ಶನಿವಾರ, ಜುಲೈ 31, 2021
28 °C
ನಗರಸಭೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಖಡಕ್‌ ಎಚ್ಚರಿಕೆ

‘ರಸ್ತೆ ಗುಂಡಿ ಮುಚ್ಚಿ, ತೆರಿಗೆ ಬಾಕಿ ವಸೂಲಿ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ನಗರದಲ್ಲಿ ಎಲ್ಲ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಬೇಕು.ತೆರಿಗೆ ಬಾಕಿಯನ್ನು 15 ದಿನಗಳ ಒಳಗಾಗಿ ವಸೂಲಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ನಗರಸಭೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ನಗರಸಭೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ತೆರಿಗೆ ಸಂಗ್ರಹ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

‘ನಗರಸಭೆಯ ನಿರ್ವಹಣೆಗೆ ತೆರಿಗೆಯೇ ಮುಖ್ಯ ಆದಾಯವಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆಯ ತೆರಿಗೆ ವ್ಯಾಪ್ತಿಗೆ ಒಳಪಡುವ ಹಾಗೂ ತೆರಿಗೆಯಿಂದ ಹೊರಗುಳಿದ ಎಲ್ಲ ಆಸ್ತಿಗಳ ಸಮೀಕ್ಷೆ ಮಾಡಿಸಿ, ತೆರಿಗೆ ಬಾಕಿ ವಸೂಲಿಗೆ ಕ್ರಮ ವಹಿಸಬೇಕು. ಮಳಿಗೆಗಳ ಬಾಡಿಗೆ ಬಾಕಿ, ನೀರಿನ ಬಾಕಿ ಹಾಗೂ ವ್ಯಾಪಾರ ಪರವಾನಗಿಗೆ ಸಂಬಂಧಿಸಿದ ತೆರಿಗೆಗಳನ್ನು ಆಗಸ್ಟ್‌ 15ರ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡಲೇಬೇಕು’ ಎಂದು ತಾಕೀತು ಮಾಡಿದರು.

‘‘ತೆರಿಗೆದಾರರಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಗೂ ಬಡ್ಡಿ ರಹಿತ ತೆರಿಗೆಯಡಿ ಕೆಲವು ವಿನಾಯ್ತಿಗಳಿವೆ. ಇದರ ಪ್ರಯೋಜನ ಪಡೆಯುವಂತೆ ವ್ಯಾಪಕ ಪ್ರಚಾರ ನೀಡಬೇಕು. ನಗರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಯಾವುದೇ ಬಾಕಿ ಉಳಿಸಿಕೊಳ್ಳದೆ 10 ದಿನದೊಳಗಾಗಿ ನೀಡಬೇಕು’ ಎಂದು ಸೂಚಿಸಿದರು.

ವಸತಿ ಯೋಜನೆಯ ಪ್ರಗತಿ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ, ಜಿಪಿಎಸ್‌ ಮತ್ತು ಎಂಐಎಸ್‌ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನಗರಸಭೆಯ ಎಲ್ಲ ದಾಖಲೆಗಳನ್ನು ವರ್ಗಿಕರಣಗೊಳಿಸಿ ಅವುಗಳ ಸರಿಯಾದ ನಿರ್ವಹಣೆಗೆ ಕ್ರಮ ಜರುಗಿಸಬೇಕು’ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕ  ಎಸ್.ಎನ್.ರುದ್ರೇಶ್, ಪೌರಾಯುಕ್ತ ಮನ್ಸೂರ ಅಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.