ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ಬೆಟ್ಟದಲ್ಲಿ ಜಾತ್ರೆ ಸಂಭ್ರಮ

ವಾಡಿ ಸಮೀಪದ ಲಾಡ್ಲಾಪುರ ಗ್ರಾಮದಲ್ಲಿರುವ ಹಾಜಿಸರ್ವರ್‌ ಬೆಟ್ಟ
ಸಿದ್ದರಾಜ ಎಸ್.ಮಲಕಂಡಿ
Published 25 ಏಪ್ರಿಲ್ 2024, 5:37 IST
Last Updated 25 ಏಪ್ರಿಲ್ 2024, 5:37 IST
ಅಕ್ಷರ ಗಾತ್ರ

ವಾಡಿ: ಸಮೀಪದ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಹಾಜಿ ಸರ್ವರ್ (ಹಾದಿಶರಣ) ಬೆಟ್ಟ ಭಕ್ತಿಯ ಜತೆಗೆ ಧಾರ್ಮಿಕ ಸಮನ್ವಯತೆ, ಸರ್ವಧರ್ಮ ಸಹಬಾಳ್ವೆಯ ಸಂದೇಶ ಸಾರುತ್ತಿದೆ.

ನೆತ್ತಿ ಸುಡುವ ಬಿಸಿಲಿನಲ್ಲೂ 600 ಅಡಿ ಎತ್ತರದ ಬೆಟ್ಟದ ಮೇಲಿರುವ ಹಾಜಿ ಸರ್ವರ್ ದರ್ಗಾಕ್ಕೆ ಹಿಂದೂ– ಮುಸ್ಲಿಮರು ಕುಟುಂಬ ಸಮೇತರಾಗಿ ಬರಿಗಾಲಲ್ಲಿ ತೆರಳಿ ದರ್ಶನ ಪಡೆಯುತ್ತಾರೆ. ಇಷ್ಟಾರ್ಥ ಸಿದ್ಧಿಯಾದ ಭಕ್ತರು ವರ್ಷಪೂರ್ತಿ ಇಲ್ಲಿ ಹರಕೆ ತೀರಿಸುತ್ತಾರೆ.

ಗುಡ್ಡದ ಮೇಲಿರುವ ದರ್ಗಾದಲ್ಲಿ ಹಿಂದೂಗಳು ಪೂಜಾರಿಗಳಾದರೆ, ಮುಸ್ಲಿಮರು ದರ್ಗಾದ ಪಕ್ಕ ಇರುವ ನಗಾರಿ ಕಟ್ಟೆಗೆ ಪೂಜಾರಿಗಳಾಗಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಪ್ರತಿ ಗುರುವಾರ ಹಾಗೂ ಅಮಾವಾಸ್ಯೆ ದಿನ ಭಕ್ತರು ಬರಿಗಾಲಲ್ಲಿ ಬೆಟ್ಟ ಹತ್ತಿ ಹರಕೆ ಸಲ್ಲಿಸುವುದು ವಾಡಿಕೆ. ದವನದ ಹುಣ್ಣಿಮೆ ನಂತರ ಬರುವ ಗುರುವಾರ ಜಾತ್ರೆಗೆ ಚಾಲನೆ ನೀಡಿ 5 ದಿನಗಳ ಕಾಲ (ಏ.25ರಿಂದ 29) ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತದೆ. ಕೆಲಸಕ್ಕಾಗಿ ನಗರ, ಪಟ್ಟಣಗಳಿಗೆ ಗುಳೆ ಹೋದ ಗ್ರಾಮಸ್ಥರು ಜಾತ್ರೆ ಸಂದರ್ಭದಲ್ಲಿ ಊರಿಗೆ ಆಗಮಿಸುತ್ತಾರೆ.

ರಾಜ್ಯದ ಭಕ್ತರಷ್ಟೇ ಅಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಸಾವಿರಾರು ಜನ ಭಾಗಿಯಾಗುತ್ತಾರೆ. ಜಾತ್ರೆಗೆ ಬರುವ ಭಕ್ತರಿಗಾಗಿ ಕಲಬುರಗಿ, ಯಾದಗಿರಿ, ಚಿತ್ತಾಪುರದಿಂದ ಬಸ್‌ಗಳ ವ್ಯವಸ್ಥೆ ಇರುತ್ತದೆ.

ಬೆಟ್ಟಕ್ಕೆ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಭಕ್ತರಿಗಾಗಿ ಕುಡಿಯುವ ನೀರು, ದಾಸೋಹ ವ್ಯವಸ್ಥೆ ಇರುತ್ತದೆ. ಗ್ರಾಮದಲ್ಲಿ ಶಾಂತಿಸಭೆ ನಡೆಸಿದ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಶಾಂತಿಯುತ ಆಚರಣೆಗೆ ಸಲಹೆ, ಸೂಚನೆ ನೀಡಿದ್ದಾರೆ.

ಗಂಧೋತ್ಸವ ಮೆರವಣಿಗೆ ಇಂದು

ಏ.25ರಂದು ರಾತ್ರಿ 10ರಿಂದ ಶುಕ್ರವಾರ ಬೆಳಗಿನ ಜಾವ 5 ಗಂಟೆವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಂಧೋತ್ಸವ ಮೆರವಣಿಗೆ ನಡೆಯಲಿದೆ. 26ರಂದು ದೀಪೋತ್ಸವ ಹಾಗೂ ರಾತ್ರಿ 9.30ರಿಂದ ಖವ್ವಾಲಿ ಕಾರ್ಯಕ್ರಮ ಜರುಗಲಿದೆ. ಏ.27ರಂದು ಸಂಜೆ 4ರಿಂದ ಕೈಕುಸ್ತಿ ಪ್ರದರ್ಶನ, ಏ.29ರಂದು ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಕಳಸ ಹೊತ್ತು ಮೆರವಣಿಗೆ ನಡೆಸುವ ಗ್ರಾಮಸ್ಥರು ದೇವರ ಮನೆಯಲ್ಲಿ ಕಳಸಗಳನ್ನು ಪುನಃ ಪ್ರತಿಷ್ಠಾಪಿಸುವುದರ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

ಭಾವೈಕ್ಯದ ಬೆಟ್ಟದಲ್ಲಿ ಜಾತ್ರೆ ಸಂಭ್ರಮಪ್ರಜಾವಾಣಿ ವಿಶೇಷಇಂದಿನಿಂದ 5 ದಿನಗಳ ಕಾಲ ಹಾಜಿ ಸರ್ವರ್ ಜಾತ್ರಾ ಮಹೋತ್ಸವಬೇಸಿಗೆ ಸಮಯದಲ್ಲಿ ಜಾತ್ರೆ ಇರುವುದರಿಂದ ಭಕ್ತರಿಗೆ ನೀರು, ನೆರಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ
ಶಂಕರಗೌಡ ಪಾಟೀಲಡಿವೈಎಸ್ಪಿ, ಶಹಾಬಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT