ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ | ಸೌಹಾರ್ದ ಸಾರುವ ಮುದುಕೇಶ್ವರ ಜಾತ್ರೆ

ಪಂಚಾಚಾರ್ಯ ಪೀಠ ಪರಂಪರೆಯ ಆಯುರ್ವೇದ ಪಾಠಶಾಲೆ
ಕಾಶೀನಾಥ ಬಿಳಿಮಗ್ಗದ
Published 10 ಮಾರ್ಚ್ 2024, 5:21 IST
Last Updated 10 ಮಾರ್ಚ್ 2024, 5:21 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ವಿರುಪಾಪುರ ಗ್ರಾಮದಲ್ಲಿರುವ ಕಲಕೇರಿ-ವಿರುಪಾಪುರದ ಶ್ರೀಗುರು ಮುದುಕೇಶ್ವರ ಮಠವು ಪಂಚಾಚಾರ್ಯ ಪೀಠ ಪರಂಪರೆಗೆ ಸೇರಿದ ಮಠವಾಗಿದ್ದು, ಅದು ಇಲ್ಲಿ ಸರ್ವಧರ್ಮ ಸೌಹಾರ್ದದ ಪ್ರತೀಕವಾಗಿದೆ.

ಶ್ರೀಮಠದ ಸದ್ಯದ ಪೀಠಾಧಿಪತಿ ಷ.ಬ್ರ.ಶ್ರೀಗುರು ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುವ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಠವು ಮೊದಲಿನಿಂದಲೂ ಆಯುರ್ವೇದ ಔಷಧ ನೀಡುವ ಮೂಲಕ ಈ ಭಾಗದ ಸಾರ್ವಜನಿಕ ಆಸ್ಪತ್ರೆಯಂತೆ ಅದು ಕಾರ್ಯನಿರ್ವಹಿಸುತ್ತಿತ್ತು.

ರಾಜ್ಯದ ವಿವಿಧ ಭಾಗಗಳ ಸಾವಿರಾರು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವುದನ್ನು ಹಳೆಯ ತಲೆಮಾರಿನ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಶ್ರೀಮಠದ ಪೀಠಾಧಿಪತಿಗಳಾಗಿರುವ ಶ್ರೀಗುರು ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ನಾಡಿನ ವಿವಿಧ ಭಾಗಗಳಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ. ಅಕ್ಕಪಕ್ಕದ ಗ್ರಾಮಗಳ ಎಲ್ಲ ಧರ್ಮ ಹಾಗೂ ಎಲ್ಲ ವರ್ಗಗಳ ಜನರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಯಾರೆ ಕರೆದರೂ ಕರೆದಲ್ಲಿಗೆ ತೆರಳಿ ಭಕ್ತ ಸಮೂಹದೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ.

ಮಾರ್ಚ್‌ 10ರಂದು ಶ್ರೀಗುರು ಮುದುಕೇಶ್ವರ ಜಾತ್ರೆ ಜರುಗಲಿದ್ದು, ಜಾತ್ರಾ ಮಹೋತ್ಸವದ ಪ್ರಯುಕ್ತ ಹಲವಾರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆಯ ಕೊನೆಯ ಎರಡು ದಿನ ಪ್ರತೀವರ್ಷ ಶ್ರೀಮಠದ ಆವರಣದಲ್ಲಿ ಜಂಗಿಕುಸ್ತಿಯನ್ನು ಹಮ್ಮಿಕೊಳ್ಳಲಾಗುತ್ತದೆ. ನಾಡಿನ ವಿವಿಧ ಭಾಗಗಳ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಕುಸ್ತಿ ಪಂದ್ಯವು ಜಾತ್ರೆಯ ವಿಶೇಷ ಆಕರ್ಷಣೆಯಾಗಿದೆ.

ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ
ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ

ಜಾತ್ರೆ: ವಿವಿಧ ಕಾರ್ಯಕ್ರಮ ಮಾರ್ಚ್‌ 10ರಂದು ಸಂಜೆ 5.30ಗಂಟೆಗೆ ಮಹಾರಥೋತ್ಸವ ಜರಗುಲಿದೆ. ಸಂಜೆ 6.30ಕ್ಕೆ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ. ಮುದುಕೇಶ್ವರ ಸ್ವಾಮೀಜಿ ಹಾಗೂ ನಾಡಿನ ವಿವಿಧ ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಡಾ.ಚಂದ್ರು ಲಮಾಣಿ ಕೆ.ವಿ.ಹಂಚಿನಾಳ ಇವರಿಗೆ ಗುರುರಕ್ಷೆ ನೀಡಲಾಗುವುದು. ವಿವಿಧ ಭಕ್ತರಿಂದ ಮುದುಕೇಶ್ವರ ಸ್ವಾಮೀಜಿ ತುಲಾಭಾರ ನೆರವೇರುವುದು. 11ರಂದು ಬೆಳಗ್ಗೆ ಉಜ್ಜಯಿನಿ ಸದ್ಧರ್ಮಪೀಠದ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸಂಜೆ 5.30ಕ್ಕೆ ಕಡುಬಿನ ಕಾಳಗ ಜರುಗಲಿದೆ. ಸಂಜೆ 6.30ಕ್ಕೆ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ. ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಅಭಿನವ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ ಡಾ.ಹಿರಿಯಶಾಂತವೀರ ಸ್ವಾಮೀಜಿ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್‌ 22 ರಂದು ತಾಲ್ಲೂಕು ಆಯುಷ್ ಇಲಾಖೆ ಪಟ್ಟಣದ ಎಸ್.ಬಿ.ಎಸ್. ಆಯುರ್ವೇದ ಕಾಲೇಜು ಹಾಗೂ ಗದುಗಿನ ಮಾ ಫೌಂಡೇಷನ್ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಲಿದೆ. 12 ಹಾಗೂ 13ರಂದು ಸಂಜೆ 4ಗಂಟೆಗೆ ಜಂಗಿ ಕುಸ್ತಿ ಸ್ಪರ್ಧೆಗಳು ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT