ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಗುಣಮಟ್ಟದ ವೆಂಟಿಲೇಟರ್‌ ಪೂರೈಕೆ: ಶಾಸಕ ಎಚ್‌.ಕೆ.ಪಾಟೀಲ ಆರೋಪ

Last Updated 16 ಮೇ 2021, 15:42 IST
ಅಕ್ಷರ ಗಾತ್ರ

ಗದಗ: ‘ಪಿಎಂ ಕೇರ್ಸ್‌ನಿಂದ ಪೂರೈಕೆಯಾಗಿರುವ ವೆಂಟಿಲೇಟರ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಖರೀದಿಸಿದವರ ವಿರುದ್ಧ ಕ್ರಿಮಿನ್‌ ಮೊಕದ್ದಮೆ ದಾಖಲಿಸಬೇಕು. ಈ ವಿಚಾರದಲ್ಲಿ ರಾಷ್ಟ್ರವ್ಯಾಪಿ ಭ್ರಷ್ಟಾಚಾರ ನಡೆದಿರುವುದರಿಂದ ಸುಪ್ರೀಂ ಕೋರ್ಟ್‌ ಸಿಬಿಐ ತನಿಖೆಗೆ ಆದೇಶ ಮಾಡಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಆಗ್ರಹಿಸಿದರು.

ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗದಗ ಜಿಲ್ಲೆಗೆ ಕಳಪೆ ಗುಣಮಟ್ಟದ ವೆಂಟಿಲೇಟರ್‌ಗಳನ್ನು ನೀಡಲಾಗಿದೆ. ಅವುಗಳಿಗೆ ಕನೆಕ್ಟರ್‌ ಇಲ್ಲ, ಆಕ್ಸಿಜನ್‌ ಸೆನ್ಸರ್‌ ಇಲ್ಲ. ಇದರಿಂದಾಗಿ ವೆಂಟಿಲೇಟರ್‌ಗಳು ಬಂದು ಒಂದು ವಾರ ಆದರೂ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಉಸಿರಾಟದ ಸಮಸ್ಯೆ ಇರುವ ರೋಗಿಗಳು ವೆಂಟಿಲೇಟರ್‌ ಸೌಲಭ್ಯ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಈ ಸಾವುಗಳಿಗೆಲ್ಲ ಕೇಂದ್ರ ಸರ್ಕಾರವೇ ನೇರ ಹೊಣೆ’ ಎಂದು ಅವರು ಗಂಭೀರ ಆರೋಪ ಮಾಡಿದರು.

‘ಐಸಿಯು ಒಳಗೆ ಕೇವಲ ವೆಂಟಿಲೇಟರ್‌ ಡಬ್ಬಗಳು ಮಾತ್ರ ಕಾಣಿಸುತ್ತಿವೆ. ಅವು ಉಪಯೋಗಕ್ಕೆ ಬರುತ್ತಿಲ್ಲ. ಕಳಪೆ ಗುಣಮಟ್ಟದ ವೆಂಟಿಲೇಟರ್‌ಗಳ ಪೂರೈಕೆಯಿಂದ ರಾಜ್ಯದಾದ್ಯಂತ ನೂರಾರು ಜನರು ಸಾಯುತ್ತಿದ್ದಾರೆ. ಜನರು ಇವೆಲ್ಲವನ್ನೂ ಬಹಳ ಗಂಭೀರವಾಗಿ ನೋಡುತ್ತಿದ್ದಾರೆ. ದೊಡ್ಡ ಗಂಡಾಂತರ ಸಂಭವಿಸುವ ಮುನ್ನ ಲೋಪ ಸರಿಪಡಿಸಿ, ಜನರ ಪ್ರಾಣ ಉಳಿಸಬೇಕು’ ಎಂದು ಎಚ್ಚರಿಸಿದರು.

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಪರೀಕ್ಷೆ ಪ್ರಮಾಣ ಇಳಿಕೆಯಾಗಿದೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುವ ಅಂಕಿ ಅಂಶಗಳಲ್ಲಿ ಭಾರಿ ವ್ಯತ್ಯಾಸ ಇದ್ದು, ಸಾವು ನೋವಿನ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ. ನಮ್ಮ ದೇಶದ ಜನರು ಲಸಿಕೆ ಸಿಗದೇ ಪರದಾಡುತ್ತಿದ್ದಾರೆ. ಆದರೆ, ಭಾರತದಿಂದ 15 ದೇಶಗಳಿಗೆ ಲಸಿಕೆ ರಫ್ತು ಮಾಡಲಾಗಿದೆ. ಈ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರು ಜನರಿಗೆ ವಿವರಣೆ ಕೊಡಬೇಕು. ವ್ಯಾಕ್ಸಿನ್‌ ಉತ್ಪಾದನೆ ಮಾಡಲು ಹೆಚ್ಚಿನ ಕಂಪನಿಗಳಿಗೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT