ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾಪನೆಯಾಗುವುದೇ ಅಗ್ನಿಶಾಮಕ ಠಾಣೆ?

ಗಜೇಂದ್ರಗಡ: ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಮಾಹಿತಿ ಒದಗಿಸುವಂತೆ ನಿರ್ದೇಶಕರಿಂದ ಪತ್ರ
Last Updated 10 ಜೂನ್ 2021, 6:03 IST
ಅಕ್ಷರ ಗಾತ್ರ

ಗಜೇಂದ್ರಗಡ: ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ತಾಲ್ಲೂಕು ಮತ್ತು ಹೋಬಳಿಗಳಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಮಾಹಿತಿ ಒದಗಿಸುವಂತೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಎಲ್ಲಾ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳಿಗೆ ಜೂ.1ರಂದು ಪತ್ರ ಬರೆದಿದ್ದು, ಅದರಲ್ಲಿ ಗಜೇಂದ್ರಗಡ ಪಟ್ಟಣ ಸಹ ಸೇರಿದೆ.

ಜಿಲ್ಲೆಯಲ್ಲಿ ಗದಗ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ ತಾಲ್ಲೂಕುಗಳಲ್ಲಿ ಈಗಾಗಲೇ ಪ್ರಾದೇಶಿಕ ಅಗ್ನಿಶಾಮಕ ಠಾಣೆಗಳಿವೆ. ಅಲ್ಲದೆ ತಾಲ್ಲೂಕಿಗೊಂದು ಅಗ್ನಿಶಾಮಕ ಠಾಣೆ ಇರಬೇಕೆಂಬ ನಿಯಮವಿದೆ. ಆದರೆ ಗಜೇಂದ್ರಗಡ ನೂತನ ತಾಲ್ಲೂಕು ಕೇಂದ್ರವಾಗಿ ಸ್ಥಾಪನೆಯಾಗಿ ಮೂರು ವರ್ಷ ಕಳೆದರೂ ಅಗ್ನಿಶಾಮಕ ಠಾಣೆ ಸ್ಥಾಪನೆಯಾಗಿಲ್ಲ.

ಈ ಭಾಗದಲ್ಲಿ ರೈತರ ಜಮೀನು ಹಾಗೂ ಇನ್ನಿತರ ಕಡೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ 28 ಕಿ.ಮೀ ದೂರದ ರೋಣದ ಅಗ್ನಿಶಾಮಕ ಠಾಣೆಯವರು ಬಂದು ಸೇವೆ ನೀಡಬೇಕಾದ ಪರಿಸ್ಥಿತಿ ಇದೆ. ಅಗ್ನಿ ಅವಘಡಗಳು ಸಂಭವಿಸಿದಾಗ ಅಲ್ಲಿಂದ ಬರುವಷ್ಟರಲ್ಲಿ ಭಾಗಶಃ ಹಾನಿ ಆಗಿರುತ್ತದೆ.

ಸದ್ಯ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಗಜೇಂದ್ರಗಡದಲ್ಲಿ ಕೆ-ಸೇಫ್‌ 2 ಯೋಜನೆ ಅಡಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಮಾಹಿತಿ ಕೋರಿದ್ದು, ಗಜೇಂದ್ರಗಡದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣವಾದರೆ ಈ ಭಾಗದಲ್ಲಿ ಸಂಭವಿಸುವ ಅಗ್ನಿ ಅವಘಡಗಳ ಹಾನಿ ತಪ್ಪಿಸಲು ಸಹಕಾರಿಯಾಗಲಿದೆ.

‘5 ವರ್ಷಗಳಲ್ಲಿ ಗಜೇಂದ್ರಗಡ ಭಾಗದಲ್ಲಿ 52 ಅಗ್ನಿ ಅವಘಡಗಳು ಸಂಭವಿಸಿವೆ. 3 ರಕ್ಷಣಾ ಕರೆಗಳು ಬಂದಿವೆ. ಗಜೇಂದ್ರಗಡದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಈ ಹಿಂದೆಯೂ ಜಾಗದ ಕುರಿತು ಪರಿಶೀಲನೆ ನಡೆಸಲಾಗಿತ್ತು. ಆದರೆ ಸೂಕ್ತ ಜಾಗ ಸಿಗದ ಕಾರಣ ವಿಳಂಬವಾಗಿತ್ತು. ಈಗಲೂ ತಾಲ್ಲೂಕು ಆಡಳಿತಕ್ಕೆ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಜಾಗ ನೀಡುವಂತೆ ಮನವಿ ಮಾಡಿದ್ದೇವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಗಜೇಂದ್ರಗಡದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಮುಂದಾಗಬೇಕು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎನ್.ಎಸ್.ಕಗ್ಗಲಗೌಡರ ಹೇಳಿದರು.

‘ಗಜೇಂದ್ರಗಡದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಲು ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ 14 ಗುಂಟೆ ಜಾಗ ತೋರಿಸಲಾಗಿದೆ. ಇಲಾಖೆ ವಸತಿ ಸಮುಚ್ಚಯಕ್ಕೆ ಗೋಡೆಕಾರ ಅವರ ಪ್ಲಾಟ್‌ನಲ್ಲಿ 6 ಸಾವಿರ ಚದರಡಿ ಜಾಗ ತೋರಿಸಲಾಗಿದೆ. ಲಾಕ್‌ಡೌನ್ ಇರುವುದರಿಂದ ಅಧಿಕಾರಿಗಳು ಭೇಟಿಯಾಗಿಲ್ಲ. ಅನ್‌ಲಾಕ್‌ ನಂತರ ಶೀಘ್ರದಲ್ಲೇ ಠಾಣೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ದೊರಕದ ವಿವಿಧ ಕಚೇರಿ ಭಾಗ್ಯ

ಗಜೇಂದ್ರಗಡ ನೂತನ ತಾಲ್ಲೂಕು ಕೇಂದ್ರವಾಗಿ ಮೂರು ವರ್ಷ ಕಳೆದರೂ ಸಹ ಹಳೆ ಪ್ರವಾಸಿ ಮಂದಿರದಲ್ಲಿ ಕಂದಾಯ ಇಲಾಖೆ, ಊರಾಚೆಗಿನ ಬಾಡಿಗೆ ಕಟ್ಟಡದಲ್ಲಿ ತಾಲ್ಲೂಕು ಪಂಚಾಯ್ತಿ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಬಿಇಒ ಕಚೇರಿ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಬಿಸಿಎಂ, ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗ, ಅಬಕಾರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಅಕ್ಷರ ದಾಸೋಹ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಗಳು ಆರಂಭವಾಗಿಲ್ಲ.

ಗಜೇಂದ್ರಗಡದಲ್ಲಿ ರೈತ ಸಂಪರ್ಕ ಕೇಂದ್ರವಿಲ್ಲ. ಬದಲಾಗಿ ಕೃಷಿ ಮಾರಾಟ ಮಳಿಗೆ ಇದೆ. ಇದರಿಂದ ರೈತರು ಕೃಷಿ ಉಪಕರಣ, ಬೀಜ ರಸಗೊಬ್ಬರ ಖರಿದಿಸಲು ನರೇಗಲ್, ರೋಣ ಅವಲಂಬಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT