ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ನಿಯಂತ್ರಣದಲ್ಲಿ ನಿರ್ಲಕ್ಷ್ಯ ಸಲ್ಲದು: ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು

ಕೋವಿಡ್-19 ನಿಯಂತ್ರಣ ಸಭೆ
Last Updated 4 ಸೆಪ್ಟೆಂಬರ್ 2020, 16:13 IST
ಅಕ್ಷರ ಗಾತ್ರ

ಗದಗ: ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗಿನ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಮಾತನಾಡಿದರು.

ಕೊರೊನಾ ಸೋಂಕು ಪತ್ತೆ ಹಾಗೂ ಪ್ರಾಥಮಿಕ, ದ್ವಿತೀಯ ಸೋಂಕಿತರ ಪರೀಕ್ಷೆಗೆ ಅಗತ್ಯ ಇರುವ ಮಾನವ ಸಂಪನ್ಮೂಲ ಹಾಗೂ ಸಾಮಗ್ರಿಗಳನ್ನು ಒದಗಿಸಲಾಗಿದೆ. ಅವುಗಳನ್ನು ಬಳಸಿಕೊಂಡು ಕ್ಷಿಪ್ರವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಸೂಚಿಸಿದರು.

ಜಿಮ್ಸ್‌ನಲ್ಲಿ ಹೆಚ್ಚುವರಿಯಾಗಿ 100 ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ತಾಲ್ಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ದೊರಕಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವತ್ತರಾಗಬೇಕು’ ಎಂದು ತಿಳಿಸಿದರು.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆಡೆಸಲು ತಾಲ್ಲೂಕು ಮಟ್ಟದಲ್ಲಿ ರಚಿಸಲಾದ ತಂಡಗಳು ಮಾರ್ಗಸೂಚಿ ಅನ್ವಯವೇ ಅಂತ್ಯಕ್ರಿಯೆ ನಡೆಸಬೇಕು. ಯಾವುದೇ ತರಹದ ದೂರುಗಳಿಗೆ ಆಸ್ಪದ ನೀಡದೆ ಸರಿಯಾಗಿ ಕೆಲಸ ನಿರ್ವಹಿಸಬೇಕು. ಜಿಲ್ಲೆಯ ಆರೋಗ್ಯ ಸಮೀಕ್ಷೆಯಲ್ಲಿ ಅಸ್ತಮಾ, ಮಧುಮೇಹ, ರಕ್ತದೊತ್ತಡ, ಉಸಿರಾಟ ತೊಂದರೆಯಂತಹ ಇತರೆ ರೋಗ ಲಕ್ಷಣಗಳಿರುವ 71 ಸಾವಿರ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಒಂದು ವಾರದೊಳಗಾಗಿ ಇವರೆಲ್ಲರ ಆರೋಗ್ಯ ತಪಾಸಣೆ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಈಗಾಗಲೇ ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಗುರುತಿಸಿ, ಅದನ್ನು ಪರಿಪೂರ್ಣವಾಗಿ ತಯಾರಿಯಾಗಿಡಲು ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ ಇಲಾಖೆ ಅಧಿಕಾರಿಗಳು ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಮನೆಗಳ ಸಮೀಕ್ಷಾ ಕಾರ್ಯವನ್ನು ಮಾಡಿ ನಿಖರ ವರದಿ ಸಲ್ಲಿಸಬೇಕು. ಮಾಜಿ ಸೈನಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ದೊರಕಿಸಿ ಕೊಡುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಆನಂದ ಕೆ., ಎಡಿಸಿ ಸತೀಶ್ ಕುಮಾರ್ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ್, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಡಿಎಚ್‌ಒ ಡಾ. ಸತೀಶ ಬಸರಿಗಿಡದ ಇದ್ದರು.

ಕೋವಿಡ್‌ಗೆ ಉಚಿತ ಚಿಕಿತ್ಸೆ

ಕೋವಿಡ್-19 ಸೋಂಕಿನ ಪರೀಕ್ಷೆಯಿಂದ ಚಿಕಿತ್ಸೆಯವರೆಗೆ ಎಲ್ಲ ಸೌಲಭ್ಯಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ತಿಳಿಸಿದರು.

ರೋಗ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟಲ್ಲಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಉಚಿತ ವಸತಿ, ಊಟೋಪಚಾರ ಸೇರಿದಂತೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸಾರ್ವಜನಿಕರು ಪರೀಕ್ಷೆಗೆ ಒಳಪಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT