ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ: ಅನಿಲ್‌ ಮೆಣಸಿನಕಾಯಿ

Published 24 ಮೇ 2023, 7:35 IST
Last Updated 24 ಮೇ 2023, 7:35 IST
ಅಕ್ಷರ ಗಾತ್ರ

ಗದಗ: ‘ಜವುಳಗಲ್ಲಿಯಲ್ಲಿ ಅತಿಕ್ರಮಣವಾಗಿರುವ ವೀರನಾರಾಯಣ ದೇವಸ್ಥಾನದ ಆಸ್ತಿ ರಕ್ಷಣೆಗೆ ಬದ್ಧನಿದ್ದು, ಅದನ್ನು ದೇವಸ್ಥಾನಕ್ಕೆ ಮರಳಿಸುವವರೆಗೂ ಹೋರಾಟ ನಿಲ್ಲದು‘ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ‌ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಾಲಯಕ್ಕೆ ಹೋಗಿಯಾದರೂ ಬಫರ್ ಝೋನ್‌ನಲ್ಲಿ ಇರುವ ಕಟ್ಟಡಗಳನ್ನು ತೆರವುಗೊಳಿಸುವ ಪ್ರಯತ್ನ ಮಾಡುವೆ. ಜತೆಗೆ ವಖಾರಸಾಲು ಆಸ್ತಿ ಯಾವುದೇ ಖಾಸಗಿ ವ್ಯಕ್ತಿಯ ಪಾಲಾಗಲು ಬಿಡುವುದಿಲ್ಲ‘ ಎಂದು ತಿಳಿಸಿದರು.

‘ಸತತ ಮೂರು ಚುನಾವಣೆಗಳಲ್ಲಿ ನಾನು ಎರಡನೇ ಸ್ಥಾನದಲ್ಲಿದ್ದೇನೆ. ಈ ಬಾರಿ ಚುನಾವಣೆಯಿಂದ ದೂರ ಸರಿಯಲು ನಿರ್ಧರಿಸಿದ್ದೆ. ಆದರೆ, ಪಕ್ಷವು ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೈಪೋಟಿ ನೀಡುವ ಉದ್ದೇಶದಿಂದ ಮತ್ತೆ ನನಗೆ ಸ್ಪರ್ಧೆಗೆ ಅವಕಾಶ ನೀಡಿತ್ತು. ಹಲವಾರು ಕನಸುಗಳನ್ನು ಇಟ್ಟುಕೊಂಡು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ. ಆದರೆ, ಗೆಲುವು ಸಾಧ್ಯವಾಗಲಿಲ್ಲ. ಜನರು ನೀಡಿದ ತೀರ್ಪು ಸ್ವಾಗತಿಸುವೆ. ಕ್ಷೇತ್ರದ 75 ಸಾವಿರ ಜನರು ಬಿಜೆಪಿ ಬೆಂಬಲಿಸಿದ್ದರಿಂದ ಅವರಿಗೆ ನಾನು ಕೃತಜ್ಞನಾಗಿದ್ದೇನೆ‘ ಎಂದು ತಿಳಿಸಿದರು.

‘ಗದಗ ಕ್ಷೇತ್ರದಿಂದ ಗೆದ್ದಿರುವ ಕ್ಷೇತ್ರದ ಶಾಸಕರು ಈಗಲಾದರೂ ಅವಳಿ ನಗರದಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆ, ಸೂರುರಹಿತರಿಗೆ ಪಕ್ಷಾತೀತವಾಗಿ ಮನೆ ಹಂಚಿಕೆ, ಯುವಕರಿಗೆ ಉದ್ಯೋಗ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು‘ ಎಂದು ಆಗ್ರಹಿಸಿದರು.

‘ಚುನಾವಣೆಯಲ್ಲಿ ಸೋತ ನಂತರ ಅನಿಲ್ ಮೆಣಸಿನಕಾಯಿ ಬೆಂಗಳೂರಿಗೆ ಹೋಗುತ್ತಾರೆ, ಮನೆ ಮಾರಿದ್ದಾರೆ, ಕಾರು ಕಸಿದುಕೊಂಡಿದ್ದಾರೆ ಅಂತ ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಕ್ಷೇತ್ರದ ಜನ ಜನರ ಪ್ರೀತಿಗೆ ಬೆಲೆ ಕಟ್ಟಲಾಗದ್ದು, ಹೀಗಾಗಿ ಜನರ ಜತೆಗೆ ಇರಬೇಕು ಎನ್ನುವ ನಿಲುವು ತೆಗೆದುಕೊಂಡಿದ್ದೇವೆ‘ ಎಂದು ಹೇಳಿದರು.

‘ಜಿ.ಸಿ.ಎಲ್. ಸೇರಿ ಹಲವು ಚಟುವಟಿಕೆ ಆರಂಭಿಸಿದ್ದು ಚುನಾವಣೆ ಉದ್ದೇಶದಿಂದಲ್ಲ. ನಾನೀಗ ಚುನಾವಣೆಯಲ್ಲಿ ಸೋತಿದ್ದರೂ ಶೀಘ್ರದಲ್ಲೇ ಸಾಹಿತ್ಯ ಸಿಂಚನ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ‘ ಎಂದು ಹೇಳಿದರು.

‘ಚುನಾವಣೆಯಲ್ಲಿ ನಗರಸಭೆಯ ಕೆಲವು ಸದಸ್ಯರು ಸೇರಿ ಕೆಲ ಮುಖಂಡರು ಪಕ್ಷದ್ರೋಹ ಮಾಡಿದ್ದಾರೆ. ಅದನ್ನು ಎಲ್ಲಿ ಹೇಳಬೇಕು, ಅಲ್ಲಿ ಹೇಳುತ್ತೇನೆ. ಅಲ್ಲದೇ, ಇದು ಪಕ್ಷದ ಗಮನಕ್ಕೂ ಇದ್ದು, ಅವರೇ ಈ ಬಗ್ಗೆ ಆಂತರಿಕ ತನಿಖೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಲಿದ್ದಾರೆ‘ ಎಂದು ತಿಳಿಸಿದರು.

ಗದಗ-ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಗದಗ ಶಹರ ಬಿಜೆಪಿ ಅಧ್ಯಕ್ಷ ಅನಿಲ ಅಬ್ಬಿಗೇರಿ, ಮುಖಂಡರಾದ ವಸಂತ ಪಡಗದ, ಚಾಂದಸಾಬ ಕೊಟ್ಟೂರ, ರಮೇಶ ಸಜ್ಜಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT