ಬೆಳೆ ವಿಮೆ: ಬೇಕಿದೆ ಮತ್ತಷ್ಟು ಸ್ಪಂದನೆ

ಗದಗ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಈ ಯೋಜನೆಯ ಪ್ರಯೋಜನ ಪಡೆಯಲು ನೋಂದಾಯಿಸುವ ರೈತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ. ರೈತರ ನೋಂದಣಿ ಮತ್ತು ಪರಿಹಾರ ವಿತರಣೆ ಎರಡರಲ್ಲೂ ಗದಗ ಜಿಲ್ಲೆ ಮುಂಚೂಣಿಯಲ್ಲಿದೆ.
ಆದರೂ, ನೋಂದಣಿ ಮಾಡಿಸುವ ಎಲ್ಲರಿಗೂ ಪರಿಹಾರ ಸಿಕ್ಕುವುದಿಲ್ಲ ಎಂಬ ಆರೋಪವೂ ರೈತರಿಂದ ಕೇಳಿಬರುತ್ತಿದೆ. ಪರಿಹಾರ ವಿತರಣೆಗೆ ಇಡೀ ಗ್ರಾಮ ಪಂಚಾಯ್ತಿ ವ್ಯಾಪ್ತಿಯನ್ನು ಪರಿಗಣಿಸುವ ಬದಲು ರೈತರಿಗೆ ವೈಯಕ್ತಿಕವಾಗಿ ಆಗಿರುವ ನಷ್ಟ ಭರ್ತಿ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.
‘ಕಳೆದ ವರ್ಷ ಹಿಂಗಾರು ಸಮಯದಲ್ಲಿ ರೈತರ ನೋಂದಣಿ ಕಡಿಮೆ ಆಯಿತು ಎಂಬುದನ್ನು ಬಿಟ್ಟರೆ, ಜಿಲ್ಲೆಯಲ್ಲಿ ಹೆಚ್ಚಿನ ರೈತರು ಈ ಯೋಜನೆಯ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಈ ಬಾರಿ 1.35 ಲಕ್ಷ ಮಂದಿ ರೈತರು ನೋಂದಣಿ ಮಾಡಿಸಿದ್ದು, ಪ್ರತಿವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ ಹೆಸರು, ಕಡಲೆ, ಮೆಣಸಿನಕಾಯಿ, ಹತ್ತಿ, ಜೋಳ, ಗೋಧಿಗೆ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಶೇ 1ರಷ್ಟು ರೈತರು ಬೆಳೆ ವಿಮೆ ಪಾವತಿ ಮಾಡಿದ ತಕ್ಷಣವೇ ಪರಿಹಾರ ಕೊಡಬೇಕು ಎಂದು ಆಗ್ರಹಿಸುತ್ತಾರೆ. ಆದರೆ, ಸರ್ಕಾರ ಅದಕ್ಕೆ ಕೆಲವೊಂದು ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿದೆ. ಆ ಪ್ರಕಾರವೇ ಪರಿಹಾರ ನೀಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಬೆಳೆ ವಿಮೆ: ರೈತರ ಹಿತ ನಿರ್ಲಕ್ಷ್ಯ
ಮುಂಡರಗಿ: ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಆಸರೆಯಾಗಬೇಕಿದ್ದ ಎಲ್ಲ ವಿಮಾ ಕಂಪನಿಗಳು ರೈತರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ರೈತರು ವಿಮಾ ಕಂಪನಿಗಳ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ.
ಫಸಲ್ ಬಿಮಾ ಯೋಜನೆ ಸೇರಿದಂತೆ ಯಾವ ಬೆಳೆ ವಿಮೆಗಳು ಸಮರ್ಪಕವಾಗಿ ರೈತರಿಗೆ ವಿಮಾ ಹಣವನ್ನು ಮರಳಿಸುತ್ತಿಲ್ಲ ಎನ್ನುವುದು ಬಹುತೇಕ ರೈತರ ಆರೋಪವಾಗಿದೆ. ಅಧಿಕಾರಿಗಳ ನೆರವಿನಿಂದ ರೈತರಿಂದ ನಿಯಮಿತವಾಗಿ ವಿಮಾ ಕಂತನ್ನು ಕಟ್ಟಿಸಿಕೊಳ್ಳುವ ಕಂಪನಿಗಳು ನಂತರ ರೈತರನ್ನು ಸಂಪೂರ್ಣವಾಗಿ ಮರೆತುಬಿಡುತ್ತವೆ.
2017ರಿಂದಲೂ ಕೆಲವು ರೈತರು ಬೆಳೆ ವಿಮೆಗಾಗಿ ಅಲೆದಾಡುತ್ತಿದ್ದಾರೆ. ಆದರೆ ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ರೈತರಿಗೆ ಹಾರಿಕೆ ಉತ್ತರ ನೀಡಿ ಅವರನ್ನು ಸಾಗಹಾಕುತ್ತಿದ್ದಾರೆ. ಕೃಷಿ ಅಧಿಕಾರಿಗಳು ವಿಮಾ ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಲಿದೆ.
ಮುಂಗಾರು ಹಂಗಾಮಿನಲ್ಲಿ ರೈತರ ಮನ ಒಲಿಸಿ ವಿಮೆ ತುಂಬಿಸುವ ಅಧಿಕಾರಿಗಳು ಬೆಳೆ ವಿಫಲವಾದಾಗ ರೈತರ ಪರವಾಗಿ ನಿಂತು ವಿಮಾ ಕಂಪನಿಗಳಿಂದ ಹಣ ಕೊಡಿಸಿದ ಉದಾಹರಣೆಗಳಿಲ್ಲ. ವಿಮಾ ಯೋಜನೆಯಲ್ಲಿ ಭಾರಿ ಗೋಲ್‌ಮಾಲ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಕೆಲವು ಜನರು ವಿಮಾ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಲಿದ್ದಾರೆ. ಒಂದೇ ಜಿಪಿಎಸ್ ತಂತ್ರಾಂಶವನ್ನು ಹಲವು ರೈತರ ಜಮೀನುಗಳ ವಿಮಾ ಯೋಜನೆಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.
ವಿಮೆ ಹಣಕ್ಕಾಗಿ ಹೋರಾಟ ಮಾಡಬೇಕು
ರೋಣ: ತಾಲ್ಲೂಕಿನ ರೈತರು ಫಸಲ್ ಬಿಮಾ ಯೋಜನೆಯ ಹಣಕ್ಕಾಗಿ ಪ್ರತಿಬಾರಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕೆಲವು ರೈತರ ಖಾತೆಗೆ ಹಣ ಜಮಾ ಆಗಿದೆ; ಇನ್ನುಳಿದ ಎಷ್ಟೋ ರೈತರ ಖಾತೆಗೆ ಹಣ ಬಂದಿಲ್ಲ.
ತಾಲ್ಲೂಕಿನ ವ್ಯಾಪ್ತಿಯ ಹಲವು ಹಳ್ಳಿಗಳ ರೈತರಿಂದ ವಿಮೆ ಹಣ ತುಂಬಿಸಿಕೊಂಡ ಕಂಪನಿಯವರು ಮರಳಿ ಹಣ ಜಮಾ ಮಾಡುವುದಿಲ್ಲ. ಪರಿಹಾರ ಕೇಳಿದರೆ ಸರ್ಕಾರಿ ಅಧಿಕಾರಿಗಳು ಖಾಸಗಿ ಕಂಪನಿಯವರ ಮೇಲೆ ಆರೋಪ ಮಾಡುತ್ತಾರೆ, ಖಾಸಗಿ ಕಂಪನಿಯವರು ಬ್ಯಾಂಕ್‌ನವರ ಮೇಲೆ ಆರೋಪ ಮಾಡುತ್ತಾರೆ. ಆದರೆ ಬ್ಯಾಂಕ್‌ನವರು ಹಣ ಜಮಾ ಆದಾಗ ತಿಳಿಸುತ್ತೇವೆ ಎಂದು ಜಾರಿಕೊಳ್ಳುತ್ತಾರೆ. ಇದರಿಂದ ರೈತರ ಜೀವನ ಗೊಂದಲದ ಗೂಡಾಗಿದೆ ಎಂದು ರೈತಪರ ಸಂಘಟನೆಯ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವೈಜ್ಞಾನಿಕ ಪದ್ಧತಿಯಿಂದ ತೊಂದರೆ
ನರೇಗಲ್: ಸರ್ಕಾರದ ಫಸಲ್ ಬಿಮಾ ಯೋಜನೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಇದರಲ್ಲಿ ಖಾಸಗಿ ಕಂಪನಿ
ಯವರು ರೈತರ ಹೆಸರಿನ ಮೇಲೆ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ ಎನ್ನುವುದು ಹೋಬಳಿಯ ರೈತರ ಆರೋಪವಾಗಿದೆ.
ಪ್ರತಿ ವರ್ಷ ಬೆಳೆ ವಿಮೆ ಕಂಪನಿಯವರು ಆಯಾ ಅವಧಿಯಲ್ಲಿ ಮಾಡಿಸುವ ಬೆಳೆ ವಿಮೆಗಳನ್ನು ಅವೈಜ್ಞಾನಿಕ ಪದ್ಧತಿಯಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಅವಧಿಗೆ ಸರಿಯಾಗಿ ರೈತನ ಖಾತೆಗೆ ಹಣ ಜಮಾ ಆಗುವುದಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತರಾದ ಶರಣಪ್ಪ ಧರ್ಮಾಯತ, ಆನಂದ ಕೊಟಗಿ, ಚಂದ್ರು ಹೊನವಾಡ ತಿಳಿಸಿದರು.
ಕ್ಷೀಣಿಸುತ್ತಿದೆ ರೈತರ ಆಸಕ್ತಿ
ಗಜೇಂದ್ರಗಡ: ತಾಲ್ಲೂಕಿನ ರೈತರಿಗೆ ಕಳೆದ ಬಾರಿ ವಿಮೆ ಪರಿಹಾರ ಸರಿಯಾಗಿ ಸಿಗಲಿಲ್ಲ ಎಂಬ ಉದ್ದೇಶದಿಂದ ಈ ಬಾರಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಅಷ್ಟೊಂದು ಸ್ಪಂದನೆ ನೀಡಿಲ್ಲ.
ಗಜೇಂದ್ರಗಡ ತಾಲ್ಲೂಕಿನ 9 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ರಾಜೂರ, ಸೂಡಿ ಗ್ರಾಮ ಪಂಚಾಯ್ತಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಗೋವಿನಜೋಳ ಶೇ 23, ಹೆಸರು ಶೇ 17ರಷ್ಟು ಅಲ್ಪ ಮೊತ್ತದ ವಿಮೆ ಲಭಿಸಿದೆ. ರಾಜೂರ ಹಾಗೂ ಸೂಡಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ವಿಮೆ ಲಭಿಸಿಲ್ಲ. ಆದರೆ ಅದೇ ಗ್ರಾಮಗಳ ರೈತರ ಪಕ್ಕದ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜಮೀನು ಹೊಂದಿದ ರೈತರಿಗೆ ವಿಮೆ ಲಭಿಸಿದೆ. ಹೀಗಾಗಿ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಈ ಬಾರಿ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ.
ವಿಮೆ ಹಣ ರೈತರಿಗೆ ಸಿಗಲಿ
ನರಗುಂದ: ಫಸಲ್ ಬಿಮಾ ಯೋಜನೆಗಾಗಿ ಪ್ರತಿ ವರ್ಷ ರೈತರು ಒಂದಿಲ್ಲೊಂದು ಬೆಳೆಗೆ ಕಂತು ಪಾವತಿಸುತ್ತಾರೆ. ವಿಮೆ ಕಂಪನಿಗಳು ಸಹಿತ ವರ್ಷದಲ್ಲಿ ಎರಡು ಸಲ ವಿಮೆ ಕಂತು ಪಾವತಿಸಿಕೊಳ್ಳಲು ಕಾತುರದಿಂದ ಕಾಯುತ್ತಿರುತ್ತವೆ.
ಆದರೆ, ಬೆಳೆ ಹಾನಿಯಾದರೂ ವಿಮೆ ಹಣ ಮಾತ್ರ ಸಕಾಲಕ್ಕೆ ಬಿಡುಗಡೆಯಾಗುವುದಿಲ್ಲ. ಇದರಿಂದ ರೈತರು ಪ್ರತಿ ವರ್ಷ ಫಸಲ್ ಬಿಮಾ ಹಣಕ್ಕೆ ಬಕ ಪಕ್ಷಿಯಂತೆ ಕಾಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ತಾಲ್ಲೂಕಿನಲ್ಲಿ ಅಂದಾಜು 20 ಸಾವಿರಕ್ಕಿಂತಲೂ ಹೆಚ್ಚು ರೈತರು ಪ್ರತಿ ವರ್ಷ ಕಂತು ಭರಿಸುತ್ತಾರೆ. ವಿಮೆ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಸಂದಾಯವಾಗುತ್ತದೆ. ಆದರೆ ರೈತರಿಗೆ ಮಾತ್ರ ಹಣ ಮರಳುವುದಿಲ್ಲ. ಆದ್ದರಿಂದ ತುಂಬಿದ ವಿಮೆ ಕಂತಿನ ಹಣವನ್ನು ಮರಳಿ ನೀಡಲಿ ಎಂದು ರೈತರು ಆಗ್ರಹಿಸುತ್ತಾರೆ.
ನೋಂದಣಿ ಶೇ 30ರಷ್ಟು ಹೆಚ್ಚಳ
ಮುಳಗುಂದ: ಬೆಳೆ ನಷ್ಟಗೊಂಡ ಸಂದರ್ಭದಲ್ಲಿ ರೈತರಿಗೆ ಫಸಲ್ ಭಿಮಾ ಯೋಜನೆ ಕೈಹಿಡಿದಿದೆ. ಈ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಫಸಲ್ ಬಿಮಾ ಯೋಜನೆಗೆ ಶೇ 30ರಷ್ಟು ರೈತರ ಸಂಖ್ಯೆ ಹೆಚ್ಚಳವಾಗಿದೆ.
ಈಗಾಗಲೇ ರೈತರು ಎರಡು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಹಾನಿಗೊಳಗಾದ ಮೆಣಸಿನಕಾಯಿ, ಗೋವಿನ ಜೋಳ, ಶೇಂಗಾ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆ ಪರಿಹಾರ ಪಡೆದುಕೊಂಡಿದ್ದಾರೆ.
‘ಈ ಹಿಂದೆ ಇದ್ದ ಬೆಳೆಹಾನಿ ವಿಮಾ ಯೋಜನೆಗಿಂತ ಫಸಲ್ ಬಿಮಾ ಯೋಜನೆ ರೈತರಿಗೆ ಸೂಕ್ತ ಪರಿಹಾರ ಒದಗಿಸಲು, ಅವರ ಆರ್ಥಿಕ ನಷ್ಟ ಸರಿದೂಗಿಸಲು ಉತ್ತಮ ಯೋಜನೆಯಾಗಿದೆ. ನಾನು ಕೂಡ ಪ್ರತಿವರ್ಷ ನೋಂದಣೆ ಮಾಡುತ್ತೇನೆ’ ಎಂದು ರೈತ ದತ್ತಪ್ಪ ಯಳವತ್ತಿ ಹೇಳಿದರು.
‘ಗದಗ ತಾಲೂಕಿನಲ್ಲಿ ಪ್ರಸಕ್ತ ವರ್ಷ 31,460 ರೈತರು ಬಿಮಾ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದು, ವಿಮಾ ಕಂತು ಪಾವತಿಸಿದ್ದಾರೆ’ ಎಂದು ಗದಗ ಸಹಾಯಕ ಕೃಷಿ ಅಧಿಕಾರಿ ರವಿ.ಪಿ ಹೇಳಿದರು.
ರೈತರ ಕೈ ಸೇರುತ್ತಿರುವ ಬೆಳೆ ವಿಮೆ ಹಣ
ಲಕ್ಷ್ಮೇಶ್ವರ: ಕಳೆದ ಎರಡು ವರ್ಷಗಳಿಂದ ಬೆಳೆ ವಿಮೆ ಪರಿಹಾರದ ಹಣ ಸರಿಯಾಗಿ ರೈತರ ಕೈ ಸೇರುತ್ತಿದೆ. ಇದರಿಂದಾಗಿ ಪ್ರತಿವರ್ಷ ರೈತರು ತಪ್ಪದೆ ಬೆಳೆ ವಿಮೆ ಕಂತು ಕಟ್ಟುತ್ತಿದ್ದಾರೆ.
ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 7,112 ರೈತರು 20,202 ಎಕರೆಗೆ ಬೆಳೆ ವಿಮೆ ಮಾಡಿಸಿ ಒಟ್ಟು ₹1,13,35,050 ವಿಮಾ ಕಂತು ಕಟ್ಟಿದ್ದಾರೆ.
‘ಎರಡು ವರ್ಷಗಳಿಂದ ಸರಿಯಾಗಿ ವಿಮೆ ಪರಿಹಾರದ ಹಣ ನಮ್ಮ ಖಾತೆಗೆ ಜಮೆ ಆಗಿದೆ. ನಮ್ಮ ಊರಿನ ಗ್ರಾಮ ಲೆಕ್ಕಾಧಿ ಕಾರಿ ಜಗದೀಶ ಕುರುಬರ ಸರಿಯಾದ ರೀತಿಯಲ್ಲಿ ಕರ್ತವ್ಯ ಮಾಡಿದ್ದರಿಂದ ನಮಗೆ ಬೆಳೆ ವಿಮೆ ಹಣ ಬರುತ್ತಿದೆ’ ಎಂದು ಸಮೀಪದ ಗೊಜನೂರು ಗ್ರಾಮದ ನಾಗನಗೌಡ ಪಾಟೀಲ ಹೇಳಿದರು.
‘ಹಿಂದೆ ವಿಮೆ ಹಣ ಬರುತ್ತಿರಲಿಲ್ಲ. ಆದರೆ ಈಗ ಬರುತ್ತಿದೆ’ ಎಂದು ಸಮೀಪದ ಅಡರಕಟ್ಟಿ ಗ್ರಾಪಂ ಅಧ್ಯಕ್ಷ ನಿಂಗಪ್ಪ ಪ್ಯಾಟಿ ತಿಳಿಸಿದರು.
----------
ನಿಯಮಿತವಾಗಿ ಹಣ ತುಂಬಿಸಿಕೊಳ್ಳುವ ವಿಮಾ ಕಂಪನಿಗಳು ನಂತರ ವಿಮೆಯ ಹಣವನ್ನು ನೀಡಲು ಸತಾಯಿಸುತ್ತವೆ. ವಿಮೆಯ ಸಹವಾಸವೇ ಬೇಡ ಎಂದು ರೈತರು ಸುಮ್ಮನಾಗುವಂತಾಗಿದೆ
ಮಂಜುನಾಥ ಇಟಗಿ, ಮುಂಡರಗಿ ರೈತ
ಪ್ರತಿ ವರ್ಷ ವಿಮಾ ಕಂತು ತುಂಬುವುದೇ ಆಗಿದೆ. ಆದರೆ ಬೆಳೆ ಹಾಳಾದರೂ ಬೆಳೆ ವಿಮೆ ಬರದೇ ಇರುವುದು ತೀವ್ರ ಬೇಸರ ತರಿಸಿದೆ
ಎಸ್.ಬಿ.ಜೋಗಣ್ಣವರ, ರೈತ ಮುಖಂಡ
ಕಳೆದ ಮೂರು ವರ್ಷಗಳಿಂದ ವಿಮೆ ಸೌಲಭ್ಯ ಲಭಿಸಿಲ್ಲ. ಹೀಗಾಗಿ ವಿಮೆ ಲಭಿಸುತ್ತದೆಯೋ ಇಲ್ಲವೋ ಎಂದು ಈ ಬಾರಿಯೂ ವಿಮೆ ಮಾಡಿಸಿಲ್ಲ
ಶಿವಪ್ಪ ರಾಠೋಡ, ಜಗದೀಶ ಕಟ್ಟಿಮನಿ, ರಾಜೂರ ಗ್ರಾಮದ ರೈತರು
ಬೆಳೆ ವಿಮೆಗೆ ರೈತರ ನೋಂದಣಿ ಹಾಗೂ ಅವರಿಗೆ ಪರಿಹಾರ ನೀಡುವಲ್ಲಿ ಗದಗ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, 2016ರಿಂದ 2021ರವರೆಗೆ ₹1 ಸಾವಿರ ಕೋಟಿ ಪರಿಹಾರ ವಿತರಿಸಲಾಗಿದೆ
ರುದ್ರೇಶಪ್ಪ ಟಿ.ಎಸ್., ಕೃಷಿ ಇಲಾಖೆ ಜಂಟಿ ನಿರ್ದೇಶಕರು
ಪ್ರಜಾವಾಣಿ ತಂಡ:
ಕೆ.ಎಂ.ಸತೀಶ್ ಬೆಳ್ಳಕ್ಕಿ, ನಾಗರಾಜ ಎಸ್.ಹಣಗಿ, ಬಸವರಾಜ ಹಲಕುರ್ಕಿ, ಕಾಶೀನಾಥ ಬಿಳಿಮಗ್ಗದ, ಶ್ರೀಶೈಲ ಎಂ.ಕುಂಬಾರ, ಚಂದ್ರಶೇಖರ ಭಜಂತ್ರಿ, ಚಂದ್ರು ಎಂ.ರಾಥೋಡ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.