ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್:‌ ಬಿಜೆಪಿಗೆ ಬಹುಮತವಿದ್ದರೂ ಅಧಿಕಾರಕ್ಕೆ ಪರದಾಟ

ಕಮಲಕ್ಕೆ ಆಪರೇಷನ್‌ ಹಸ್ತದ ಭಯ: ಸಂಪರ್ಕಕ್ಕೆ ಸಿಗದ 6 ಸದಸ್ಯರು
ಚಂದ್ರು.ಎಂ.ರಾಥೋಡ್
Published : 28 ಆಗಸ್ಟ್ 2024, 4:28 IST
Last Updated : 28 ಆಗಸ್ಟ್ 2024, 4:28 IST
ಫಾಲೋ ಮಾಡಿ
Comments

ನರೇಗಲ್:‌ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ 2ನೇ ಅವಧಿಗಾಗಿ ನಡೆಯುವ ಚುನಾವಣೆ ಸೆ.2 ರಂದು ನಿಗದಿಯಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಆಡಳಿತಕ್ಕೆ ಬರುವುದು ಖಚಿತ ಎಂದುಕೊಂಡಿದ್ದ ಬಿಜೆಪಿಗೆ ಅವರದೇ ಪಕ್ಷದ ಆರು ಜನ ಸದಸ್ಯರ ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವುದು ಹಾಗೂ ನರೇಗಲ್‌ ಪಟ್ಟಣದಲ್ಲಿ ಕಾಣಿಸಿಕೊಳ್ಳದಿರುವುದು ಶಾಕ್‌ ನೀಡಿದೆ.

ಅದರಲ್ಲೂ ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಅನುಭವಿಸಿದ್ದ ಸದಸ್ಯರೇ ಕಾಣೆಯಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ.

ಒಟ್ಟು 17 ಸದಸ್ಯ ಬಲದ ನರೇಗಲ್‌ ಪಟ್ಟಣ ಪಂಚಾಯ್ತಿಯಲ್ಲಿ 12 ಬಿಜೆಪಿ, 3 ಕಾಂಗ್ರೆಸ್‌, ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಪಕ್ಷೇತರರ ಪೈಕಿ ಈ ಹಿಂದೆ ಒಬ್ಬರು ಕಾಂಗ್ರೆಸ್‌, ಒಬ್ಬರು ಬಿಜೆಪಿಗೆ ಬೆಂಬಲ ನೀಡಿದ್ದರು. ಇದರಿಂದ ಬಿಜೆಪಿ 13, ಕಾಂಗ್ರೆಸ್‌ 4 ಸದಸ್ಯ ಬಲ ಹೊಂದಿದೆ. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಆಡಳಿತಕ್ಕೆ ಬರುವುದು ಬಹುತೇಕ ಖಚಿತವಾಗಿತ್ತು.

ಆದರೆ ಆರು ಜನ ಬಿಜಿಪಿ ಸದಸ್ಯರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಕಾಂಗ್ರೆಸ್‌ ಪಕ್ಷದ ಸದಸ್ಯೆಯ ಪತಿಯು ಕೂಡ ಕಳೆದೆರಡು ದಿನಗಳಿಂದ ಮನೆಯಲ್ಲಿ ಕಾಣುತ್ತಿಲ್ಲ. ಅವರು ತಮ್ಮ ಮೊಬೈಲ್‌ ಅನ್ನು ಅಳಿಯನಿಗೆ ಕೊಟ್ಟು ಹೋಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ವಿವಿಧ ತಂತ್ರಗಳನ್ನು ರೂಪಿಸಿ ಅಧಿಕಾರಿ ಪಡೆಯಬಹುದು ಎನ್ನುವ ಚರ್ಚೆ ಶುರುವಾಗಿದೆ.

ಪಟ್ಟಣ ಪಂಚಾಯಿತಿಯ ಎರಡೂ ಸ್ಥಾನಗಳಿಗೆ ಸಾಮಾನ್ಯ ಮೀಸಲಾತಿ ಪ್ರಕಟವಾದ ದಿನದಿಂದ ಆಕಾಂಕ್ಷಿಗಳು ಗದ್ದುಗೆ ಏರಲು ಪೈಪೋಟಿ ನಡೆಸಿದ್ದರು. ಮಾಜಿ ಸಚಿವ ಕಳಕಪ್ಪ.ಜಿ.ಬಂಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಅಂತಿಮ ನಿರ್ಣಯಕ್ಕಾಗಿ ಸೋಮವಾರ ಸಭೆ ಕರೆದಿದ್ದರು.

ಭಾನುವಾರ ರಾತ್ರಿ ಸಭೆಗೆ ಬರುವುದಾಗಿ ಭರವಸೆ ನೀಡಿದ್ದ ಸದಸ್ಯೆ ವಿಜಯಲಕ್ಷ್ಮಿ ಚಲವಾದಿ, ಸದಸ್ಯರಾದ ಕುಮಾರಸ್ವಾಮಿ ಕೋರಧಾನ್ಯಮಠ, ಫಕೀರಪ್ಪ ಬಂಬ್ಲಾಪುರ, ಫಕೀರಪ್ಪ ಮಳ್ಳಿ, ಈರಪ್ಪ ಜೋಗಿ, ಮಲ್ಲಿಕಸಾಬ್‌ ರೋಣದ ಅವರು ತಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಗೈರಾಗಿದ್ದಾರೆ. ಕಳೆದೆರಡು ದಿನಗಳಿಂದ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಹೀಗಾಗಿ ಆಪರೇಷನ್‌ ಹಸ್ತಕ್ಕೆ ಸದಸ್ಯರು ಒಳಗಾಗದರೆ ಎನ್ನುವ ಚರ್ಚೆ ಜೋರಾಗಿದೆ.

ಕುತೂಹಲಕ್ಕೆ ಕಾರಣವಾದ ಬಿಜೆಪಿ ಸದಸ್ಯರ ನಡೆ 17 ಸದಸ್ಯತ್ವ ಬಣದ ಪಟ್ಟಣ ಪಂಚಾಯಿತಿ 12 ಬಿಜೆಪಿ, 3 ಕಾಂಗ್ರೆಸ್, 2 ಪಕ್ಷೇತರ

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಪ್ರತಿಯೊಬ್ಬರ ಮನೆಗೆ ಹೋಗಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ಅವರು ಸಭೆಗೂ ಬಂದಿಲ್ಲ. ಇದು ನಮಗೆ ನೋವು ತರಿಸಿದೆ
ಜ್ಯೋತಿ ಪಾಯಪ್ಪಗೌಡ್ರ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ವಿವಿಧ ಬೇಡಿಕೆಗಾಗಿ ಆರು ಸದಸ್ಯರು ಮುನಿಸಿಕೊಂಡಿದ್ದಾರೆ ಹೊರತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಅವರು ಪಕ್ಷದ ಮುಖಂಡರ ಸಂಪರ್ಕದಲ್ಲಿದ್ದು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ಹಿಡಿಯಲಿದೆ
ಮುತ್ತಣ್ಣ ಕಡಗದ ಅಧ್ಯಕ್ಷ ಬಿಜೆಪಿ ರೋಣ ಮಂಡಲ

ಕಾಂಗ್ರೆಸ್‌ ಅಧಿಕಾರಕ್ಕೆ ಬರಬಹುದೇ?

ಬಿಜೆಪಿ ಸದಸ್ಯರ ಮನಸ್ತಾಪದಿಂದ ಬಣಗಳಾದರೆ ಅಥವಾ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರೆ. ನಾಲ್ಕು ಸದಸ್ಯರ ಬಲವನ್ನು ಹೊಂದಿರುವ ಕಾಂಗ್ರೆಸ್‌ ಆರು ಜನ ಬಿಜೆಪಿ ಸದಸ್ಯರ ಬಲ ದೊರೆತರೆ 10ಕ್ಕೆ ಏರಿಕೆಯಾಗುತ್ತದೆ. ಅಲ್ಲದೆ ಶಾಸಕರ 1 ಮತ ಇದೆ. ಇದರಿಂದ 11ಕ್ಕೆ ಏರುತ್ತದೆ. ಆಗ ಕಾಂಗ್ರೆಸ್‌ ಅಧಿಕಾರಕ್ಕೆ ಬರಬಹುದು. ಆದರೆ ಸುಲಭದ ಮಾತಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಒಂದು ವೇಳೆ ಕಾಂಗ್ರೆಸ್‌ಗೆ ಅಧಿಕಾರ ದೊರೆತರೆ ಬಿಜೆಪಿಗೆ ತೀವ್ರ ಮುಖಭಂಗವಾಗಲಿದೆ. ಈ ಕುರಿತು ಮಾಜಿ ಶಾಸಕ ಕಳಕಪ್ಪ.ಜಿ.ಬಂಡಿ ಹಾಗೂ ಹಾಲಿ ಶಾಸಕ ಜಿ.ಎಸ್.‌ಪಾಟೀಲರಿಗೆ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಹೀಗಾಗಿ ತೆರೆಯ ಹಿಂದಿನ ರಾಜಕೀಯ ಜೋರಾಗಿದೆ ಎಂಬ ಮಾತು ಪಟ್ಟಣದಲ್ಲಿ ಕೇಳಿ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT