ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜ ಸೇವೆಗೆ ಒಲಿದ ಚನ್ನಮ್ಮ ಪ್ರಶಸ್ತಿ

ಬಹುಮುಖ ಪ್ರತಿಭೆಯ ಯೋಗ ಸಾಧಕಿ ಮಂಜುಳಾ ಇಟಗಿ ಸೇವೆ ಸಂದ ಗೌರವ
ಕಾಶೀನಾಥ ಬಿಳಿಮಗ್ಗದ
Published 13 ಮಾರ್ಚ್ 2024, 5:07 IST
Last Updated 13 ಮಾರ್ಚ್ 2024, 5:07 IST
ಅಕ್ಷರ ಗಾತ್ರ

ಮುಂಡರಗಿ: ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪಟ್ಟಣದ ಮಂಜುಳಾ ಇಟಗಿ ಎಂಬ ಗೃಹಿಣೆಯು ಪ್ರಸ್ತುತ ವರ್ಷ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ತಾಲ್ಲೂಕು ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಉತ್ತಮ ಗೃಹಿಣೆಯಾಗಿರುವ ಮಂಜುಳಾ ಇಟಗಿ ಅವರು ಕಳೆದ ಒಂದು ದಶಕದಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಹಲವಾರು ಜನಪರ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಮದರ್ ತೆರೆಸಾ ಮಹಿಳಾ ಮಂಡಳ ಸ್ಥಾಪಿಸಿ ಹಲವಾರು ಮಹಿಳಾಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಲಿದ್ದಾರೆ.

ಮಹಿಳಾ ಮಂಡಳದ ಅಡಿಯಲ್ಲಿ ಹಲವಾರು ಜನ ಜಾಗೃತಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರತೀ ವರ್ಷ ಮಹಿಳಾ ದಿನಾಚರಣೆ, ರೈತ ಮಹಿಳೆಯರ ಸನ್ಮಾನ, ವಿದ್ಯಾರ್ಥಿನಿಯರಿಗೆ ಉಚಿತ ಶಿಬಿರ, ಗುಡಿಸಲು ವಾಸಿಗಳೊಂದಿಗೆ ಸಹಭೋಜನ ಹಾಗೂ ಅವರಿಗೆ ಉಡಿ ತುಂಬುವ ಕಾರ್ಯ, ವೃದ್ಧಾಶ್ರಮದಲ್ಲಿ ಮಕ್ಕಳ ಜನ್ಮದಿನ ಮೊದಲಾದವುಗಳನ್ನು ಆಚರಿಸುವ ಮೂಲಕ ಮಂಜುಳಾ ಅವರು ಸಮಾಜದ ಗಮನ ಸೆಳೆದಿದ್ದಾರೆ.

ಯೋಗ ಸಾಧಕಿಯಾಗಿರುವ ಮಂಜುಳಾ ಅವರು ತಾಲ್ಲೂಕು ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಟ್ಟಣದಲ್ಲಿ ಹಿಮಾಲಯ ಯೋಗ ತರಬೇತಿ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ ನಿತ್ಯ ಮಹಿಳೆಯರು ಹಾಗೂ ಮಕ್ಕಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಜರುಗುವ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶ್ತಿಯನ್ನು ಪಡೆದುಕೊಂಡಿದ್ದಾರೆ.


ಜಿಲ್ಲಾ ನೆಹರು ಯುವ ಕೇಂದ್ರ ಹಾಗೂ ಮತ್ತಿತರ ಕ್ರೀಡಾ ಸಂಘಟನೆಗಳ ಸಹಯೋಗದಲ್ಲಿ ತಾಲ್ಲೂಕಿನಲ್ಲಿ ಹಲವಾರು ಕ್ರೀಡಾಕೂಟಗಳನ್ನು ಆಯೋಜಿಸಿದ್ದಾರೆ. ಮಹಿಳೆಯರಿಗಾಗಿ ವಿವಿಧ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ ಮಹಿಳೆಯರಿಗೆ ತರಬೇತಿ ಕೊಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸದಸ್ಯೆಯಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.


ಜಿಲ್ಲೆಯಾಧ್ಯಂತ ದಶಕದಿಂದ ಮಂಜುಳಾ ಅವರು ನಿರ್ವಹಿಸುತ್ತಿರುವ ಸಾಮಾಜಿಕ ಚಟುವಟಿಕೆಗಳನ್ನು ಪರಿಗಣಿಸಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಾ.12ರಂದು ಬೆಂಗಳೂರಿನ ಜವಾಹರ್ ಬಾಲ ಭವನದಲ್ಲಿ ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಜುಳಾ ಅವರು ರಾಜ್ಯ ಸರ್ಕಾರ ನೀಡಿದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮುಗುಳುನಗೆ ಬೀರಿದ್ದಾರೆ.


ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಿರ್ದೇಶಕಿ ಎಂ.ಎಸ್.ಅರ್ಚನಾ, ಸರ್ಕಾರದ ಕಾರ್ಯದರ್ಶಿ ಜಿ.ಸಿ.ಪ್ರಭಾಕರ ಹಾಗೂ ಮತ್ತಿತರರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಆಸೆ ಇದೆ. ಸಮಾಜ ಸೇವೆ ನನ್ನ ಉತ್ತಮ ಆಯ್ಕೆಯಾಗಿದ್ದು, ಅದರಲ್ಲಿ ವಿಶೇಷವಾದದ್ದನ್ನು ಸಾಧಿಸುತ್ತೇನೆ. ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ
– ಮಂಜುಳಾ ಇಟಗಿ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ

ಮಂಜುಳಾ ಇಟಗಿ
ಮಂಜುಳಾ ಇಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT