ಶುಕ್ರವಾರ, ಜನವರಿ 17, 2020
22 °C

ಹತ್ತಿ ಖರೀದಿ ವಿಳಂಬ: ಲಕ್ಷ್ಮೇಶ್ವರದಲ್ಲಿ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಇಲ್ಲಿ ಭಾರತೀಯ ಹತ್ತಿ ನಿಗಮ(ಸಿಸಿಐ) ತರೆದಿರುವ ಖರೀದಿ ಕೇಂದ್ರದಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ವಿಳಂಬವಾದ್ದರಿಂದ ಆಕ್ರೋಶಗೊಂಡ ರೈತರು ಬುಧವಾರ ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ನೂರಾರು ರೈತರು ಬುಧವಾರ ಹತ್ತಿ ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ತಂದಿದ್ದರು. ಒಮ್ಮೆಲೇ ಸಾಕಷ್ಟು ಸಂಖ್ಯೆಯಲ್ಲಿ ರೈತರು ಬಂದಿದ್ದರಿಂದ ಖರೀದಿ ವಿಳಂಬವಾಯಿತು. ದಿನವಿಡೀ ಖರೀದಿ ಪ್ರಕ್ರಿಯೆ ನಡೆದರೂ, 80 ಟ್ರ್ಯಾಕ್ಟರ್‌ಗಳಲ್ಲಿ ಬಂದಿದ್ದ ಹತ್ತಿ  ಖರೀದಿಯಾಯಿತು. ಇನ್ನೂ 60 ರಿಂದ 70 ಟ್ರ್ಯಾಕ್ಟರ್‌ಗಳು ಹತ್ತಿ ಹೇರಿಕೊಂಡು ಸರತಿ ಸಾಲಿನಲ್ಲಿ ನಿಂತಿದ್ದವು.

‘ಹತ್ತಿ ಸಂಗ್ರಹಣೆ ಮಾಡಲು ಸ್ಥಳದ ಸಮಸ್ಯೆಯಿಂದಾಗಿ ಸದ್ಯಕ್ಕೆ ಖರೀದಿ ಸ್ಥಗಿತಗಳೊಸಲಾಗುವುದು ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದರು.  ಇದರಿಂದ ಕೆರಳಿದ ರೈತರು, ರಸ್ತೆಗೆ ಅಡ್ಡಲಾಗಿ ಹತ್ತಿ ತುಂಬಿದ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

‘ನಾವು ಮಂಗಳವಾರ ಮಧ್ಯಾಹ್ನದಿಂದಲೇ ಊಟ, ನಿದ್ರೆ ಬಿಟ್ಟು ಪಾಳೆ ಹಚ್ಚೇವಿ. ಈವತ್ತು ನಾವು ತಂದ ಹತ್ತಿಯನ್ನು ಖರೀದಿಸಲೇಬೇಕು’ ಎಂದು ಪಟ್ಟು ಹಿಡಿದರು. ಇದರಿಂದಾಗಿ ಅಲ್ಲಿ ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು.

ಸ್ಥಳಕ್ಕೆ ಬಂದ ಪಿಎಸ್‌ಐ ಶಿವಯೋಗಿ ಲೋಹಾರ ಅವರು ರೈತರನ್ನು ಸಮಾಧಾನಪಡಿಸಿ ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಿದರು. ಇದಕ್ಕೆ ಮಣಿಯದ ರೈತರು, ‘ಹತ್ತಿಯನ್ನು ಖರೀದಿಸುವವರೆಗೆ ಇಲ್ಲಿಂದ ಹೋಗುವುದಿಲ್ಲ’ ಎಂದರು. ನಂತರ ಲೋಹಾರ ಅವರು ‘ಸಿಸಿಐ’ ಅಧಿಕಾರಿ ಡಿ.ಶಕ್ತಿವೇಲು ಅವರೊಂದಿಗೆ ಮಾತನಾಡಿ, ರೈತರು ತಂದಿರುವ ಹತ್ತಿಯನ್ನು ಸಂಪೂರ್ಣವಾಗಿ ಖರೀದಿಸಲು ಮನವೊಲಿಸಿದರು. ನಂತರ ರೈತರು ಪ್ರತಿಭಟನೆ ಹಿಂಪೆಡದರು.

‘ಲಕ್ಷ್ಮೇಶ್ವರ ಮತ್ತು ಗದಗ ಕೇಂದ್ರಗಳಲ್ಲಿ ಪ್ರತಿದಿನ  60 ಟ್ರ್ಯಾಕ್ಟರ್‌ಗಳಷ್ಟು ಹತ್ತಿಯನ್ನು ಮಾತ್ರ ಖರೀದಿಸಲಾಗುವುದು’ ಎಂದು ‘ಸಿಸಿಐ’ ಅಧಿಕಾರಿ ಡಿ.ಶಕ್ತಿವೇಲು ಹೇಳಿದರು.

ಪ್ರತಿಕ್ರಿಯಿಸಿ (+)