ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ಕೊರತೆಸೊರಗಿದ ಪಶು ಆಸ್ಪತ್ರೆಗಳು

ಸರ್ಕಾರ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ; ಜಾನುವಾರುಗಳ ಚಿಕಿತ್ಸೆಗೆ ತೊಂದರೆ
Last Updated 5 ಸೆಪ್ಟೆಂಬರ್ 2022, 2:52 IST
ಅಕ್ಷರ ಗಾತ್ರ

ಗದಗ: ಪಶುಸಂಗೋಪನೆ ಮತ್ತು ಹೈನುಗಾರಿಕೆ ಚಟುವಟಿಕೆಗಳಿಗೆ ಆಧಾರವಾಗಿ ಕೆಲಸ ಮಾಡಬೇಕಿರುವ ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಕೊರತೆಯಿಂದ ನಲುಗುತ್ತಿದೆ.

ಗದಗ ಜಿಲ್ಲೆಯಲ್ಲಿರುವ ಪಶು ಆಸ್ಪತ್ರೆಗಳ ಸ್ಥಿತಿ ಚಿಂತಾಜನಕವಾಗಿದ್ದು, ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೇ ಪ್ರಾಣಿಗಳಂತೆ ಮೂಕರೋಧನೆ ಅನುಭವಿಸುತ್ತಿವೆ.ಕಾಯಕಲ್ಪಕ್ಕೆ ಕ್ರಮವಹಿಸಬೇಕಿದ್ದ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಇಡೀ ವ್ಯವಸ್ಥೆ ಹದಗೆಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು 8,18,042 ಲಕ್ಷ ಜಾನುವಾರುಗಳಿವೆ. ವಾತಾವರಣ ಬದಲಾವಣೆಗೆ ಆದಂತೆ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗುತ್ತಿವೆ. ಆದರೆ, ಜಾನುವಾರುಗಳ ಚಿಕಿತ್ಸೆಗೆ ಬೇಕಿರುವ ಅಗತ್ಯ ಸಿಬ್ಬಂದಿ ಹಾಗೂ ವೈದ್ಯಕೀಯ ಸಲಕರಣೆಗಳು ಇಲ್ಲವಾಗಿದೆ. ಸೌಕರ್ಯಗಳಿದ್ದರೂ ಕೆಲವೆಡೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಕೆಲವರು ಎರಡ್ಮೂರು ಕಡೆಗಳಲ್ಲಿ ಕೆಲಸ ನಿರ್ವಹಿಸಬೇಕಿರುವ ಪರಿಸ್ಥಿತಿ ಇದೆ. ಪಶು ಸಂಗೋಪನಾ ಇಲಾಖೆಯ ವಿವಿಧ ಹಂತದ ಹುದ್ದೆಗಳು ಸಹ ಖಾಲಿ ಇರುವುದರಿಂದ ಸೇವೆ ಮತ್ತು ಆಡಳಿತಾತ್ಮಕ ಕೆಲಸಗಳು ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ.

ಉಪಕರಣಗಳಿಲ್ಲ

ರೋಣ: ತಾಲ್ಲೂಕಿನಾದ್ಯಂತ 12 ಪಶು ಆಸ್ಪತ್ರೆಗಳಿದ್ದು, ಅವುಗಳಲ್ಲೆಲ್ಲಾ ಸಿಬ್ಬಂದಿ ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ.

ಮುಖ್ಯ ವೈದ್ಯಾಧಿಕಾರಿ, ವೈದ್ಯರು, ಜಾನುವಾರು ಅಭಿವೃದ್ಧಿ ಅಧಿಕಾರಿಗಳು, ಪರೀಕ್ಷಕರು, ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು, ಗ್ರೂಪ್ ಡಿ ಹುದ್ದೆಗಳು ಒಟ್ಟು ಮಂಜೂರಾತಿ 94 ಇದ್ದರೆ ಕಾರ್ಯನಿರ್ವಹಿಸುತ್ತಿರುವುದು 35 ಮಾತ್ರ. ಇನ್ನುಳಿದ 59 ಹುದ್ದೆಗಳು ಸುಮಾರು ವರ್ಷಗಳಿಂದ ಖಾಲಿಯಾಗಿಯೇ ಉಳಿದಿವೆ.

ತಾಲ್ಲೂಕು ಪಶು ಆಸ್ಪತ್ರೆಯಲ್ಲಿ ಜಾನುವಾರುಗಳ ಚಿಕಿತ್ಸೆಗೆ ಬೇಕಿರುವ ಉಪಕರಣಗಳು ಕೂಡ ಲಭ್ಯವಿಲ್ಲ. ಕಟ್ಟಡ
ಪಾಳು ಬಿದ್ದಂತೆ ಕಾಣಿಸುತ್ತದೆ. ಕನಿಷ್ಠ ನಾಮಫಲಕವೂ ಇಲ್ಲ. ಸ್ವಚ್ಛತೆಯಂತೂ ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ 33,668 ದನಕರುಗಳು ಇದ್ದರೆ; ಆಡು–ಮೇಕೆ, ಹಂದಿ, ನಾಯಿ ಹಾಗೂ ಇತರೆ
ಜಾನುವಾರುಗಳ ಸಂಖ್ಯೆ 99,555 ಇವೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ರೈತರು ಜಾನುವಾರು ಸಾಕಣೆ
ಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಸ್ಥಳೀಯ ರೈತ ಮುಖಂಡರಾದ ಶಶಿಧರ್ ಕೊಪ್ಪದ, ಶಿವಾನಂದ ಗಡಗಿ, ಈಶಣ್ಣ ಗಡಗಿ ತಿಳಿಸಿದರು.

‘ಪ್ರತಿ 5,000 ಜಾನುವಾರುಗಳಿಗೊಂದು ಪಶು ಆರೋಗ್ಯ ಕೇಂದ್ರ, ಅವುಗಳಿಗೆ ಅಗತ್ಯವಿರುವ ಸಿಬ್ಬಂದಿ ನೇಮಕಾ
ತಿಗೆ ಸರ್ಕಾರ ಕ್ರಮವಹಿಸಬೇಕು’ ಎಂಬುದುಸ್ಥಳೀಯರಆಗ್ರಹ.

ತಪ್ಪದ ಪರದಾಟ

ಶಿರಹಟ್ಟಿ: ಪಟ್ಟಣ ಹಾಗೂ ತಾಲ್ಲೂಕಿನ ಬೆಳ್ಳಟ್ಟಿ, ಮಾಗಡಿ, ಹೊಳೆಇಟಗಿ, ಬನ್ನಿಕೊಪ್ಪ ಕಡಕೋಳ, ಹೆಬ್ಬಾಳ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚುತ್ತಲೇ ಇದೆ.

ತಾಲ್ಲೂಕಿನ ಪಶು ಇಲಾಖೆಯಲ್ಲಿ 38 ಮಂಜುರಾದ ಹುದ್ದೆಗಳಿದ್ದು, ಅದರಲ್ಲಿ 32 ಹುದ್ದೆ ಖಾಲಿ ಇವೆ. ಕೇವಲ 7 ಹುದ್ದೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಇಡೀ ತಾಲ್ಲೂಕನ್ನು ನೋಡಿಕೊಳ್ಳುವ ಬಿಕ್ಕಟ್ಟು ಸೃಷ್ಟಿಯಾಗಿದೆ.

ಮುಖ್ಯ ಪಶುವೈದ್ಯಾಧಿಕಾರಿಗಳು, ಹಿರಿಯ ಪಶುವೈದ್ಯಾಧಿಕಾರಿಗಳು, ಜಾನುವಾರು ಅಭಿವೃದ್ಧಿ ಅಧಿಕಾರಿ, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರು ಮತ್ತು ಪಶುವೈದ್ಯಕೀಯ ಸಹಾಯಕರ ಕೊರತೆಯು ನೇರವಾಗಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

2012ರ ಜಾನುವಾರು ಗಣತಿ ಪ್ರಕಾರ ತಾಲ್ಲೂಕಿನಲ್ಲಿ ಸುಮಾರು 2 ಲಕ್ಷ ಜಾನುವಾರುಗಳಿವೆ. ಇದರಲ್ಲಿ ದನ 30,240, ಎಮ್ಮೆ 11,084, ಕುರಿ 74,344, ಮೇಕೆ 25,490 ಇವೆ. ಇವುಗಳಿಗೆ ಹರಡುವ ರೋಗಕ್ಕೆ ಚಿಕಿತ್ಸೆ ಪಡೆಯಬೇಕೆಂದರೆ, ವೈದ್ಯರನ್ನು ಹುಡುಕುತ್ತ ಸಾಗಬೇಕಿದೆ.

ಪಶು ಸಂಗೋಪನೆ‌ ಇಲಾಖೆಯು ಮೂಲಸೌಲಭ್ಯ ಹಾಗೂ ಯೋಜನೆಗಳ ನಿರ್ವಹಣೆಗೆ ಜಿಲ್ಲಾ ಪಂಚಾಯ್ತಿಯನ್ನೇ ಅವಲಂಬಿಸಿದೆ. ಬಾಯಲ್ಲಿ ಮಾತ್ರ ಹೈಟೆಕ್‌ ಮಂತ್ರ ಜಪಿಸುತ್ತಿದ್ದು, ಭೌತಿಕವಾಗಿ ಇನ್ನೂ ಹಳೆಯ ಸ್ಥಿತಿಯಲ್ಲಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಯ ಮೂಟೆ ಹೊತ್ತಿದ್ದು, ಇನ್ನುಂದೆಯಾದರೂ ಎಚ್ಚೆತ್ತುಕೊಳ್ಳಬೇಕೆಂಬುದು ಸಾರ್ವಜನಿಕರ ಅಭಿಲಾಷೆ.

ಸಿಬ್ಬಂದಿ ಕೊರತೆ

ನರೇಗಲ್:‌ ಪಟ್ಟಣದ ಪಶು ಚಿಕಿತ್ಸಾಲಯದ ಕಟ್ಟಡವು ಹೊಸದಾಗಿದ್ದರು ಕಾಂಪೌಂಡ್‌ ಹಾಗೂ ಗರ್ಭಧಾರಣೆಗೆ ನೀಡುವ ಚುಚ್ಚುಮದ್ದಿಗೆ ಬಯಲು ಜಾಗದಲ್ಲಿ ನೆರಳಿನ ಅವಶ್ಯಕತೆ ಇದೆ.

ಪಶುವೈದ್ಯಾಧಿಕಾರಿ, ಜಾನುವಾರು ಅಧಿಕಾರಿ, ಹೊರಗುತ್ತಿಗೆ ಸಿಬ್ಬಂದಿ ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇನ್ನುಳಿದ ಹುದ್ದೆಗಳ ಪೈಕಿ ಕನಿಷ್ಠ ಮೂರು ಮಂದಿ ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಇವರಿಗೆ ಹೆಚ್ಚುವರಿಯಾಗಿ ನಿಡಗುಂದಿ, ಅಬ್ಬಿಗೇರಿ, ಕೋಟುಮಚಗಿ, ಹುಲ್ಲೂರು ಗ್ರಾಮಗಳನ್ನು ನೀಡಿರುವ ಕಾರಣ ಸ್ಥಳೀಯ ಲಭ್ಯತೆ ಕೊರತೆ ಇರುತ್ತದೆ.

ರೋಗಕ್ಕೆ ಬಲಿ..

ಲಕ್ಷ್ಮೇಶ್ವರ: ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರಗಳಿಗೆ ಬರುವ ರೋಗಗಳಿಗೆ ಚಿಕಿತ್ಸೆ ಸೂಕ್ತ ಸಂದರ್ಭದಲ್ಲಿ ಸಿಗುತ್ತಿಲ್ಲ. ಇದು ರೈತರಿಗೆ ತೊಂದರೆಯಾಗಿ ಪರಿಣಮಿಸಿದೆ.

ಸಮೀಪದ ಸೂರಣಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಕ್ಕೆ ದನಕರುಗಳು ಬಲಿಯಾಗುತ್ತಿವೆ. ರೋಗ ಅಂಟಿದ ಕೆಲ ಎತ್ತು ಮತ್ತು ಆಕಳುಗಳು ಈಗಾಗಲೇ ಮರಣ ಹೊಂದಿವೆ. ಪಶು ವೈದ್ಯರು ಈ ರೋಗಕ್ಕೆ ಚರ್ಮಗಂಟು ರೋಗ ಎಂದು ಹೆಸರು ಇಟ್ಟಿದ್ದು, ಇದು ವಿದೇಶದಿಂದ ಬಂದ ರೋಗವಾಗಿದ್ದು ಅತೀ ಬೇಗನೇ ಪಸರಿಸುತ್ತದೆ. ಹೀಗಾಗಿ ಇದರ ಹಾವಳಿ ಹೆಚ್ಚುತ್ತಲೇ ಇದೆ.

ಸೂರಣಗಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಈ ರೋಗಕಾಣಿಸಿಕೊಂಡಿದ್ದು ರೈತರಲ್ಲಿ ಚಿಂತೆ ಮೂಡಿಸಿದೆ. ಗ್ರಾಮದ ರೈತ ವೀರಪ್ಪ ಶೀರನಹಳ್ಳಿ ಎಂಬುವವರ ಎತ್ತಿಗೆ ಈ ರೋಗ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಎತ್ತು ಆಹಾರ ಸೇವಿಸುವುದನ್ನೇ ನಿಲ್ಲಿಸಿದೆ. ಇದರಿಂದಾಗಿ ದಿನದಿಂದ ದಿನಕ್ಕೆ ಅದು ಕೃಶವಾಗುತ್ತಿದೆ.

‘ನಮ್ಮ ಎತ್ತು ಐದಾರು ದಿನಗಳಿಂದ ಹೊಟ್ಟು ಸೊಪ್ಪಿ ಮುಟ್ಟವಲ್ದು. ನಿನ್ನೆ ಹಿಟ್ಟಿನ ಗಂಜಿ ಮಾಡಿ ಗುಟುಕು ಹಾಕೇವ್ರೀ. ಎತ್ತಿನ ಮೈ ಮ್ಯಾಲ ಗಂಟು ಆಗಿ ನಿಂತಲ್ಲಿಯೇ ನಿಂತಿದೆ’ ಎಂದು ರೈತ ವೀರಪ್ಪ ಅಳಲು ತೋಡಿಕೊಂಡರು.

‘ಚರ್ಮಗಂಟು ರೋಗ ಕಾಣಿಸಿಕೊಂಡ ದನಕರುಗಳ ದೇಹದ ಮೇಲೆ ದೊಡ್ಡ ದೊಡ್ಡ ಗಂಟುಗಳು ಏಳುತ್ತವೆ. ಜ್ವರವೂ ಇರುತ್ತದೆ. ಆದರೆ ಇದು ಮಾರಣಾಂತಿಕ ಕಾಯಿಲೆ ಅಲ್ಲ. ರೈತರು ಸೂಕ್ತ ಉಪಚಾರ ಮಾಡಿದರೆ ಎಂಟ್ಹತ್ತು ದಿನಗಳಲ್ಲಿ ಗುಣವಾಗುತ್ತದೆ. ದನದ ದೇಹಕ್ಕೆ ಬೇವಿನ ಎಣ್ಣೆ ಸವರುತ್ತಿರಬೇಕು. ಇದರೊಂದಿಗೆ ಜ್ವರದ ಗುಳಿಗೆಯನ್ನೂ ಹಾಕಬೇಕು. ಗಂಟು ಒಡೆದಾಗ ಡಾಂಬರ್ ಗುಳಿಗೆ ಹಚ್ಚಿ ಉಪಚಾರ ಮಾಡಬೇಕು. ರೋಗ ಕಾಣಿಸಿಕೊಂಡ ದನವನ್ನು ಪ್ರತ್ಯೇಕವಾಗಿ ಕಟ್ಟಬೇಕು. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಪಶು ಇಲಾಖೆ ಇದರ ನಿಯಂತ್ರಣಕ್ಕೆ ಎಲ್ಲ ಕ್ರಮಕೈಗೊಂಡಿದೆ. ಆದರೆ ಇದು ರೋಗ ಆಗಿದ್ದರಿಂದ ಇನ್ನೂ ಲಸಿಕೆ ಬಂದಿಲ್ಲ’ ಎಂದು ಪಶು ವೈದ್ಯಾಧಿಕಾರಿ ಡಾ. ಎನ್.ಎ. ಹವಳದ ಸಲಹೆ ನೀಡುತ್ತಾರೆ.

ಅರ್ಧಕ್ಕೂ ಹೆಚ್ಚು ಹುದ್ದೆಗಳು ಖಾಲಿ

‘ಜಿಲ್ಲೆಯಲ್ಲಿ ಒಟ್ಟು 82 ಪಶು ಆಸ್ಪತ್ರೆ 5 ಸಂಚಾರಿ ಪಶು ಚಿಕಿತ್ಸಾಲಯಗಳಿವೆ. 384 ಮಂಜೂರಾದ ಹುದ್ದೆಗಳಿದ್ದು, 115 ಮಂದಿ ಮಾತ್ರ ಇದ್ದಾರೆ. 269 ಖಾಲಿ ಹುದ್ದೆಗಳಿವೆ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಎಚ್‌.ಬಿ.ಹುಲಗಣ್ಣನವರ್‌ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಉಪ ನಿರ್ದೇಶಕರ ಹುದ್ದೆ ಎರಡು ಇದ್ದು, ಇಬ್ಬರೂ ಪೂರ್ಣ ಪ್ರಮಾಣದ ಡಿಡಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಸಹಾಯಕ ನಿರ್ದೇಶಕರ (ಆಡಳಿತ) ಹುದ್ದೆ 5 ಇದ್ದು, ಇಬ್ಬರು ಕರ್ತವ್ಯದ್ದಲ್ಲಿದ್ದಾರೆ. ಪಶು ವೈದ್ಯಾಧಿಕಾರಿಗಳ (ಸಿಇಒ) ಹುದ್ದೆ 20 ಇದ್ದು, ಏಳು ಮಂದಿ ಮಾತ್ರ ಇದ್ದಾರೆ. ಪಶು ವೈದ್ಯರ ಹುದ್ದೆ 60 ಹುದ್ದೆಗಳಿದ್ದು, 10 ಮಂದಿ ಮಾತ್ರ ಇದ್ದಾರೆ’ ಎಂದು ತಿಳಿಸಿದ್ದಾರೆ.

‘ಜಿಲ್ಲೆಗೆ ಎಂಟು ಆಂಬುಲೆನ್ಸ್‌ ಬಂದಿದ್ದು, ಇನ್ನಷ್ಟೇ ಬಳಕೆಗೆ ಲಭ್ಯವಾಗಬೇಕಿದೆ’ ಎಂದು ಮಾಹಿತಿ ನೀಡಿದರು.

ಪಶು ಆಸ್ಪತ್ರೆಗಳಿಗೆ ಅಗತ್ಯ ಮೂಲಸೌಕರ್ಯ, ಖಾಲಿ ಹುದ್ದೆಗಳ ಭರ್ತಿಗೆ ಕ್ರಮವಹಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ

ಎಚ್‌.ಬಿ.ಹುಲಗಣ್ಣನವರ್‌, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ

ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ರೈತರಿಗೆ ತೊಂದರೆಯಾಗದಂತೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಪಶು ಚಿಕಿತ್ಸಾಲಯ ಕಟ್ಟಡದ ಸುತ್ತಲೂ ಕಾಂಪೌಂಡ್‌ ನಿರ್ಮಾಣವಾಗಬೇಕಿದೆ.
ಡಾ. ಲಿಂಗಯ್ಯ ಗೌರಿ, ಪಶುವೈದ್ಯಾಧಿಕಾರಿ, ನರೇಗಲ್‌

ನಿರ್ವಹಣೆ: ಕೆ.ಎಂ.ಸತೀಶ್‌ ಬೆಳ್ಳಕ್ಕಿ

ಪ್ರಜಾವಾಣಿ ತಂಡ: ‍ಪ್ರಕಾಶ್‌ ಗುದ್ನೆಪ್ಪನವರ, ನಿಂಗರಾಜ ಹಮ್ಮಿಗಿ, ನಾಗರಾಜ ಎಸ್‌.ಹಣಗಿ, ಚಂದ್ರು ಎಂ.ರಾಥೋಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT