ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣ: ರೈತನ ಬದುಕು ಬಂಗಾರ ಮಾಡಿದ ಬಾಳೆ ಬೆಳೆ

ಉಮೇಶ ಬಸನಗೌಡರ
Published 9 ಫೆಬ್ರುವರಿ 2024, 4:38 IST
Last Updated 9 ಫೆಬ್ರುವರಿ 2024, 4:38 IST
ಅಕ್ಷರ ಗಾತ್ರ

ರೋಣ: ಸಾಂಪ್ರದಾಯಿಕ ಬೇಸಾಯ ಪದ್ದತಿಯಿಂದ ಲಾಭ ಕಾಣದೆ ತೋಟಗಾರಿಕೆ ಬೆಳೆ ಬೆಳೆದು ಯಶಸ್ಸು ಸಾಧಿಸಿರುವ ತಾಲ್ಲೂಕಿನ ಬೆನಹಾಳ ಗ್ರಾಮದ ಬಸವರಾಜ ಉಮಚಗಿಯವರು ಮಾದರಿಯಾಗಿದ್ದಾರೆ.

ಮಳೆಯಾಶ್ರಿತ ಬೇಸಾಯದ ಜಮೀನಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ದೊರಕದೆ ಇದ್ದಾಗ ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಕೈಬಿಟ್ಟು ಪ್ರಗತಿಪರ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಂಡರು. ಕೊಳವೆ ಭಾವಿ ಕೊರೆಸಿ ತೋಟಗಾರಿಕೆಯ ಇಲಾಖೆಯ ಮೂಲಕ ಹನಿ ನೀರಾವರಿ ತುಂತುರು ನೀರಾವರಿ ಸೌಲಭ್ಯ ಪಡೆದು ಸುಮಾರು 18 ಎಕರೆ ಪ್ರದೇಶದಲ್ಲಿ ಮೊದಲ ಬಾರಿಗೆ ದಾಳಿಂಬೆ ಬೆಳೆ ಬೆಳೆದರು.

ದಾಳಿಂಬೆಯಲ್ಲಿ ಲಾಭಗಳಿಸಿದ ಇವರು ದಾಳಿಂಬೆ ಬೆಳೆಗೆ ತಗಲುವ ಹಲವು ರೋಗಗಳು ಮತ್ತು ಅದರಿಂದಾಗಿ ರಾಸಾಯನಿಕಗಳ ಅತಿಯಾದ ಬಳಕೆಗೆ ಬೇಸತ್ತು ಸಾಧ್ಯವಾದಷ್ಟು ಸಾವಯವ ಮಾದರಿಯ ಬೇಸಾಯ ಕ್ರಮ ಅಳವಡಿಸಿಕೊಳ್ಳಲು ಮುಂದಾದರು ಮತ್ತು ಅದರ ಬಗ್ಗೆ ಮಾಹಿತಿ ಕಲೆ ಹಾಕಲು ಪ್ರಾರಂಭಿಸಿದಾಗ ಬಾಳೆ ಬೆಳೆಯ ಬಗ್ಗೆ ಆಸಕ್ತಿ ಹೊಂದಿ ಬಾಳೆ ಬೆಳೆಯಲು ಪ್ರಾರಂಭಿಸಿದರು.

ಎಂಟು ಎಕರೆಯಲ್ಲಿ ಜಿ–9 ಮತ್ತು ಮೂರು ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆಯುತ್ತಿದ್ದು ಕೊಟ್ಟಿಗೆ ಗೊಬ್ಬರ ನೈಸರ್ಗಿಕ ಕೀಟ ನಿಯಂತ್ರಣ ಮಾದರಿಗಳನ್ನು ಬಳಸಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಕೂಡಾ ಬಾಳೆಗೆ ದೊರೆಯುತ್ತಿದ್ದು ಸಂತಸ ತಂದಿದೆ ಎನ್ನುತ್ತಾರೆ.

ಬಾಳೆ ಬೆಳೆಗೆ ತೋಟಗಾರಿಕೆ ಇಲಾಖೆಯಿಂದ ಮೊದಲ ವರ್ಷ ಪ್ರತಿ ಹೆಕ್ಟೇರ್‌ಗೆ ₹30 ಸಾವಿರ ಮತ್ತು ದ್ವಿತೀಯ ವರ್ಷ ₹10 ಸಾವಿರ ಸಹಾಯಧನದ ಜೊತೆಗೆ ಎರೆಹುಳು ಗೊಬ್ಬರ ಘಟಕ ನಿರ್ಮಾಣಕ್ಕಾಗಿ ಸರ್ಕಾರ ನೀಡುವ ಸಹಾಯ ಪಡೆದಿದ್ದಾರೆ. ತಮ್ಮ‌ ಪರಿಶ್ರಮ ಮತ್ತು ಸರ್ಕಾರದ ಸಹಾಯದಿಂದ ಕೃಷಿಯಲ್ಲಿ ಲಾಭಗಳಿಸಲು ಸಹಾಯವಾಗಿದೆ. ಇದರ ಜೊತೆಗೆ ಎಂಟು ಎಕರೆ ಪ್ರದೇಶದಲ್ಲಿ ಚಂಡು ಹೂವು ಮತ್ತು ಹತ್ತು ಎಕರೆ ಕಬ್ಬು ಬೆಳೆ ಬೆಳೆಯುತ್ತಿದ್ದಾರೆ.

ಕಡಿಮೆ ಖರ್ಚು ಮತ್ತು ಅಧಿಕ ಇಳುವರಿಯ ಜೊತೆ ಲಾಭದಾಯಕ ಕೃಷಿ ಎಂಬ ಸೂತ್ರ ಪಾಲಿಸುತ್ತಿದ್ದಾರೆ. ಈ ಮೂಲಕ ತಾಲ್ಲೂಕಿನ ಕೃಷಿ ಕ್ಷೇತ್ರದಲ್ಲಿ ಅಪಾರ ಯಶಸ್ಸು ಗಳಿಸಿದ್ದು ಇವರ ಸಾಧನೆ ಗುರುತಿಸಿ ಕೃಷಿ ಇಲಾಖೆ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಿದ್ದು, ಒಕ್ಕಲುತನವನ್ನು ಲಾಭದಾಯಕ ಕೃಷಿಯನ್ನಾಗಿ ಪರಿವರ್ತಿಸುವಲ್ಲಿ ಅನೇಕ ರೈತರಿಗೆ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ.

ಕೃಷಿಯಲ್ಲಿ ಸಾಂಪ್ರದಾಯಿಕ ವಿಧಾನಗಳಿಗಿಂತ ಆಧುನೀಕರಣ ವಿಧಾನ ಅನುಸರಿಸಿ ಅಧಿಕ ಲಾಭ ಪಡೆಯಬಹುದಾಗಿದೆ. ಸರ್ಕಾರದ ನೆರವು ಪಡೆಯಬೇಕು
- ಬಸವರಾಜ ಉಮಚಗಿ ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT