ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಪ್ರೀತಿ ಗೆಲುವಿನ ಭರವಸೆ ಹೆಚ್ಚಿಸಿದೆ: ಡಿ.ಆರ್‌ ಪಾಟೀಲ ಮನದಾಳ

ಹಾವೇರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ
Last Updated 30 ಏಪ್ರಿಲ್ 2019, 16:32 IST
ಅಕ್ಷರ ಗಾತ್ರ

ಗದಗ: ಹೊಸ ಜಿಲ್ಲೆಯಾಗಿ ಗದಗ ಅಸ್ತಿತ್ವಕ್ಕೆ ಬಂದು ಎರಡು ದಶಕಗಳು ಕಳೆದ ನಂತರ ಮೊದಲ ಬಾರಿಗೆ, ಲೋಕಸಭಾ ಚುನಾವಣೆಯೊಂದರಲ್ಲಿ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಜಿಲ್ಲೆಯ ಅಭ್ಯರ್ಥಿಗೆ ಅವಕಾಶ ಲಭಿಸಿದೆ. ಗದಗ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಡಿ.ಆರ್‌.ಪಾಟೀಲ ಅವರು ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

2008ರ ವಿಧಾನಸಭೆ ಚುನಾವಣೆಯಲ್ಲಿ ಸಹೋದರ ಎಚ್‌.ಕೆ ಪಾಟೀಲ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟ ಡಿ.ಆರ್‌ ಅವರು, 11 ವರ್ಷಗಳ ಬಳಿಕ ಮತ್ತೊಂದು ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದಾರೆ. ‘ಕ್ಷೇತ್ರದ ಜನರ ಪ್ರೀತಿ ಗೆಲುವಿನ ಭರವಸೆ ಹೆಚ್ಚಿಸಿದೆ’ ಎನ್ನುತ್ತಾ ಅವರು, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.

*ಕ್ಷೇತ್ರದ ಜನತೆ ನಿಮಗೆ ಯಾಕೆ ವೋಟ್‌ ಹಾಕಬೇಕು?

ನಾನು ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವನು. ದಶಕಗಳ ಕಾಲ ಎಪಿಎಂಸಿ ಅಧ್ಯಕ್ಷನಾಗಿ ರೈತರ ಸಮಸ್ಯೆಗಳನ್ನು ಸಮೀಪದಿಂದ ಅರಿತಿದ್ದೇನೆ. ಶಾಸಕನಾಗಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಸೃಷ್ಟಿಸುವುದು, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವುದು, ನೀರು ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ಕೊಡುವುದು, ಸದನದಲ್ಲೂ ಮಹಿಳಾ ಮೀಸಲಾತಿ ಪರ ಧ್ವನಿಯಾಗಿ ಕೆಲಸ ಮಾಡುವುದು ಇವು ಪ್ರಮುಖ ಆಶಯಗಳು.ಇದನ್ನು ಸಾಕಾರಗೊಳಿಸಲು ಮತ ನೀಡಿ ಎಂದು ಮನವಿ ಮಾಡುತ್ತೇನೆ.

* ನಿಮ್ಮ ಎದುರಾಳಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ, ನೀವು ಯಾವ ವಿಷಯದೊಂದಿಗೆ ಜನರ ಬಳಿಗೆ ಹೋಗುತ್ತೀರಾ?

2014ರಲ್ಲಿ ಮೋದಿ ಅವರದು ದೇಶಕ್ಕೆ ಹೊಸ ಮುಖ.ಅತಿರಂಜಿತ ಪ್ರಚಾರ ಮತ್ತು ಅವರ ಭರವಸೆಗಳನ್ನು ನಂಬಿ ಜನ ಮತ ಹಾಕಿದ್ದರು. ಆದರೆ, ಕಳೆದ ಐದು ವರ್ಷಗಳ ಆಡಳಿತದಲ್ಲಿ ಇವೆಲ್ಲವೂ ಹುಸಿಯಾಗಿದೆ. ಜನಸಾಮಾನ್ಯರು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಯುಪಿಎ ಮತ್ತು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಸಾಧನೆಗಳನ್ನು ಮುಂದಿಟ್ಟು ಮತ ಕೇಳುತ್ತೇನೆ. ಎದುರಾಳಿ ಅಭ್ಯರ್ಥಿಯ ಬಗ್ಗೆ ಮಾತನಾಡುವುದಿಲ್ಲ.

*2014ರ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನೀವೇ ಕಾರಣ ಎನ್ನುವ ಆರೋಪ ಇದೆಯಲ್ಲಾ?

ಅದು ಸಂಪೂರ್ಣ ತಪ್ಪು ತಿಳುವಳಿಕೆಯ ಆರೋಪ. 5 ದಶಕಗಳ ಸಾರ್ವಜನಿಕ ಬದುಕಿನಲ್ಲಿ ಪಕ್ಷ ದ್ರೋಹದ ಕೆಲಸ ಎಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಅಂಥ ಮನಸ್ಥಿತಿಯೂ ನನ್ನದಲ್ಲ. ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವನು.

* ಟಿಕೆಟ್‌ ಹಂಚಿಕೆ ವಿಷಯದಲ್ಲಿ ಎದ್ದಿರುವ ಅಲ್ಪಸಂಖ್ಯಾತ ಸಮುದಾಯದ ಅಸಮಾಧಾನವನ್ನು ಹೇಗೆ ಎದುರಿಸುತ್ತೀರಿ?

ಅಸಮಾಧಾನ ಇಲ್ಲವೇ ಇಲ್ಲ. ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಸೋಲು ಕಂಡಿದೆ. ಈ ಬಾರಿ ಬಿಜೆಪಿ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಬದಲಾಗಿ, ಇತರೆ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರೇ ಪಕ್ಷದ ಹೈಕಮಾಂಡ್‍ಗೆ ಶಿಫಾರಸು ಮಾಡಿದ್ದರು. ಮುಸ್ಲಿಂ ಸಮುದಾಯಕ್ಕೆ ಬೇರೆ ರಾಜಕೀಯ ಸ್ಥಾನಮಾನ ಕೇಳಿದ್ದಾರೆ. ಹೀಗಾಗಿ ಅಸಮಾಧಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ.

*ಸ್ಥಳೀಯ ಸಮಸ್ಯೆಗಳು ಹಿನ್ನೆಲೆಗೆ ಸರಿದು ಜಾತಿ ರಾಜಕಾರಣ ಮುನ್ನೆಲೆಗೆ ಬರುತ್ತಿರುವ ಕುರಿತು ಏನು ಹೇಳುತ್ತೀರಿ?

ಜಾತಿ ರಾಜಕಾರಣ ಮುನ್ನೆಲೆಗೆ ಬರುತ್ತಿದೆ ಎಂದು ನನಗೆ ಅನಿಸಿಲ್ಲ. ಅದನ್ನು ಏನಾದರೂ ಖಾಸಗಿಯಾಗಿ ಮಾಡುತ್ತಿದ್ದಾರೋ ಗೊತ್ತಿಲ್ಲ. ನೇರವಾಗಿ ವೇದಿಕೆ ಮುಖಾಂತರ ಎಲ್ಲಿಯೂ ಯಾರೂ ಮಾತನಾಡಿಲ್ಲ. ನಾನು ಜಾತ್ಯಾತೀತ ಮತ್ತು ಪಕ್ಷಾತೀತ. ನನ್ನ ರಾಜಕೀಯ ಬದ್ಧತೆ ನೋಡಿರುವವರು ತಾವೂ ಮತ ಹಾಕಿ, ಬೇರೆಯವರೂ ನನಗೆ ಮತ ಹಾಕುವಂತೆ ಪ್ರೇರೇಪಿಸುತ್ತಾರೆ.

* ನಿಮಗೆ ಗೆಲ್ಲುವ ವಿಶ್ವಾಸ ಇದೆಯಾ?

ಪಕ್ಷವು ಟಿಕೆಟ್ ಘೋಷಣೆ ಮಾಡಿದ ಬಳಿಕ ಮತಯಾಚನೆಗೆ ಕ್ಷೇತ್ರ ಸುತ್ತುತ್ತಿದ್ದೇನೆ. 800ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿರುವ ಹಾವೇರಿ ಲೋಕಸಭಾ ಕ್ಷೇತ್ರವನ್ನು ಇಷ್ಟೊಂದು ಕಡಿಮೆ ಅವಧಿಯಲ್ಲಿ ಸಂಪೂರ್ಣ ಸುತ್ತಲು ಅಸಾಧ್ಯ. ಆದರೆ, ಚುನಾವಣೆ ಮುಗಿದ ನಂತರವೂ ಪ್ರತಿ ಹಳ್ಳಿಗೂ ಭೇಟಿ ಕೊಡುತ್ತೇನೆ. ಪ್ರಚಾರದ ವೇಳೆ ಗದಗ ಮತ್ತು ಹಾವೇರಿ ಜಿಲ್ಲೆಗಳ ಜನರಿಂದ ಸಿಗುತ್ತಿರುವ ಸ್ಪಂದನೆ ನನ್ನ ಗೆಲುವಿನ ಭರವಸೆ ಗಟ್ಟಿಗೊಳಿಸಿದೆ. ಖಂಡಿತವಾಗಿಯೂ ಗೆಲ್ಲುವ ವಿಶ್ವಾಸ ಇದೆ.

*ಸಂಸದರಾಗಿ ಆಯ್ಕೆಯಾದರೆ ನಿಮ್ಮ ಆದ್ಯತೆ ಯಾವುದಕ್ಕೆ?

ಮೊದಲ ಆದ್ಯತೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಜನಸಾಮಾನ್ಯರು ನಿರ್ಣಾಯಕ ಪಾತ್ರ ವಹಿಸುವ ವ್ಯವಸ್ಥೆ ರೂಪಿಸುವುದು. ಪ್ರಕೃತಿ ನೀಡಿರುವ ನೀರು ಮತ್ತು ಮಣ್ಣಿನ ಸಂರಕ್ಷಣೆಗೆ ಕ್ರಮ ವಹಿಸುವುದು. ರೈತನ ಬೆಳೆಗೆ ಯೋಗ್ಯ ಬೆಲೆ ಕಲ್ಪಿಸಿ, ಮಾರುಕಟ್ಟೆಯಲ್ಲಿ ಅನ್ಯಾಯವಾಗದಂತೆ ತಡೆಯುವುದು. ಕೃಷಿ ಲಾಭದಾಯಕ ಕಸುಬು ಎನ್ನುವುದು ಸಾಕಾರಗೊಳಿಸುವುದು.

* ಮಹದಾಯಿ ಯೋಜನೆ ಜಾರಿಗೆ ಯಾವ ಪ್ರಯತ್ನ ಮಾಡುತ್ತೀರಾ?

ಆಯ್ಕೆಯಾದರೆ, ಮಹದಾಯಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಸಂಸದರೂ ಒಗ್ಗೂಡಿ ಪ್ರಯತ್ನಿಸುವ ಕೆಲಸ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT