ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಸೋಂಕಿನಿಂದ 39 ಮಂದಿ ಗುಣಮುಖ

ಸಕ್ರಿಯ ಪ್ರಕರಣಗಳ ಸಂಖ್ಯೆ 8ಕ್ಕೆ ಇಳಿಕೆ; ತಗ್ಗಿದ ಆತಂಕ
Last Updated 13 ಜೂನ್ 2020, 11:54 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 49 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇವರಲ್ಲಿ 39 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಹೊಸ ಕೋವಿಡ್‌ ಪಾಸಿಟಿವ್‌ ಪ್ರಕರಣಗಳಿಗಿಂತಲೂ, ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಿರುವುದು ಜಿಲ್ಲಾಡಳಿತಕ್ಕೆ, ಜಿಲ್ಲೆಯ ಜನತೆಗೆ ದೊಡ್ಡ ಮಟ್ಟದಲ್ಲಿ ಸಮಾಧಾನ ತಂದಿದೆ.

ಶುಕ್ರವಾರ ಇಲ್ಲಿನ ಕೋವಿಡ್‌–19 ಆಸ್ಪತ್ರೆಯಿಂದ 29 ವರ್ಷದ ಪುರುಷ (ಪಿ–5014) ಬಿಡುಗಡೆಯಾದರೆ, ಶನಿವಾರ ಒಟ್ಟು ಮೂವರು, 28 ವರ್ಷದ ಪುರುಷ (ಪಿ -5015), 32 ವರ್ಷದ ಪುರುಷ (ಪಿ- 5016) ಮತ್ತು 29 ವರ್ಷದ ಪುರುಷ (ಪಿ–5017) ಗುಣಮುಖರಾಗಿ ಮನೆಗೆ ಮರಳಿದರು.

ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ, ಗದುಗಿನ ಕೆವಿಎಸ್‌ ಕಾಲೊನಿಯ ನಿವಾಸಿ, 29 ವರ್ಷದ ಪುರುಷ ವೃತ್ತಿಯಲ್ಲಿ ವೈದ್ಯರು. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್) ವೈದ್ಯರಾಗಿರುವ ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಗಂಟಲು ದ್ರವದ ಮಾದರಿ ತಪಾಸಣೆ ಮಾಡಿದಾಗ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಇದೀಗ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಶನಿವಾರ ಬಿಡುಗಡೆಗೊಂಡವರಲ್ಲಿ ‘ಜಿಮ್ಸ್‌’ನ ಡಯಾಲಿಸಿಸ್ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್‌ ಕೂಡ (ಪಿ–5016) ಸೇರಿದ್ದಾರೆ. ಸೋಂಕಿತರೊಬ್ಬರು (ಪಿ–4079) ‘ಜಿಮ್ಸ್‌ನಲ್ಲಿ ಡಯಾಲಿಸಿಸ್‌ಗೆ ಒಳಪಟ್ಟಿದ್ದರು. ಇವರಿಗೆ ಡಯಾಲಿಸಿಸ್‌ ಮಾಡುವಾಗ ಲ್ಯಾಬ್‌ ಟೆಕ್ನಿಷಿಯನ್‌ಗೆ ಮತ್ತು ಅದೇ ದಿನ ಡಯಾಲಿಸಿಸ್ ಮಾಡಿಸಿಕೊಂಡ ಹೊಳೆಆಲೂರಿನ ಯುವಕನಿಗೆ (ಪಿ–5015) ಸೋಂಕು ತಗುಲಿತ್ತು. ಈಗ ಇಬ್ಬರೂ ಗುಣಮುಖರಾಗಿದ್ದಾರೆ.

ಗದಗ ನಗರದ ಹುಡ್ಕೊ ಕಾಲನಿ ನಿವಾಸಿ 54 ವರ್ಷದ ಪುರುಷ (ಪಿ-4079) ಕಿಡ್ನಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿದ್ದರು. ಅಲ್ಲಿ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜೂ.10ರಂದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮೇ 23ರಂದು ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ 50 ವರ್ಷದ ಮಹಿಳೆಗೆ (ಪಿ–1748) ಸೋಂಕು ದೃಢಪಟ್ಟಿತ್ತು. ಇವರು ಜೂ.9ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಒಟ್ಟು 5 ದಿನಗಳಲ್ಲಿ 6 ಮಂದಿ ಗುಣಮುಖರಾಗಿದ್ದು, ಈ ಅವಧಿಯಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಸದ್ಯ 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಇನ್ನು ಮೂರು ನಾಲ್ಕು ದಿನಗಳ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT