ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ರಿಯ ಪ್ರಕರಣಗಳಿಲ್: ತಗ್ಗಿದ ಆತಂಕ

ಹೊರ ಜಿಲ್ಲೆಗಳಿಂದ ಬರುತ್ತಿರುವ ಕಾರ್ಮಿಕರ ಮೇಲೆ ನಿಗಾ
Last Updated 11 ಮೇ 2020, 14:12 IST
ಅಕ್ಷರ ಗಾತ್ರ

ಗದಗ: ರಾಜ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ 22 ಜಿಲ್ಲೆಗಳ ಪಟ್ಟಿಯಲ್ಲಿ ಸದ್ಯ ಗದಗ ಜಿಲ್ಲೆಯು 19ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಯಾವುದೇ ಸಕ್ರಿಯ ಪ್ರಕರಣ ಇಲ್ಲ. ಹೀಗಾಗಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಆತಂಕ ಕಡಿಮೆಯಾಗಿದೆ.

ಆದರೆ, ಸೋಂಕು ಯಾವುದೇ ಮೂಲದಿಂದ ಜಿಲ್ಲೆಯೊಳಗೆ ಪ್ರವೇಶಿಸದಂತೆ ತಡೆಯಲು ಮತ್ತು ಸಮುದಾಯದ ಮಟ್ಟಕ್ಕೆ ಅದು ಹರಡುವುದನ್ನು ತಪ್ಪಿಸಲು ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಇಲಾಖೆಯು ಈಗಾಗಲೇ ಸಮೀಕ್ಷೆ ಆರಂಭಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಅಂತರ ಪಾಲಿಸುವುದರ ಮೇಲೆ ನಿಗಾ ವಹಿಸುವುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಮಾಸ್ಕ್‌ ಧರಿಸುತ್ತಿರುವ ಜನರು ಅಂತರ ಪಾಲಿಸಲು ಮರೆಯುತ್ತಿದ್ದಾರೆ.

ಇನ್ನೊಂದೆಡೆ ಜಿಲ್ಲಾಡಳಿತವು ಶಂಕಿತರನ್ನು ಗರಿಷ್ಠ ಸಂಖ್ಯೆಯಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪರೀಕ್ಷೆಗಾಗಿ ಮಾದರಿಗಳನ್ನು ಕಳುಹಿಸುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 2400ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇವರಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಮನೆಯಲ್ಲೇ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿ ಕಳೆದಿದ್ದಾರೆ. ಇದುವರೆಗೆ 350ಕ್ಕೂ ಹೆಚ್ಚು ಮಂದಿ ಶಂಕಿತರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 2500 ಕ್ಕೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಕೋವಿಡ್‌ ದೃಢಪಟ್ಟಿರುವ 22 ಜಿಲ್ಲೆಗಳ ಪಟ್ಟಿಯಲ್ಲಿ ಸದ್ಯ ಬೆಂಗಳೂರು ಗ್ರಾಮಾಂತರ, ಉಡುಪಿ ಮತ್ತು ಕೊಡುಗು ಜಿಲ್ಲೆಗಳನ್ನು ಹೊರತುಪಡಿಸಿದರೆ ಗದಗ ಜಿಲ್ಲೆಯಲ್ಲಿ ಮಾತ್ರ ಸಕ್ರಿಯ ಪ್ರಕರಣಗಳಿಲ್ಲ. ಏ. 28ರಂದು ಜಿಲ್ಲೆಯಲ್ಲಿ 5ನೇ ಕೋವಿಡ್‌ ಪಾಸಿಟಿವ್‌ ಪ್ರಕರಣ ಪತ್ತೆಯಾಗಿತ್ತು. ಆ ನಂತರ ಹೊಸ ಪ್ರಕರಣಗಳು ವರದಿಯಾಗದಿರುವುದು, ಜಿಲ್ಲಾಡಳಿತಕ್ಕೆ, ಜಿಲ್ಲೆಯ ಜನರಿಗೆ ದೊಡ್ಡ ಮಟ್ಟದಲ್ಲಿ ಸಮಾಧಾನ ತಂದಿದೆ.

ಲಾಕ್‌ಡೌನ್‌ ಸಡಿಲಿಸಿದ ನಂತರ, ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಬರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಗದಗ ಜಿಲ್ಲೆಯಿಂದ ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದ 807 ಕಾರ್ಮಿಕರು ಕಳೆದೆರಡು ವಾರಗಳಲ್ಲಿ ತಮ್ಮ ಗ್ರಾಮಗಳಿಗೆ ಮರಳಿ ಬಂದಿದ್ದಾರೆ. ಇವರೆಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಜಿಲ್ಲೆಯ ಹೊರಗಿನಿಂದ ಬಂದವರಲ್ಲಿ ಇಲ್ಲಿಯವರೆಗೆ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ.

ಜಿಲ್ಲೆಯಲ್ಲಿ ವರದಿಯಾದ 5 ಪಾಸಿಟಿವ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಒಟ್ಟು 987 ವ್ಯಕ್ತಿಗಳನ್ನು ಪತ್ತೆ ಹಚ್ಚಿ ಜಿಲ್ಲಾಡಳಿತ ಕ್ವಾರಂಟೈನ್‌ಗೆ ಒಳಪಡಿಸಿತ್ತು. ಬಾಗಲಕೋಟಿ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಪ್ರಕರಣಕ್ಕೆ ಸಂಬಂಧಿಸಿದಂತೆ (ಪಿ -107) ಜಿಲ್ಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 23 ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದ 303 ವ್ಯಕ್ತಿಗಳನ್ನು ಪತ್ತೆ ಹಚ್ಚಿ ನಿಗಾ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT