ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ಉಚಿತ ರಕ್ತದಾನಿಗಳ ಅನನ್ಯ ಸೇವೆ

ಕಾಶೀನಾಥ ಬಿಳಿಮಗ್ಗದ
Published 3 ಜುಲೈ 2024, 5:23 IST
Last Updated 3 ಜುಲೈ 2024, 5:23 IST
ಅಕ್ಷರ ಗಾತ್ರ

ಮುಂಡರಗಿ: ಹೊಟ್ಟೆಪಾಡಿಗೆ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಪಟ್ಟಣದ ದೇವು ಹಡಪದ ಎಂಬ ಯುವಕನು ಅಸಹಾಯಕರಿಗೆ ಮತ್ತು ಅಗತ್ಯವಿರುವವರಿಗೆ ಸದಾ ಉಚಿತ ರಕ್ತದಾನ ಮಾಡುವ ಮೂಲಕ ಇತರರ ಬದುಕಿಗೆ ಬೆಳಕು ನೀಡುತ್ತಿದ್ದಾರೆ.

ರಕ್ತದಾನಿ ದೇವು ಹಡಪದ ಅವರು ಕಳೆದ 15 ವರ್ಷಗಳಿಂದ ಅಗತ್ಯವಿರುವವರಿಗೆ 36 ಬಾರಿ ಉಚಿತವಾಗಿ ರಕ್ತದಾನ ಮಾಡಿದ್ದಾರೆ. ಕೆಲವು ತುರ್ತು ಸಂದರ್ಭಗಳಲ್ಲಿ ತಮ್ಮ ಪತ್ನಿ ಶಾರದಾ ಹಾಗೂ ಕುಟುಂಬದವರೆಲ್ಲ ಏಕಕಾಲದಲ್ಲಿ ರಕ್ತದಾನ ಮಾಡಿ ಅನ್ಯರ ಜೀವಗಳನ್ನು ಉಳಿಸಿದ್ದಾರೆ. ತಾನು, ತಮ್ಮನ ಪತ್ನಿ, ಸಹೋದರರು ಹಾಗೂ ತನ್ನ ಪರಿವಾರದವರೆಲ್ಲ ಅಗತ್ಯವಿರುವವರಿಗೆ ನಿರಂತರವಾಗಿ ರಕ್ತದಾನ ಮಾಡುತ್ತಿದ್ದಾರೆ.

ಮೂಲತಃ ತಾಲ್ಲೂಕಿನ ತಿಪ್ಪಾಪೂರ ಗ್ರಾಮದವರಾದ ದೇವು ಹಡಪದ ಅವರು ತಮ್ಮ ಕುಲಕಸುಬನ್ನು ಅರಸಿಕೊಂಡು 15 ವರ್ಷಗಳ ಹಿಂದೆ ಮುಂಡರಗಿ ಪಟ್ಟಣಕ್ಕೆ ಆಗಮಿಸಿದರು. ಪಟ್ಟಣದಲ್ಲಿ ಶಿವು ಮೆನ್ಸ್ ಪಾರ್ಲರ್ ತೆರೆದು ಉದ್ಯೋಗ ಆರಂಭಿಸಿದರು. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ಮನಗೆದ್ದ ದೇವು ಅವರ ಗ್ರಾಹಕರ ಸಂಖ್ಯೆ ಹೆಚ್ಚಾಗತೊಡಗಿತು. ಆನಂತರ ಪಟ್ಟಣದ ಇನ್ನೊಂದು ಭಾಗದಲ್ಲಿ ಅವರು ಮತ್ತೊಂದು ಮಳಿಗೆಯನ್ನು ತೆರೆದಿದ್ದಾರೆ.

ಹಳೆಯ ಕ್ಷೌರಿಕ ಪದ್ಧತಿಗಳನ್ನು ಕೈಬಿಟ್ಟು ಆಧುನಿಕ ಪದ್ಧತಿಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಂಡರು. ಕ್ಷೌರಿಕ ವೃತ್ತಿಗೆ ಸಂಬಂಧಿಸಿದ ಹಲವಾರು ನೂತನ ಸಲಕರಣೆ ಹಾಗೂ ಸೇವೆಯನ್ನು ಗ್ರಾಹಕರಿಗೆ ನೀಡತೊಡಗಿದರು. ಯುವಕರಿಗೆ ಕ್ಷೌರಿಕ ವೃತ್ತಿಯನ್ನು ಕಲಿಸಿ ಅವರಿಗೆ ತಮ್ಮ ಅಂಗಡಿಯಲ್ಲಿಯೇ ಉದ್ಯೋಗ ನೀಡಿದರು.

ದೇವು ಹಡಪದ ಅವರು ತಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಗೂ ಮುಂದಾದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಂಧ, ಅನಾಥ ಮಕ್ಕಳಿಗೆ ಉಚಿತ ಕ್ಷೌರ ಮಾಡತೊಡಗಿದರು. ಅನಾಥರು, ಅಂಗವಿಕಲರಿಗೆ ಉಚಿತ ಕ್ಷೌರ ಮಾಡತೊಡಗಿದರು. ಹಲವಾರು ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ತೆರಳಿ ಉಚಿತ ಸೇವೆ ನೀಡುತ್ತಲಿದ್ದಾರೆ. ಇದರೊಂದಿಗೆ ಹಲವು ವರ್ಷಗಳಿಂದ ಉಚಿತ ರಕ್ತದಾನ ಕಾಯಕವನ್ನು ನಿರಂತರವಾಗಿ ಮಾಡುತ್ತಲಿದ್ದಾರೆ.

ಹಲವು ವರ್ಷಗಳ ಹಿಂದೆ ಶಿವು ವಾಲಿಕಾರ, ಸುಭಾಷ ಗುಡಿಮನಿ, ನಾಗರಾಜ ಗುಡಿಮನಿ, ವಿನಾಯಕ ಕರಿಭಿಷ್ಟ, ವೀರೇಶ ಹಡಪದ, ರಾಜಾಬಕ್ಷಿ, ಜಲಾಲ ಮೊದಲಾದ ಸಹಮನಸ್ಕರ ಒಂದು ರಕ್ತದಾನಿಗಳ ತಂಡವನ್ನು ಕಟ್ಟಿಕೊಂಡು ನಿರಂತರವಾಗಿ ಉಚಿತ ರಕ್ತದಾನ ಮಾಡುತ್ತಲಿದ್ದಾರೆ.

ಅಗತ್ಯವಿರುವವರು ದೇವು ಅವರಿಗೆ ಪೋನ್ ಮಾಡಿದರೆ ಇವರ ತಂಡದ ಸದಸ್ಯರು ಅವರಿರುವ ಆಸ್ಪತ್ರೆಗೆ ತೆರಳಿ ಉಚಿತವಾಗಿ ರಕ್ತದಾನ ಮಾಡಿ ಬರುತ್ತಾರೆ. ದೇವು ಹಡಪದ ಹಾಗೂ ತಂಡದವರು ನಿಯಮಿತವಾಗಿ ರಕ್ತದಾನ ಮಾಡುವುದರ ಜೊತೆಗೆ ಬೇರೆಯವರು ರಕ್ತದಾನ ಮಾಡುವಂತೆ ಪ್ರೆರೇಪಿಸುತ್ತಾರೆ. ಉಚಿತ ರಕ್ತದಾನ ಶಿಬಿರಗಳು ನಡೆಯುವ ಸ್ಥಳಕ್ಕೆ ತೆರಳಿ ತಾವು ಹಾಗೂ ತಮ್ಮ ತಂಡದ ಸದಸ್ಯರು ರಕ್ತದಾನ ಮಾಡುತ್ತಲಿದ್ದಾರೆ.

ಉಚಿತ ರಕ್ತದಾನಕ್ಕೆ ದೇವು ಹಡಪದ ಹಾಗೂ ಅವರ ತಂಡದವರು ಈ ಭಾಗದಲ್ಲಿ ಹೆಸರುವಾಸಿಯಾಗಿದ್ದು, ತುರ್ತು ಸಂದರ್ಭದಲ್ಲಿ ಯಾರಿಗಾದರೂ ಯಾವುದೆ ಗುಂಪಿನ ರಕ್ತ ಬೇಕಾದಲ್ಲಿ ದೇವು ಅವರಿಗೆ ಪೋನ್ (9945294839) ಮಾಡಿದರೆ ತಕ್ಷಣ ಅವರು ರಕ್ತ ದಾನದ ವ್ಯವಸ್ಥೆ ಮಾಡುತ್ತಾರೆ. ಉಚಿತವಾಗಿ ರಕ್ತದಾನ ಮಾಡುವ ನೂರಾರು ದಾನಿಗಳು ದೇವು ಅವರ ಸಂಪರ್ಕದಲ್ಲಿದ್ದು, ಯಾವ ಕ್ಷಣದಲ್ಲಾದರೂ ಅವರು ಅಗತ್ಯವಿರುವವರಿಗೆ ರಕ್ತದಾನದ ವ್ಯವಸ್ಥೆ ಮಾಡುತ್ತಾರೆ.

ರಕ್ತದಾನ, ರಕ್ತದಾನದ ಮಹತ್ವ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ದೇವು ಹಾಗೂ ಅವರ ತಂಡದವರು ಇದೇ ಜುಲೈ 1ರಂದು ಪಟ್ಟಣದಲ್ಲಿ 'ಶಿವು ಲಕ್ಕಿ ಬ್ಲಡ್ ಹೆಲ್ಪಿಂಗ್ ಫೌಂಡೇಶನ್' ಆರಂಭಿಸುತ್ತಿದ್ದಾರೆ. ಅದರ ಮೂಲಕ ರಾಜ್ಯದಾದ್ಯಂತ ಬೃಹತ್ ರಕ್ತದಾನಿಗಳ ತಂಡವನ್ನು ಕಟ್ಟಲಿದ್ದಾರೆ. ರಾಜ್ಯದ ಯಾವ ಭಾಗದಲ್ಲಿ ಬೇಕಾದರೂ ತಕ್ಷಣ ರಕ್ತ ದೊರೆಯುವಂತಹ ವ್ಯವಸ್ಥೆ ಮಾಡುತ್ತಲಿದ್ದಾರೆ.

ದೇವು ಹಡಪದ
ದೇವು ಹಡಪದ

Quote - ನಾವು ಮಾಡುವ ರಕ್ತದಾನವು ಒಬ್ಬರ ಜೀವವನ್ನು ಉಳಿಸುತ್ತದೆ. ಹೀಗಾಗಿ ಯಾರಿಗಾದರೂ ರಕ್ತದ ಅಗತ್ಯವಿದ್ದರೆ ನಮ್ಮ ತಂಡದ ಸದಸ್ಯರು ಅವರಿರುವಲ್ಲಿಗೆ ತೆರಳಿ ಉಚಿತವಾಗಿ ರಕ್ತದಾನ ಮಾಡುತ್ತಲಿದ್ದೇವೆ ದೇವು ಹಡಪದ ರಕ್ತದಾನಿಗಳ ತಂಡದ ಮುಖಂಡ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT