ಮುಳಗುಂದ: ಸಾವಯವ ಕೃಷಿಯಲ್ಲಿ ಸಾರ್ಥಕ ಬದುಕು ಕಟ್ಟಿಕೊಂಡ ಪ್ರಗತಿಪರ ರೈತ ಪರಮೇಶ್ವರಪ್ಪ ಜಂತ್ಲಿ ಅವರು ಪ್ರತಿರ್ಷವೂ ಉತ್ತಮ ಫಸಲಿನ ಜತೆಗೆ ಆದಾಯವನ್ನೂ ಕಾಣುತ್ತಿದ್ದಾರೆ.
ಪ್ರಗತಿಪರ ರೈತ ಪರಮೆಶ್ವರಪ್ಪ ಜಂತ್ಲಿ ಅವರು ಹೊಂಬಳ ರಸ್ತೆಯಲ್ಲಿರುವ ಒಟ್ಟು 20 ಎಕರೆ ಜಮೀನಿನಲ್ಲಿ 2 ಎಕರೆ ಜಮೀನನ್ನು ತೋಟವನ್ನಾಗಿ ನಿರ್ಮಿಸಿ, ಅದರಲ್ಲಿ ಕರಿಬೇವು, ಗಾಳಿಮರ, ಬಿದಿರು, ತೆಂಗು, ಶ್ರೀಗಂಧ, ಸಾಗವಾನಿ, ಅರಬೇವು, ಅಡಿಕೆ, ಹುಣಸಿ, ಮಲ್ಲಿಗೆ, ಗುಲಾಬಿ, ಸೀತಾಫಲ, ಪೇರಲು, ಲಿಂಬು, ನುಗ್ಗೆ, ನೇರಳೆ, ಮಹಾಗನಿ, ಮಾವು, ಹಲಸು, ಬಾಳೆ, ಪಪ್ಪಾಯ, ಡ್ರ್ಯಾಗನ್ ಫ್ರೂಟ್, ಕಡಗೂಲ ನೆಲ್ಲಿ, ದಾಳಿಂಬೆ, ಬೆಣ್ಣೆ ಹಣ್ಣು, ಉತ್ತತ್ತಿ ಬಾರಿಹಣ್ಣು, ಬೆಟ್ಟದ ನಲ್ಲಿ, ಸೇಬು, ಕಿತ್ತಳೆ, ಮೊಸಂಬಿ, ರಾಮಫಲ, ಅಂಜೂರು, ಬಳುವಲ ಹಣ್ಣು, ವೀಳ್ಯದೆಲೆ, ಬಿಲ್ವ ಪತ್ರೆ ಗಿಡಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಿಸಿದ್ದಾರೆ.
ಈಗಾಗಲೇ ಕಳೆದ ವರ್ಷ ನುಗ್ಗೆ, ಪೇರಲ, ಸೌತೆ, ಹೀರೇಕಾಯಿ, ಕೊತ್ತಂಬರಿ, ಕರಿಬೇವು ಮಾರಾಟ ಮಾಡಿ ಲಕ್ಷ ರೂಗಳವರೆಗೆ ಆದಾಯ ಕಂಡಿದ್ದಾರೆ. ಈ ಬಾರಿ ಸಹ ಪೇರಲ, ನುಗ್ಗಿ, ಕರಿಬೇವು ಬೆಳೆಯಿಂದ ಲಕ್ಷಗಟ್ಟಲೆ ಆದಾಯವನ್ನು ನಿರೀಕ್ಷೆ ಮಾಡಿದ್ದಾರೆ.
‘ತೋಟದಲ್ಲಿ ಎರಡು ಸ್ವದೇಸಿ ತಳಿಯ ಹಸುಗಳನ್ನು ಸಾಕಿ ಅವುಗಳ ಗೋಮೂತ್ರದಿಂದ ಜೀವಾಮೃತ ಸಿದ್ದಪಡಿಸಿ ಬೃಹತ್ ಟ್ಯಾಂಕ್‍ನಲ್ಲಿ ತುಂಬಿ ಡ್ರಿಪ್ ಮೂಲಕ ಗಿಡಗಳಿಗೆ ಜೀವಾ ಮೃತ ನೀಡುತ್ತಿತ್ತಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ಬೇವಿನ ಎಣ್ಣೆ ಮತ್ತು ಮಜ್ಜಿಗೆಯೊಂದಿಗೆ ಬೆರೆಸಿ ಸಿಂಪರಣೆ ಮಾಡುತ್ತಿರುವುದರಿಂದ ಇವರ ತೋಟದಲ್ಲಿ ಗಿಡಗಳು ಉತ್ತಮವಾಗಿ ಬೆಳೆದಿವೆ.
ಜೊತೆಗೆ ಪ್ರತಿ ತಿಂಗಳು ಸಾಧು-ಶರಣರು, ಕೃಷಿ, ತೋಟಗಾರಿಕೆ ಅಧಿಕಾರಿಗಳನ್ನು ತೋಟಕ್ಕೆ ಕರೆದು ಇತರೆ ರೈತರಿಗೂ ಮಾರ್ಗದರ್ಶನ ನೀಡುತ್ತಿ ದ್ದಾರೆ. ಇವರ ತೋಟಕ್ಕೆ ಹಿಂದಿನ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಭೇಟಿ ನೀಡಿ ಪ್ರಶಂಸಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟ, ಧಾರವಾಡ, ರಾಯಚೂರ, ಬಾಗಲ ಕೋಟ ಸೇರಿದಂತೆ ನಾಡಿನಲ್ಲಿ ಎಲ್ಲಿಯಾ ದರೂ ಕೃಷಿ ಮೇಳ ನಡೆದರೆ ಅಲ್ಲಿ ಪಾಲ್ಗೊಂಡು ಮಾರ್ಗದರ್ಶನ ಮತ್ತು ವಿಶೇಷತೆಗಳನ್ನು ತಿಳಿದುಕೊಳ್ಳು ವುದರಲ್ಲಿ ಹೆಚ್ಚು ಆಸಕ್ತರು. ರೈತರ ಕಷ್ಟ-ಸುಖದಲ್ಲಿ ಪಾಲ್ಗೊಂಡು ರೈತರ ಪರವಾಗಿ ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಲ್ಲುತ್ತಾರೆ.
ಸಾಕಷ್ಟು ಯುವ ರೈತರಿಗೆ ಮರ್ಗದರ್ಶಕರಾಗಿದ್ದಾರೆ. ಕೃಷಿ ಅನುಭವ ಹೊಂದಿರುವ ಪರಮೇಶ್ವರಪ್ಪ ಜಂತ್ಲಿ ಅವರಿಗೆ ಪ್ರಕೃತಿಯೊಂದಿಗೆ ಬೆರೆತು ಬಾಳಿದರೆ ಸ್ವರ್ಗ ಸುಖವಿದೆ ಎನ್ನುವುದನ್ನು ಕಂಡುಕೊಂಡಿದ್ದಾರೆ.
ಸಾವಯವ ಕೃಷಿ ಲಾಭದಾಯಕ. ಶ್ರಮವಿಲ್ಲದೆ ಸಾಧನೆ ಸಾಧ್ಯವಿಲ್ಲ. ಪ್ರಕೃತಿಯಲ್ಲಿ ಬೆರೆತಾಗ ಅದರ ಅನುಭವವೇ ಬೇರೆಯಾಗಿರುತ್ತದೆ. ಸಾವಯವ ಕೃಷಿಯಿಂದ ಸಾಕಷ್ಟು ಲಾಭ ಗಳಿಸಿದ್ದೆನೆ. ಈಗ ಎರಡು ಎಕರೆಯಲ್ಲಿ ಕೊರ್ಲ, ನವಣಿ ಮತ್ತು ಬರಗಾ ಬೆಳೆಯನ್ನು ಬೆಳೆದಿದ್ದು ಅದು ಕೂಡ ಉತ್ತಮ ಫಲ ನೀಡುವ ನೀರಿಕ್ಷೆಯಿದೆ. ಪ್ರಸಕ್ತ ಮುಂಗಾರಿನ ಹೆಸರು ಬೆಳೆ ಈಬಾರಿ 6 ಎಕರೆ ಒಣಬೇಸಾಯದಲ್ಲಿ 18 ಕ್ವಿಂಟಲ್ ಬಂದಿದೆ ಎನ್ನುತ್ತಾರೆ ಪ್ರಗತಿಪರ ರೈತ ಪರಮೇಶ್ವರಪ್ಪ ಜಂತ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.