ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಟ್‌ ಸರ್ಕೀಟ್‌ಗೆ 55 ಅಂಗಡಿಗಳು ಭಸ್ಮ: ₹1 ಕೋಟಿಗೂ ಹೆಚ್ಚು ಹಾನಿ

ಗದಗ ಮಾರುಕಟ್ಟೆಯಲ್ಲಿ ಬೆಳಗಿನ ಜಾವ 5 ಗಂಟೆಗೆ ಘಟನೆ; ಸುಟ್ಟು ಕರಕಲಾದ ಹಣ್ಣು, ತರಕಾರಿಗಳು
Last Updated 4 ಫೆಬ್ರುವರಿ 2020, 14:14 IST
ಅಕ್ಷರ ಗಾತ್ರ

ಗದಗ: ಇಲ್ಲಿನ ಗ್ರೇನ್‌ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡು ನಗರಸಭೆಗೆ ಸೇರಿದ 7 ಮಳಿಗೆಗಳು ಸೇರಿ 55ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ₹1 ಕೋಟಿಗೂ ಹೆಚ್ಚು ಹಾನಿ ಅಂದಾಜು ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಕಿರಾಣಿ ಅಂಗಡಿಗಳು, ಕಾಳುಕಡಿ, ಈರುಳ್ಳಿ ಮತ್ತು ಮೆಣಸಿನಕಾಯಿ ಸಗಟು ಅಂಗಡಿಗಳಿದ್ದು, ಎಲ್ಲ ಮಳಿಗೆಗಳು ಒಂದಕ್ಕೊಂದು ಅಂಟಿಕೊಂಡಿವೆ. ಶಾರ್ಟ್‌ ಸರ್ಕೀಟ್‌ನಿಂದ ಹೊತ್ತಿಕೊಂಡ ಬೆಂಕಿಯು ನೋಡು, ನೋಡುತ್ತಿದ್ದಂತೆ ಮಳಿಗೆಯಿಂದ, ಮಳಿಗೆಗೆ ವ್ಯಾಪಿಸಿ ಇಡೀ ಮಾರುಕಟ್ಟೆಯನ್ನು ಆವರಿಸಿದೆ.

‘ಮಾರುಕಟ್ಟೆಯ ಒಳಗಿನ ಮಳಿಗೆಗಳಲ್ಲಿ ಮಲಗಿದ್ದ ಕೆಲವು ಕಾರ್ಮಿಕರು ಬೆಂಕಿಯ ಝಳದಿಂದ ಎಚ್ಚರಗೊಂಡು, ಭಯದಿಂದ ಕೂಗುತ್ತಾ ಹೊರಗೋಡಿ ಬಂದರು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಕರೆ ಮಾಡಲಾಯಿತು. ಆದರೆ, ಮಾರುಕಟ್ಟೆ ಇಕ್ಕಟ್ಟಾದ ಸ್ಥಳವಾದ್ದರಿಂದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಷ್ಟರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹಣ್ಣು, ತರಕಾರಿ, ದಿನಸಿ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

‘ಮಾರುಕಟ್ಟೆಯಲ್ಲಿ ಮಳಿಗೆಗಳು ಒಂದಕ್ಕೊಂದು ಹೊಂದಿಕೊಂಡಿವೆ. ಹೀಗಾಗಿ ಬೆಂಕಿ ಕ್ಷಿಪ್ರಗತಿಯಲ್ಲಿ ಉಳಿದ ಮಳಿಗೆಗಳಿಗು ವ್ಯಾಪಿಸಿತು. ಹಣ್ಣು, ತರಕಾರಿ,ಕಿರಾಣಿ ಸಾಮಗ್ರಿ ಅಲ್ಲದೇ, ವ್ಯಾಪಾರಿಗಳು ಮಾರಾಟಕ್ಕಾಗಿ ಶೇಖರಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಬಿತ್ತನೆ ಬೀಜಗಳು ಅಗ್ನಿಗೆ ಆಹುತಿಯಾಗಿವೆ’ ಎಂದು ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಷಾಸಾಬ್‌ ಹೇಳಿದರು.

‘ನಸುಕಿನಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ 6 ಗಂಟೆಯ ನಂತರ ಮಾರುಕಟ್ಟೆಯಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಸದ್ಯ ಬೆಂಕಿ ನಂದಿಸಲಾಗಿದ್ದು, ಯಾವುದೇ ಜೀವಹಾನಿ ಆಗಿಲ್ಲ. ವಸ್ತುಗಳ ಹಾನಿಯ ನಿಖರ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT