ಶನಿವಾರ, ಸೆಪ್ಟೆಂಬರ್ 25, 2021
22 °C
ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿಗೆ ಶೇ 20 ಹೆಚ್ಚುವರಿ ಪ್ರವೇಶ

ಬಯಸಿದ ಕಾಲೇಜು ಸೇರಲು ಇನ್ನೊಂದು ಅವಕಾಶ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಗದಗ: ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಶೇ 20ರಷ್ಟು ಹೆಚ್ಚು ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ನೀಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ವಿದ್ಯಾರ್ಥಿಗಳಿಗೆ ಖುಷಿ ತರಿಸಿದೆ.

ಕೋವಿಡ್‌–19 ಕಾರಣದಿಂದ 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹೊಸ ಮಾದರಿಯಲ್ಲಿ ನಡೆಸಿದ್ದರಿಂದಾಗಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದರು. ಬಹುತೇಕ ವಿದ್ಯಾರ್ಥಿಗಳು ಶೇ 90– 95ಕ್ಕಿಂತ ಅಂಕ ಪಡೆದುಕೊಂಡಿದ್ದರು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿಗೆ ಪ್ರವೇಶಾತಿ ನೀಡಲು ಯಾವ ಮಾನದಂಡ ಅನುಸರಿಸಬೇಕು ಎಂದು ನಿರ್ಧರಿಸುವುದು ಕಾಲೇಜು ಆಡಳಿತ ಮಂಡಳಿಯವರಿಗೆ ಕಷ್ಟವಾಗಿತ್ತು. ಕೆಲವು ವಿದ್ಯಾರ್ಥಿಗಳು ಸ್ವಲ್ಪದರಲ್ಲಿ ಸೀಟು ಪಡೆದುಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದರು. ಬಯಸಿದ ಕಾಲೇಜಿನಲ್ಲಿ ಪ್ರವೇಶಾತಿ ಸಿಗದೇ ನಿರಾಸೆ ಹೊಂದಿದ್ದ ವಿದ್ಯಾರ್ಥಿಗಳು ಈಗ ಮತ್ತೊಮ್ಮೆ ಆ ಕಾಲೇಜು ಸೇರಲು ಪ್ರಯತ್ನಿಸುವ ಅವಕಾಶ ದೊರೆತಂತಾಗಿದೆ.

‘ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಇಂತಿಷ್ಟೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂಬ ನಿಯಮ ಇಲ್ಲ. ಎಷ್ಟು ಮಂದಿ ವಿದ್ಯಾರ್ಥಿಗಳನ್ನು ಬೇಕಾದರೂ ಅಡ್ಮಿಷನ್‌ ಮಾಡಿಕೊಳ್ಳಬಹುದು. ಆದರೆ, ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳು ಆ ಕಾಲೇಜಿನಲ್ಲಿ ಇರಬೇಕು ಎಂಬ ಮಾನದಂಡ ಇಟ್ಟುಕೊಂಡು ಪ್ರವೇಶಾತಿ ನೀಡುತ್ತೇವೆ’ ಎನ್ನುತ್ತಾರೆ ಗದಗ ಡಿಡಿಪಿಯು ರಾಜಶೇಖರ ಪಟ್ಟಣಶೆಟ್ಟಿ.

‘ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಿಗೆ ಇಂತಿಷ್ಟೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂಬ ನಿಯಮ ಇದೆ. ಕೆಲವು ವಿದ್ಯಾರ್ಥಿಗಳು ನಾನು ಇಂತಹದ್ದೇ ಕಾಲೇಜಿನಲ್ಲಿ ಓದಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ, ಸಾಕಷ್ಟು ವಿದ್ಯಾರ್ಥಿಗಳಿಗೆ ಬಯಸಿದ ಕಾಲೇಜಿನಲ್ಲಿ ಪ್ರವೇಶಾತಿ ಸಿಕ್ಕಿರಲಿಲ್ಲ. ಹೊಸ ಆದೇಶದಂತೆ ಶೇ 20ರಷ್ಟು ವಿದ್ಯಾರ್ಥಿಗಳನ್ನು ಹೆಚ್ಚುವರಿಯಾಗಿ ದಾಖಲು ಮಾಡಿಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳನ್ನು ಹೆಚ್ಚುವರಿಯಾಗಿ ದಾಖಲು ಮಾಡಿಕೊಳ್ಳಲು ಅನುಮತಿ ನೀಡುವ ಅಧಿಕಾರವನ್ನು ಆಯಾ ಜಿಲ್ಲೆಗಳ ಡಿಡಿಪಿಯುಗಳಿಗೆ ವಹಿಸಲಾಗಿದೆ’ ಎಂದು ಅವರು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದಿರುವ ಬಡ ವಿದ್ಯಾರ್ಥಿಗಳೆಲ್ಲರೂ ಸಾಮಾನ್ಯವಾಗಿ ಸರ್ಕಾರಿ ಕಾಲೇಜಿಗೆ ಬರುತ್ತಾರೆ. ಹಾಗಂತ, ಸರ್ಕಾರಿ ಕಾಲೇಜುಗಳಲ್ಲಿ ಸಿಗುವ ಶಿಕ್ಷಣದ ಗುಣಮಟ್ಟವೇನು ಕಡಿಮೆ ಇರುವುದಿಲ್ಲ. ಆದರೆ, ಹೆಚ್ಚಿನ ಸರ್ಕಾರಿ ಕಾಲೇಜುಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಶಾಸಕರ ಅನುದಾನ ಹಾಗೂ ಸರ್ಕಾರದ ಹಣ ಬಳಸಿಕೊಂಡು ಸರ್ಕಾರಿ ಕಾಲೇಜುಗಳನ್ನು ವಿದ್ಯಾರ್ಥಿ ಸ್ನೇಹಿಯಾಗಿ ರೂಪಿಸಲು ಪ್ರಯತ್ನಿಸಲಾಗುವುದು’ ಎಂದು ಡಿಡಿಪಿಯು ಪಟ್ಟಣಶೆಟ್ಟಿ ತಿಳಿಸಿದರು.

ಗದಗ ಜಿಲ್ಲೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೇರಿಸಲು ಎಲ್ಲರ ನೆರವಿನೊಂದಿಗೆ ಶ್ರಮಿಸಲಾಗುವುದು
ರಾಜಶೇಖರ ಪಟ್ಟಣಶೆಟ್ಟಿ, ಡಿಡಿಪಿಯು, ಗದಗ

ಬಯಸಿದ ಕಾಲೇಜಿನಲ್ಲಿ ಪ್ರವೇಶ ದೊರೆಯದೆ ನಿರಾಸೆಗೊಂಡ ವಿದ್ಯಾರ್ಥಿಗಳು, ಪಾಲಕರು ಈ ಆದೇಶದಿಂದ ಸಂತಸಗೊಂಡಿದ್ದಾರೆ. ಇದಕ್ಕಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಅಭಿನಂದನಾರ್ಹರು
ಡಾ. ಕಿಶೋರಬಾಬು ನಾಗರಕಟ್ಟಿ, ಉಪನ್ಯಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.