ಗದಗ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ₨50ಕೋಟಿ

7

ಗದಗ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ₨50ಕೋಟಿ

Published:
Updated:
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌)

ಗದಗ: ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿ ಜಿಲ್ಲೆಗೆ ಲಭಿಸಿದ ಆರೋಗ್ಯ ಭಾಗ್ಯವನ್ನು ಈಗಿನ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರೂ ಮುಂದುವರಿಸಿದ್ದಾರೆ. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್‌) 450 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಹಿಂದಿನ ಬಜೆಟ್‌ನಲ್ಲಿ ₨30 ಕೋಟಿ ಅನುದಾನ ಒದಗಿಸಲಾಗಿತ್ತು. ಈಗಿನ ಬಜೆಟ್‌ನಲ್ಲೂ ಇದು ಮರು ಘೋಷಣೆ ಆಗಿದ್ದು, ಹೆಚ್ಚುವರಿಯಾಗಿ ₨20 ಕೋಟಿ ಅಂದರೆ ಒಟ್ಟು ₨50ಕೋಟಿ ಅನುದಾನ ಮೀಸಲಿಡಲಾಗಿದೆ.

ಮಹದಾಯಿ ಜಲ ವಿವಾದದ ನ್ಯಾಯಮಂಡಳಿ ತೀರ್ಪು ಆಗಸ್ಟ್‌ ಅಂತ್ಯದೊಳಗೆ ಪ್ರಕಟಗೊಳ್ಳುವ ನಿರೀಕ್ಷೆ ಇದ್ದು, ತೀರ್ಪಿನ ಅನ್ವಯ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ, ಯಾವ ರೀತಿಯ ಕಾಮಗಾರಿ, ಎಷ್ಟು ಮೊತ್ತದ ಅನುದಾನ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಮಹದಾಯಿ ಸಮಸ್ಯೆಗೆ ಬಜೆಟ್‌ನಲ್ಲಿ ಸ್ಪಂದನೆ ಲಭಿಸಿರುವುದು ಈ ಭಾಗದ ರೈತರಲ್ಲಿ ಭರವಸೆಯ ಬೆಳಕು ಮೂಡಿಸಿದೆ.

ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು ₨150 ಕೋಟಿ ಅನುದಾನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಸತತ ಬರ ಮತ್ತು ಮಳೆ ಕೊರತೆಯಿಂದ ಕೃಷಿಗೆ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಜಿಲ್ಲೆಯ ರೈತರಿಗೆ ಈ ರೀತಿಯ ವೈಜ್ಞಾನಿಕ ನೀರಾವರಿ ಪದ್ಧತಿ ದೊಡ್ಡ ಮಟ್ಟದಲ್ಲಿ ನೆರವು ನೀಡಬಹುದು.

ರಾಜ್ಯದಲ್ಲಿ ಸಾಮಾಜಿಕ ಅರಣ್ಯ ಬೆಳವಣಿಗೆಗೆ ಆದ್ಯತೆ ನೀಡಲು ಆಂದೋಲನದ ಮಾದರಿಯಲ್ಲಿ ‘ಹಸಿರು ಕರ್ನಾಟಕ’ ಯೋಜನೆ ಜಾರಿಗೊಳಿಸಲಾಗಿದೆ. ನಿಗದಿತ ಪ್ರಮಾಣಕ್ಕಿಂತಲೂ ಅರಣ್ಯ ಪ್ರದೇಶ ಕಡಿಮೆ ಇರುವ ಗದಗ ಜಿಲ್ಲೆಯಲ್ಲಿ ವಿಶೇಷವಾಗಿ ‘ಕಪ್ಪತಗುಡ್ಡ’ ಸೇರಿದಂತೆ ಬಯಲು ಪ್ರದೇಶದಲ್ಲಿ ಹಸಿರು ಸಂವರ್ಧನೆಗೆ ಈ ಯೋಜನೆ ನೆರವಾಗಲಿದೆ.

ಕೈಗರಿಕಾ ಪ್ರಗತಿಯಲ್ಲಿ ತೀವ್ರ ಹಿಂದುಳಿದಿರುವ ಗದಗ ಜಿಲ್ಲೆಗೆ ಹಿಂದಿನ ಬಜೆಟ್‌ನಲ್ಲೂ ವಿಶೇಷ ಕೊಡುಗೆಗಳು ಲಭಿಸಿರಲಿಲ್ಲ. ಈ ಬಾರಿಯೂ ಕೈಗಾರಿಕಾ ಭಾಗ್ಯ ಲಭಿಸಿಲ್ಲ. ನೇಕಾರರಿಗೆ ಹೊಸ ವಿನ್ಯಾಸ, ತಂತ್ರಜ್ಞಾನ ವರ್ಗಾವಣೆಗೆ ಅತ್ಯಾಧುನಿಕ ಕೈಮಗ್ಗ ಕೇಂದ್ರ ಸ್ಥಾಪನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ಇದು ಎಲ್ಲಿ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಜವಳಿ ಉದ್ಯಮಕ್ಕೆ ಹೆಸರಾದ ಜಿಲ್ಲೆಯಲ್ಲಿ ಈ ಕೇಂದ್ರ ಪ್ರಾರಂಭವಾದರೆ ಅದರ ಪ್ರಯೋಜನ ಈ ಭಾಗದ ನೇಕಾರರಿಗೆ ಲಭಿಸಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !