ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಅನ್ವೇಷಣೆಗೆ ಅವಕಾಶ

ಆಗಸ್ಟ್‌ 5ರಂದು ಮೊದಲ ಕಪ್ಪತ್ತಗುಡ್ಡ ಚಾರಣ: ಒಬ್ಬರಿಗೆ ₹150 ಶುಲ್ಕ
Published 4 ಆಗಸ್ಟ್ 2023, 5:50 IST
Last Updated 4 ಆಗಸ್ಟ್ 2023, 5:50 IST
ಅಕ್ಷರ ಗಾತ್ರ

ಗದಗ: ತುಂತುರು ಮಳೆಯಲ್ಲಿ ನೆನೆಯುತ್ತ.. ಸಮತಟ್ಟು, ಏರು, ಇಳಿಜಾರಿನಲ್ಲಿ ಏದುಸಿರು ಬಿಡುತ್ತ.. ಮಧ್ಯೆ ಮಧ್ಯೆ ಸುಧಾರಿಸಿಕೊಳ್ಳತ್ತ ಕಾಡಿನ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ರೋಮಾಂಚನಕಾರಿ ಅನುಭವ. ಟ್ರೆಕ್ಕಿಂಗ್‌ನ ಮಜವೇ ಅಂತಹದ್ದು! ಜಿಲ್ಲಾ ಅರಣ್ಯ ವಿಭಾಗವು ಕಪ್ಪತ್ತಗುಡ್ಡ ವನ್ಯಜೀವಿಧಾಮದಲ್ಲಿ ಟ್ರೆಕ್ಕಿಂಗ್‌ಗೆ ಅವಕಾಶ ಕಲ್ಪಿಸುವ ಮೂಲಕ ಉತ್ತರ ಕರ್ನಾಟಕ ಸಹ್ಯಾದ್ರಿಯನ್ನು ಅನ್ವೇಷಿಸುವ ಅವಕಾಶವನ್ನು ಚಾರಣಪ್ರಿಯರಿಗೆ ಮುಕ್ತವಾಗಿಸಿದೆ.

‘ಕಪ್ಪತ್ತಗುಡ್ಡದ ಸೌಂದರ್ಯವನ್ನು ಎಲ್ಲರೂ ಸವಿಯಬೇಕು ಎಂಬುದು ಅರಣ್ಯ ಇಲಾಖೆ ಉದ್ದೇಶ. ಆದರೆ, ನಿಸರ್ಗವನ್ನು ಆಸ್ವಾದಿಸುವ ಸಂದರ್ಭದಲ್ಲಿ ಕೆಲವರಿಂದ ಪರಿಸರಕ್ಕೆ ಹಾನಿ ಆಗುತ್ತಿತ್ತು. ಪ್ರವಾಸಿಗರು ಎಸೆದ ಪ್ಲಾಸ್ಟಿಕ್‌ ವಸ್ತುಗಳು ವನ್ಯಜೀವಿಗಳ ಜೀವಕ್ಕೆ ಕುತ್ತು ತರುತ್ತಿದ್ದವು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪರಿಸರ ಹಾಗೂ ವನ್ಯಸಂಪತ್ತಿನ ರಕ್ಷಣೆಗೆ ಮುಂಜಾಗ್ರತೆ ವಹಿಸಿದ್ದು, ಇಲಾಖೆಯಿಂದಲೇ ಟ್ರೆಕ್ಕಿಂಗ್‌ ಅವಕಾಶ ಕಲ್ಪಿಸಲಾಗಿದೆ. ಇದು ಇಲಾಖೆಗೆ ಆದಾಯ ತರುವುದರ ಜತೆಗೆ ಚಾರಣಪ್ರಿಯರು ಈವರೆಗೆ ನೋಡಿರದ ಕಪ್ಪತ್ತಗುಡ್ಡದ ಸೊಬಗನ್ನು ಪರಿಚಯಿಸಿ ಕೊಡಲಿದೆ’ ಎನ್ನುತ್ತಾರೆ ಮುಂಡರಗಿ ವಿಭಾಗದ ಆರ್‌ಎಫ್‌ಒ ವೀರೇಂದ್ರ ಮರಿಬಸಣ್ಣವರ.

‘ಟ್ರಿಕ್ಕಿಂಗ್‌ ಬೆಳಿಗ್ಗೆ 6ಕ್ಕೆ ಆರಂಭಗೊಳ್ಳಲಿದ್ದು ಅಂದಾಜು 6ರಿಂದ 8 ಕಿ.ಮೀ. ನಡಿಗೆ ಇರುತ್ತದೆ. ಕಡಕೋಳದಿಂದ ಆರಂಭಗೊಂಡರೆ ಕಡಕೋಳ ವೀವ್‌ ಪಾಯಿಂಟ್‌ ವೀಕ್ಷಣೆ. ಮತ್ತೊಂದು ಮಾರ್ಗದಲ್ಲಿ ಕಡಕೋಳ– ಕಪ್ಪತ್ತಮಲ್ಲೇಶ್ವರ ದೇವಸ್ಥಾನ– ಗಾಳಿಗುಂಡಿ ವೀವ್‌ ಪಾಯಿಂಟ್‌ ತಲುಪಿ ಕಾಡಿನ ಸೌಂದರ್ಯ ಸವಿಯಬಹುದು. ಕಡಕೋಳ ವೀವ್‌ ಪಾಯಿಂಟ್‌ನಲ್ಲಿ ಚಾರಣಪ್ರಿಯರಿಗೆ 360 ಡಿಗ್ರಿ ನೋಟ ಸಿಗಲಿದ್ದು, ಇಡೀ ಕಪ್ಪತ್ತಗುಡ್ಡದ ಸೌಂದರ್ಯವನ್ನು ಎದೆಗಿಳಿಸಿಕೊಳ್ಳಬಹುದು. ಕಪ್ಪತ್ತಗುಡ್ಡದ ಸೌಂದರ್ಯವನ್ನು ಮೊಗೆದು ಕೊಡುವಂತಹ ಇಂತಹ ಇನ್ನೂ ಮೂರ್ನಾಲ್ಕು ಸ್ಥಳಗಳಿದ್ದು, ಅವುಗಳನ್ನು ಮುಂದಿನಗಳಲ್ಲಿ ಪರಿಚಯಿಸಲಾಗುವುದು. ಮುಂದಿನ ದಿನಗಳಲ್ಲಿ ಜನರ ಪ್ರತಿಕ್ರಿಯೆ ನೋಡಿಕೊಂಡು ವಾರಕ್ಕೆ ಎರಡು ಬಾರಿ ಟ್ರೆಕ್ಕಿಂಗ್‌ ಆಯೋಜಿಸಲಾಗುವುದು’ ಎನ್ನುತ್ತಾರೆ ಅವರು.

‘ಆಗಸ್ಟ್‌ 5ರಂದು ಮೊದಲ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6ಕ್ಕೆ ಆರಂಭಗೊಳ್ಳುವ ಚಾರಣ 9ಕ್ಕೆ ಕೊನೆಗೊಳ್ಳಲಿದೆ. ಒಬ್ಬರಿಗೆ ₹150 ಶುಲ್ಕವಿದೆ. ಟ್ರೆಕ್ಕಿಂಗ್‌ನಲ್ಲಿ ಪಾಲ್ಗೊಂಡವರಿಗೆ ಚಾರಣ ಮುಗಿಸಿದ ಬಳಿಕ ಉಪಾಹಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಡೋಣಿ ಮಾರ್ಗದ ಚಾರಣಕ್ಕೆ: 81510 20753, ಕಡಕೋಳ ಮಾರ್ಗದ ಚಾರಣಕ್ಕೆ: 99641 74471 ಸಂಪರ್ಕಿಸಬಹುದು’ ಎನ್ನುತ್ತಾರೆ ಡಿಆರ್‌ಎಫ್‌ಒ ಸಚಿನ್‌.

ಔಷಧೀಯ ಸಸ್ಯಗಳಿರುವ ಕಪ್ಪತ್ತಗುಡ್ಡದಲ್ಲಿ ಬೀಸುವ ಶುದ್ಧಗಾಳಿ, ಹಸಿರನ್ನು ಆಸ್ವಾದಿಸಲು ಚಾರಣಿಗರಿಗೆ ಅವಕಾಶ ಮಾಡಿಕೊಡುವುದು ಈ ಟ್ರೆಕ್ಕಿಂಗ್‌ ಆಯೋಜನೆಯ ಉದ್ದೇಶ. ಪರಿಸರಕ್ಕೆ ಹಾನಿ ಮಾಡುವಂತಹ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಜಾಗೃತಿ ಕೂಡ ಮೂಡಿಸಲಾಗುತ್ತದೆ. ಈವರೆಗೆ ಪ್ರವಾಸಿಗರೆಲ್ಲರೂ ಬೈಕು ಅಥವಾ ಕಾರಿನಲ್ಲಿ ವೀವ್‌ ಪಾಯಿಂಟ್‌ ತಲುಪಿ ಕಾಡು ನೋಡಿಕೊಂಡು ವಾಪಸಾಗುತ್ತಿದ್ದರು. ಇದರಿಂದ ಅವರಿಗೆ ಹೆಚ್ಚಿನ ಮಜಾ ಸಿಗುತ್ತಿರಲಿಲ್ಲ. ಈಗ ಟ್ರೆಕ್ಕಿಂಗ್‌ನಲ್ಲಿ ಪಾಲ್ಗೊಂಡರೆ ನಿಜವಾದ ಮಜಾ, ಚೈತನ್ಯದ ಜತೆಗೆ ಕಾಡಿನ ರಮ್ಯತೆಯನ್ನು ಆಸ್ವಾದಿಸುವ ಸುಖ ಸಿಗಲಿದೆ ಎಂಬುದು ಅರಣ್ಯ ಇಲಾಖೆ ನೀಡುವ ಭರವಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT