ಭಾನುವಾರ, ಏಪ್ರಿಲ್ 18, 2021
24 °C

ಹಿರಿಯ ರಾಜಕಾರಣಿಗೆ ಶೋಭೆ ತರದು: ಎಚ್‌.ಕೆ. ಪಾಟೀಲ ವಿರುದ್ಧ ಸಿ.ಸಿ. ಪಾಟೀಲ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ

ಗದಗ: ‘ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿ ಮನವಿ ನೀಡುವ ಸಂದರ್ಭದಲ್ಲಿ ರಾಜ್ಯದ ಹಿರಿಯ ರಾಜಕಾರಣಿಯಾಗಿ ಶಾಸಕ ಎಚ್‌.ಕೆ.ಪಾಟೀಲ ಅವರು ನಡೆದುಕೊಂಡ ರೀತಿಯನ್ನು ಖಂಡಿಸುತ್ತೇನೆ’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಕಿಡಿಕಾರಿದರು. 

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ರ‍್ಯಾಲಿ ನಡೆಸಿ ಮನವಿ ನೀಡಲು ಡಿಸಿ ಕಚೇರಿ ಹೋಗಿದ್ದು, ಅಲ್ಲಿ ಸಭೆ ನಡೆಸಿದ್ದನ್ನು ಕೆಲವರು ನನಗೆ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ತಿಳಿಸಿದರು. ಈ ರಾಜ್ಯದ ಹಿರಿಯ ರಾಜಕಾರಣಿಯಾಗಿ ಅವರು ನಡೆದುಕೊಂಡಿದ್ದು, ಅತ್ಯಂತ ಖಂಡನೀಯ’ ಎಂದು ಕಿಡಿಕಾರಿದರು.

'ಯಾರೇ ಆದರೂ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ಮನವಿ ನೀಡಲು ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರದ ಮುಂದೆ ನಿಲ್ಲುತ್ತಿದ್ದರು. ಡಿ‌.ಸಿ ಮನವಿ ಸ್ವೀಕರಿಸುತ್ತಿದ್ದರು. ಅಲ್ಲಿಗೆ ಅದು ಮುಗಿಯುತ್ತಿತ್ತು. ಆದರೆ, ಶಾಸಕರು ಟ್ರ್ಯಾಕ್ಟರ್‌ ಅನ್ನು ಒಳಕ್ಕೆ ಚಲಾಯಿಸಿಕೊಂಡು ಹೋದರು. ದೆಹಲಿಯಲ್ಲಿ ರೈತರು ಮಾಡಿದಂತೆ ಇವರು ಕೂಡ ಮಾಡಿದ್ದಾರೆ. ಈಗಾಗಲೇ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾನೂನಿಗಿಂತ ಯಾರೂ ಮಿಗಿಲಲ್ಲ. ಇನ್ನೊಮ್ಮೆ ಕಾನೂನು ಉಲ್ಲಂಘಿಸಿದರೆ ಸರ್ಕಾರ ತನ್ನ ಅಧಿಕಾರ ಬಳಸಬೇಕಾಗುತ್ತದೆ. ಅವರು ಹಿರಿಯ ರಾಜಕಾರಣಿ ಆಗಿರುವುದರಿಂದ ಈ ಬಾರಿ ಸೌಜನ್ಯದಿಂದ ವರ್ತಿಸುವೆ. ಮುಂದೆ ಇದನ್ನೇ ಮಾಡಿದರೆ ಕಠಿಣ ಕಾನೂನಾತ್ಮಕ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಲೈಸೆನ್ಸ್‌ ಇಲ್ಲದೇ ಟ್ರ್ಯಾಕ್ಟರ್‌ ಓಡಿಸಿದ್ದೇ ಆದರೆ ಈ ರೀತಿ ಮಾಡಿದ್ದು, ಸರಿಯೇ ಎಂದು ಅವರೇ ಪ್ರಶ್ನಿಸಿಕೊಳ್ಳಬೇಕು’ ಎಂದು ತಿವಿದರು.

'ಪ್ರತಿಭಟನೆ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಬಂದರು ಎಂದು ಕೇಳಿದೆ. ಸಂತೋಷ. ಆದರೆ, ಅವರ ಬಳಿ ಟ್ರ್ಯಾಕ್ಟರ್‌ ಓಡಿಸಲು ಪರವಾನಗಿ ಇತ್ತೇ, ಗೊತ್ತಿಲ್ಲ. ಡಿಎಲ್‌ ಇಲ್ಲ ಎಂದಾದರೆ ಅಂತಹ ಹಿರಿಯ ರಾಜಕಾರಣಿಗೆ ಅದು ಶೋಭೆ ತರುವುದಿಲ್ಲ’ ಎಂದು ಹೇಳಿದರು.

ಗುರುವಾರ ನಡೆದ ಕಾಂಗ್ರೆಸ್‌ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಶಾಸಕ ಎಚ್‌.ಕೆ.‍ಪಾಟೀಲ ಕಿಡಿಕಾರಿದ ವಿಚಾರವಾಗಿ ಪ‍್ರತಿಕ್ರಿಯಿಸಿದ ಸಚಿವರು, 'ಶಾಸಕ ಎಚ್.ಕೆ.ಪಾಟೀಲ ಅವರು ಮನಮೋಹನ್‌ ಸಿಂಗ್‌ ಅವರ ಬಳಿ ನೋಡಿರುವ ಸಂಗತಿಗಳನ್ನು ಮೋದಿ ಅವರಿಗೆ ಆರೋಪಿಸಿ ಹೇಳುತ್ತಿದ್ದಾರೆ. 10 ವರ್ಷ ಅಧಿಕಾರ ಮಾಡಿದರೂ ಒಮ್ಮೆಯೂ ಬಾಯಿ ಬಿಡದಂತಹ, ನಂ.10 ಜನಪಥ್‌ನಿಂದ ಅಧಿಕಾರ ನಡೆಸಿದದವರು ಮನಮೋಹನ್ ಸಿಂಗ್’ ಎಂದು ಲೇವಡಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು