕರೀಗೌಡ್ರ, ರವೀಂದ್ರ ದಂಡಿನ, ಭೀಮಸಿಂಗ್ ರಾಠೋಡ, ಹೇಮಗಿರೀಶ ಹಾವಿನಾಳ, ರೇಖಾ ಅಳವಂಡಿ, ವಿಜಯಕುಮಾರ ಗಡ್ಡಿ, ರಾಜು ಕುರಡಗಿ, ಸಂಗಮೇಶ ದುಂದೂರ, ಶ್ರೀಕಾಂತ ಖಟವಟೆ ಇದ್ದರು.

ಮಾಧವ ಗಣಾಚಾರಿ ನಿರೂಪಿಸಿದರು. ರಾಘವೇಂದ್ರ ಯಳವತ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT