ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಸಿ.‍ಪಾಟೀಲ ನಮ್ಮ ಮನೆಯ ಮಾಲೀಕ ಅಥವಾ ಜೀತದಾಳಾಗಿದ್ದರೇ?: ದಿಂಗಾಲೇಶ್ವರ ಶ್ರೀ

Last Updated 21 ಏಪ್ರಿಲ್ 2022, 11:34 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಸಚಿವ ಸಿ.ಸಿ ಪಾಟೀಲ ನನ್ನ ಪೂರ್ವಾಶ್ರಮ ಕುರಿತು ನಾಡಿನ ಜನರಿಗೆ ಬಹಿರಂಗ ಪಡಿಸದಿದ್ದರೆ ಏ.27ರಂದು ನರಗುಂದದಲ್ಲಿರುವ ಅವರ ಮನೆ ಎದುರು ಸತ್ಯಾಗ್ರಹ ನಡೆಸುತ್ತೇನೆ’ ಎಂದು ದಿಂಗಾಲೇಶ್ವರ ಶ್ರೀ ಎಚ್ಚರಿಕೆ ನೀಡಿದರು.

ಬಾಲೆಹೊಸೂರಿನ ದಿಂಗಾಲೇಶ್ವರ ಮಠದಲ್ಲಿ ಗುರುವಾರ ನಡೆದ ಪ‍ತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಚಿವ ಸಿ.ಸಿ.ಪಾಟೀಲ ಅವರು ನನ್ನ ಬಗ್ಗೆ ಅತ್ಯಂತ ಕೀಳುಮಟ್ಟದ ಪದ ಬಳಸಿ ಮಾತನಾಡಿದ್ದಾರೆ. ಇದು ನನಗೆ ಮತ್ತು ಮಠದ ಭಕ್ತರಿಗೆ ಬಹಳ ನೋವು ತರಿಸಿದೆ’ ಎಂದು ಹೇಳಿದರು.

‘ನನ್ನ ಪೂರ್ವಾಶ್ರಮದ ಬಗ್ಗೆ ಚೆನ್ನಾಗಿ ಗೊತ್ತು ಎಂದು ಹೇಳಿರುವ ಸಚಿವರು ನಮ್ಮ ಮನೆಯ ಮಾಲೀಕ ಅಥವಾ ಜೀತದಾಳು ಆಗಿದ್ದರೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ನನ್ನ ಪೂರ್ವಾಶ್ರಮದ ಬಗ್ಗೆ ಸಚಿವರು ನಾಡಿನ ಜನತೆ ಮುಂದೆ ಸತ್ಯ ಹೇಳಬೇಕು. ಶಿರಹಟ್ಟಿ ಮಠಕ್ಕೆ ನೇಮಕಗೊಂಡ ನಂತರ ಹುಬ್ಬಳ್ಳಿಯ ಮೂರುಸಾವಿರ ಮಠದ ಬಗ್ಗೆ ನಾನು ಎಲ್ಲೂ ಪ್ರಸ್ತಾಪಿಸಿಲ್ಲ. ಆದರೆ ಸಚಿವರು ಮೂರುಸಾವಿರ ಮಠದ ಪೀಠಕ್ಕಾಗಿ ದಿಂಗಾಲೇಶ್ವರ ಶ್ರೀಗಳು ಹಣ ಬಲ, ತೋಳ್ಬಲ, ರೌಡಿಸಂ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಸಚಿವರು ನಮ್ಮ ಪೂರ್ವಾಶ್ರಮ ಮತ್ತು ಮೂರುಸಾವಿರ ಮಠದ ವಿಚಾರದಲ್ಲಿ ನಾನು ಮಾಡಿರುವ ರೌಡಿಸಂ ಕುರಿತು ನಾಡಿನ ಜನತೆಗೆ ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ಅವರ ಮನೆ ಎದುರು ಸತ್ಯಾಗ್ರಹ ಮಾಡುತ್ತೇವೆ. ಒಂದು ವೇಳೆ ಸರಿಯಾಗಿ ಸ್ಪಷ್ಟೀಕರಣ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ’ ಎಂದು ತಿಳಿಸಿದರು.

ಲಿಂ.ಸ್ವಾಮೀಜಿ ಅವರ ಜನ್ಮದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದು ಸರಿ ಅಲ್ಲ. ಐದುನೂರು ವರ್ಷಗಳ ಇತಿಹಾಸ ಹೊಂದಿರುವ ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠ ನಿಜವಾದ ಭಾವೈಕ್ಯತೆಯ ಮಠವಾಗಿದೆ. ಸರ್ಕಾರ ತೋಂಟದ ಶ್ರೀಗಳಿಗೆ ಬೇಕಾದಷ್ಟು ಪ್ರಶಸ್ತಿ ಕೊಟ್ಟರೂ ನಮ್ಮದೇನು ತಕರಾರು ಇಲ್ಲ. ಆದರೆ ಭಾವೈಕ್ಯತೆ ಮಠ ಎನ್ನುವುದನ್ನು ಮಾತ್ರ ನಾವು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

‘ತೋಂಟದ ಶ್ರೀಗಳ ಬಗ್ಗೆ ಪ್ರಶ್ನಿಸುವ, ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಶ್ರೀಗಳು ಲಿಂಗೈಕ್ಯರಾದ ಮೇಲೆ ಹೀಗೆ ಮಾತನಾಡುತ್ತಿದ್ದಾರೆ ಎಂದೂ ಹೇಳಿದ್ದಾರೆ. ಆದರೆ, ಇದು ತಪ್ಪು. ತೋಂಟದ ಶ್ರೀಗಳು ಲಿಂಗೈಕ್ಯರಾಗುವ ಮೊದಲೇ ಇಂತಹ ಹೇಳಿಕೆ ನೀಡಿದ್ದಿದೆ’ ಎಂದು ಸ್ಪಷ್ಟಪಡಿಸಿದರು.

‘ಫೆ.21ರಂದು ತೋಂಟದಾರ್ಯ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ನಮ್ಮ ವಿರೋಧ ಇದ್ದು, ನಿಜವಾದ ಭಾವೈಕ್ಯತೆಯ ಮಠವಾಗಿರುವ ಶಿರಹಟ್ಟಿ ಫಕ್ಕೀರೇಶ್ವರರ ಹೆಸರಲ್ಲಿ ಮಾಗಿ ಹುಣ್ಣಿಮೆ ದಿನವನ್ನು ಭಾವೈಕ್ಯತಾ ದಿನವನ್ನಾಗಿ ಘೋಷಿಸಬೇಕು. ಇಲ್ಲದಿದ್ದರೆ ವಿಧಾನಸೌಧದ ಎದುರು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಅಲ್ಲದೇ ಸಚಿವರು ಬಾಲೆಹೊಸೂರಿಗೆ ಪೊಲೀಸರನ್ನು ಕಳಿಸಿ ನನ್ನ ಮೇಲೆ ಬೆದರಿಕೆ ತಂತ್ರ ಪ್ರಯೋಗಿಸುತ್ತಿದ್ದಾರೆ’ ಎಂದು ಆರೋಪ ಮಾಡಿದ ಅವರು, ‘ಯಾವುದೇ ಬೆದರಿಕೆಗೆ ಜಗ್ಗುವ ಸ್ವಾಮಿ ನಾನಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT