ಮಂಗಳವಾರ, ಜೂನ್ 22, 2021
29 °C
ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಗದಗ ಜಿಲ್ಲಾ ಕಾಂಗ್ರೆಸ್‌ ಘಟಕ ಆಗ್ರಹ

ಬೆಡ್‌, ಆಮ್ಲಜನಕ ಶೀಘ್ರ ಪೂರೈಸಿ:ಎಚ್‌.ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಕೋವಿಡ್‌ ರೋಗಿಗಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಕ್ಷಣಕ್ಕೆ ಬೆಡ್‌ಗಳು ಸಿಗುತ್ತಿಲ್ಲ. ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನು ಜಿಮ್ಸ್‌ನಲ್ಲಿ ದಾಖಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಕ್ಷಣವೇ ಹೆಚ್ಚಿನ ಬೆಡ್‌ಗಳ ವ್ಯವಸ್ಥೆ ಮಾಡಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಆಗ್ರಹಿಸಿದರು.

ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಘಟಕದ ಮುಖಂಡರ ಜತೆಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಅವರನ್ನು ಭೇಟಿ ಮಾಡಿ ಗದಗ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರು ಚರ್ಚಿಸಿದರು.

‘ಜಿಲ್ಲೆಯ ಮುಂಡರಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲದ ಕಾರಣ ಸೋಮವಾರ ನಾಲ್ಕು ಮಂದಿ ಕೋವಿಡ್‌ ರೋಗಿಗಳು ಸಾವನ್ನಪ್ಪಿದ್ದಾರೆ. ಅವರ ಸಾವು ಹೃದಯ ವಿದ್ರಾವಕವಾದುದು. ಈ ಘಟನೆ ಗದಗ ಜಿಲ್ಲೆಯಲ್ಲಿ ನಡೆಯಬಾರದಿತ್ತು, ಆದರೂ ನಡೆದಿದೆ. ಈ ಘಟನೆಯು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಆಮ್ಲಜನಕ ಪೂರೈಕೆ ಗಂಭೀರ ಸ್ಥಿತಿ ತಲುಪಿದೆ. ಜಿಮ್ಸ್‌ನಲ್ಲಿ ಭಾನುವಾರ ರಾತ್ರಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇವರ ದಯೆಯಿಂದ ಸಮಸ್ಯೆ ಪರಿಹಾರವಾಯಿತು. ಹೆಚ್ಚು ಕಡಿಮೆ ಆಗಿದ್ದರೆ ಏನು ಗತಿ?’ ಎಂದು ಆತಂಕ ವ್ಯಕ್ತಪಡಿಸಿದರು.

‘ಮುಂದೆಯೂ ಅಂತಹದ್ದೇ ಸ್ಥಿತಿ ಉದ್ಭವಿಸಬಹುದು. ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಭಯ ಕಾಡುತ್ತಿದೆ. ಪೂರೈಕೆದಾರರು ಉತ್ಪಾದಕ ಸ್ಥಳದಲ್ಲಿ ಟ್ಯಾಂಕರ್ ತುಂಬುವುದರಲ್ಲಿಯೇ ಭಾರಿ ವಿಳಂಬವಾಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಗದಗ ಜಿಲ್ಲೆಗೆ 20 ಕೆ.ಎಲ್‌. ಆಮ್ಲಜನಕ ಅವಶ್ಯಕವಾಗಿ ಬೇಕು. ಅದರಲ್ಲಿ ಜಿಮ್ಸ್‌ಗೆ 10ರಿಂದ 12 ಕೆ.ಎಲ್‌., 4ರಿಂದ 5 ಕೆ.ಎಲ್‌. ಖಾಸಗಿ ಆಸ್ಪತ್ರೆಗಳಿಗೆ ಹಾಗೂ 2ರಿಂದ 3 ಕೆ.ಎಲ್‌. ಆಮ್ಲಜನಕ ಹೆಚ್ಚುವರಿಯಾಗಿ ಇರಬೇಕು. ಹಾಗಾಗಿ, ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗದ ಹಾಗೆ ಜಿಲ್ಲಾಡಳಿತ ವ್ಯವಸ್ಥೆಗೊಳಿಸಬೇಕು ಎಂದು ಆಗ್ರಹಿಸಿದರು.

ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಸಚಿವ ಬಿ.ಆರ್.ಯಾವಗಲ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಗದಗ-ಬೆಟಗೇರಿ ಶಹರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗುರಣ್ಣ ಬಳಗಾನೂರ, ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ನರಗುಂದ ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪ್ರವೀಣ ಯಾವಗಲ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ನಿಯೋಗದಲ್ಲಿ ಇದ್ದರು.

‘ಪೂರೈಕೆ ಜಾಲ ಸರಿ ಮಾಡಿ’

‘ಆಮ್ಲಜನಕ ಉತ್ಪಾದಕ ಕಂಪನಿಯವರಿಂದ ಆಗುವ ವಿಳಂಬ ಹಾಗೂ ಸಾಗಣೆಯ ತೊಂದರೆಯಿಂದಾಗಿ ಜಿಲ್ಲಾ ಮತ್ತು ತಾಲ್ಲೂಕು ಕೋವಿಡ್‌ ಆಸ್ಪತ್ರೆಗಳಲ್ಲಿ ಅಹಿತಕರ ಘಟನೆಗಳು ನಡೆದರೆ ಯಾರು ಹೊಣೆ’ ಎಂದು ಶಾಸಕ ಸಿ.ಸಿ.ಪಾಟೀಲ ಪ್ರಶ್ನಿಸಿದರು.

‘ಇಂತಹ ಸಂದರ್ಭದಲ್ಲಿ ಸರ್ಕಾರ ಕೈ ಚೆಲ್ಲಿ ಕೂರಬಾರದು. ಏನಾದರೂ ವ್ಯವಸ್ಥೆ ಮಾಡಬೇಕು. ಆಮ್ಲಜನಕ ಪೂರೈಕೆ ಜಾಲವನ್ನು ಸಮರ್ಪಕಗೊಳಿಸಬೇಕು. ನಮ್ಮ ಪಕ್ಕದ ಜಿಲ್ಲೆಯಲ್ಲಿಯೇ ಉತ್ಪಾದನಾ ಘಟಕವಿದ್ದು, ನಮ್ಮ ಜಿಲ್ಲೆಗೆ ಆಮ್ಲಜನಕದ ಕೊರತೆ ಎದುರಾಗಬಾರದು. ಗದಗ ಜಿಲ್ಲೆಯವರು ಆಮ್ಲಜನಕಕ್ಕಾಗಿ ಒಡಿಶಾ ಕಡೆಗೆ ನೋಡುವಂತಾಗಬಾರದು’ ಎಂದು ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.