ಮಂಗಳವಾರ, ಮಾರ್ಚ್ 21, 2023
29 °C
‘ನಾ ನಾಯಕಿ’ ಅರ್ಥ ಗೊತ್ತಾಗಲಿಲ್ಲ; ಸಚಿವ ಸಿ.ಸಿ.ಪಾಟೀಲ ಲೇವಡಿ

ಪ್ರಿಯಾಂಕಾರಿಂದ ಕಾಂಗ್ರೆಸ್‌ ಒಂದಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ನಾ ನಾಯಕಿ’ ಅರ್ಥ ಏನು ಅಂತ ನನಗೆ ಅರ್ಥ ಆಗಿಲ್ಲ. ಕಾಂಗ್ರೆಸ್‌ನವರಿಗೆ ಅರ್ಥ ಆಗಿದೆಯೋ, ಬಿಟ್ಟಿದೆಯೋ ಗೊತ್ತಿಲ್ಲ’ ಎಂದು ಸಚಿವ ಸಿ.ಸಿ.ಪಾಟೀಲ ಲೇವಡಿ ಮಾಡಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ನಾನೇ ನಾಯಕಿ ಎಂದು ಹೇಳಿಕೊಳ್ಳುವ ಟೈಟಲ್‌ನೊಂದಿಗೆ ಕಾರ್ಯಕ್ರಮ ಮಾಡುವುದು ಹಾಸ್ಯಸ್ಪದ ಅನಿಸುತ್ತದೆ. ಇರಲಿ, ಅದು ಅವರ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ಅವರು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಆಗಮನದಿಂದಲಾದರೂ ಒಡೆದ ಕಾಂಗ್ರೆಸ್‌ ಒಂದಾಗಿ, ಸದೃಢ ವಿರೋಧ ಪಕ್ಷವಾಗಿ ಕೆಲಸ ಮಾಡಲಿ ಎಂಬುದು ನಮ್ಮ ಆಶಯ’ ಎಂದು ಹೇಳಿದರು.

‘ಪ್ರಿಯಾಂಕಾ ಗಾಂಧಿ ಬುದ್ಧಿವಂತ ಸಹೋದರಿ. ಅವರು ರಾಹುಲ್‌ ಗಾಂಧಿ ಕಂಡಂತೆ ಕನಸು ಕಾಣುವುದಿಲ್ಲ ಅಂತ ಭಾವಿಸಿದ್ದೇನೆ’ ಎಂದರು.

ಪ್ರಜಾಧ್ವನಿ ಯಾತ್ರೆ ವಿಷಯ ಪ್ರಸ್ತಾಪಿಸಿದ ಅವರು, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಜಾಧ್ವನಿ ಬಸ್‌ಯಾತ್ರೆಯಿಂದ ಬಿಜೆಪಿಗೆ ಆತಂಕ ಇಲ್ಲ. ಈ ಮೊದಲು ಇಬ್ಬರೂ ಬೇರೆ ಬೇರೆ ಬಸ್‌ ಯಾತ್ರೆ
ಕೈಗೊಳ್ಳುವುದಿತ್ತು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಧ್ಯ ಪ್ರವೇಶದಿಂದ ಇಬ್ಬರೂ ಒಂದೇ ಬಸ್‌ನಲ್ಲಿ ಹೋಗುತ್ತಿದ್ದಾರೆ’ ಎಂದು ಹಾಸ್ಯಾಸ್ಪದ ಮಾಡಿದರು.

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘224 ಕ್ಷೇತ್ರಗಳಲ್ಲಿ ಅವರು ಎಲ್ಲಿ ಬೇಕಾದರೂ ನಿಲ್ಲಬಹುದು. ಅದು ಅವರ ಇಷ್ಟಕ್ಕೆ ಬಿಟ್ಟ ವಿಷಯ. ಆದರೆ, 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುತ್ತೇನೆ ಎನ್ನುವವರು, ಇನ್ನೂ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವುದು ವಿಪರ್ಯಾಸ. ಸಿದ್ದರಾಮಯ್ಯ ಅವರಿಗೆ ನಿರ್ದೇಶನ ಕೊಡುವಷ್ಟು ಕಾಂಗ್ರೆಸ್‌ ಹೈಕಮಾಂಡ್‌ ಪ್ರಬಲವಾಗಿಲ್ಲ. ಅವರೇ ಹೈಕಮಾಂಡ್‌ಗೆ ನಿರ್ದೇಶನ ನೀಡುವಷ್ಟು ಬಲಿಷ್ಠರಾಗಿದ್ದಾರೆ’ ಎಂದರು.

ಪ್ರಿಯಾಂಕಾ ಗಾಂಧಿಗೆ ಕನ್ನಡ ಬರಲ್ಲ. ಸಮಾವೇಶಕ್ಕೆ ‘ನಾ ನಾಯಕಿ’ ಎಂಬ ಹೆಸರನ್ನು ಕೆಪಿಸಿಸಿಯವರು ಇಟ್ಟಿರಬೇಕು. ಅದರ ಹಿಂದಿನ ಅರ್ಥ ಏನೆಂದು ನನಗಂತೂ ಗೊತ್ತಾಗಿಲ್ಲ.

ಸಿ.ಸಿ.ಪಾಟೀಲ, ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು