ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಡತ್ವ ಬದಲಾಯಿಸುವ ಹೊಸ ವ್ಯವಸ್ಥೆ ಜಾರಿ

ಜಿಮ್ಸ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 27 ಸೆಪ್ಟೆಂಬರ್ 2021, 5:34 IST
ಅಕ್ಷರ ಗಾತ್ರ

ಗದಗ: ‘ಸರ್ಕಾರದಲ್ಲಿರುವ ಜಡತ್ವವನ್ನು ತೆಗೆದು ಹಾಕಿ ನಿಗದಿತವಾಗಿ ಯೋಜನೆಗಳನ್ನು ಪೂರ್ಣಗೊಳಿಸು ಹೊಸ ವ್ಯವಸ್ಥೆಯನ್ನು ಜಾರಿ ತರಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್) ಆವರಣದಲ್ಲಿ ಭಾನುವಾರ ನಡೆದ ವಿವಿಧ ನೂತನ ಕಟ್ಟಡಗಳ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ನೇರವೇರಿಸಿ ಅವರು ಮಾತನಾಡಿದರು.

‘ಸರಿಯಾದ ಯೋಜನೆ ಹಾಗೂ ಯೋಚನೆ ಮಾಡುವಂತ ಕೆಲಸವನ್ನು ಸರ್ಕಾರದಲ್ಲಿ ಇದ್ದವರು ಹಾಗೂ ಸಂಬಂಧಿತ ಅಧಿಕಾರಿಗಳು ಮಾಡಬೇಕು. ಸರ್ಕಾರದಲ್ಲಿರುವ ಹಲವು ಜಡತ್ವಗಳಿಂದ ಸರ್ಕಾರದ ಕಾರ್ಯಕ್ರಮಗಳು ಸರಿಯಾದ ಸಮಯಕ್ಕೆ ಜನರಿಗೆ ತಲುಪುವುದಿಲ್ಲ. ಇನ್ನೂ ಮುಂದೆ ಆ ರೀತಿ ಆಗದಂತೆ ಕ್ರಮವಹಿಸಲಾಗುವುದು’ ಎಂದು ಹೇಳಿದರು.

‘ಹೊಸದಾಗಿ ನಿರ್ಮಾಣವಾಗಿರುವ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ವೈಜ್ಞಾನಿಕ ಚಿಂತನೆ, ಯೋಜನಾಬದ್ಧವಾಗಿ ಅಭಿವೃದ್ಧಿ ಮಾಡಲು ಸರ್ಕಾರ ಗಮನ ಹರಿಸಲಿದೆ. ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡದ ಜತೆಗೆ ಮಾನವ ಸಂಪನ್ಮೂಲಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು.

‘ಕೋವಿಡ್‌ 3ನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಗೆ‌ ವಿಶೇಷ ವಾರ್ಡ್‌, ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯನ್ನು ಮಾಡುವ ತಿರ್ಮಾನ ಕೈಗೊಳ್ಳಲಾಗಿದೆ. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಸಮಸ್ಯೆಯನ್ನು ಎದುರಿಸಿದ್ದೇವೆ. ಆದರೆ ಮುಂಬರುವ ದಿನಗಳಲ್ಲಿ ಆ ಸಮಸ್ಯೆ ಮರುಕಳಿಸಬಾರದು ಎಂದು ಗದಗ ಜಿಮ್ಸ್‌ನಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಲಾಗಿದೆ’ ಎಂದರು.

‘ಹಿಂದೆ ಜನಪ್ರತಿನಿಧಿಗಳ ಮೌಲ್ಯಮಾಪನ ಪ್ರತಿ 5 ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಆದರೆ, ಇದು ಡಿಜಿಟಲ್‌ ಯುಗ. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಮೌಲ್ಯಮಾಪನವನ್ನು ಜನರು ಮಾಡುತ್ತಾರೆ. ಹಾಗಾಗಿ, ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸಮಸ್ಯೆಗಳನ್ನು, ಸವಾಲುಗಳಾಗಿ ಪರಿವರ್ತಿಸಿ ಮೆಟ್ಟಿನಿಂತು ಗೆದ್ದುಬರುವುದೇ ನಿಜವಾದ ನಾಯಕತ್ವ’ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಜಿಮ್ಸ್ ಕಡಿಮೆ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಂಡಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವರ್ಗದ ವೈದ್ಯಕೀಯ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.

‘ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ರಾಜಕಾರಣವನ್ನು ಬದಿಗಿಟ್ಟು ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಶ್ರಮಿಸಬೇಕು’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು ಸಂತಸದ ಸಂಗತಿಯಾಗಿದ್ದು, ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಮಹತ್ತರ ಬದಲಾವಣೆಯಾಗುವ ನಂಬಿಕೆ ಇದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಜಿಮ್ಸ್ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದಾಗಿ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಆಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಚೊಚ್ಚಲ ಭೇಟಿ ನೀಡಿದ ಸವಿನೆನಪಿಗಾಗಿ ಜಿಲ್ಲೆಗೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯನ್ನು ಮುಂಬರುವ ಬಜೆಟ್‌ನಲ್ಲಿ ಘೋಷಿಸುವಂತೆ ಮನವಿ ಮಾಡಿದರು.

ಲೋಕೊಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಮುಖ್ಯಮಂತ್ರಿಗಳು ತಮ್ಮ ಚಿಕ್ಕ ಅವಧಿಯಲ್ಲಿಯೇ ಉತ್ತಮ ಆಡಳಿತ ನೀಡುವುದರ ಮೂಲಕ ಸರಳತೆಗೆ ದಾರಿಮಾಡಿಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ವೆಂಟಿಲೇಟರ್ ಹೊಂದಿದಂತಹ ಪ್ರಥಮ ಆಸ್ಪತ್ರೆ ಜಿಮ್ಸ್‌ ಆಗಿದ್ದು ಇದೊಂದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಳಕಪ್ಪ ಜಿ. ಬಂಡಿ, ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್‌ ಸದಸ್ಯರ ಎಸ್.ವಿ.ಸಂಕನೂರ ಇದ್ದರು.

‘ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶ ಸಿಗಬೇಕು’

‘ಗದಗ ಜಿಲ್ಲೆಯಲ್ಲಿ ನೀರಾವರಿ ಯೋಜನೆ, ಕುಡಿಯುವ ನೀರಿನ ಯೋಜನೆ, ಶೈಕ್ಷಣಿಕ ಅಭಿವೃದ್ಧಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ. ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿ ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ಭಾಗದಲ್ಲಿ ಔದ್ಯೋಗೀಕರಣ ಆಗಬೇಕಾದ ಅವಶ್ಯಕತೆ ಇದೆ. ಹಲವು ಕೈಗಾರಿಕೋದ್ಯಮಿಗಳು ನಮ್ಮ ರಾಜ್ಯಕ್ಕೆ ಬಂದು ಸಾವಿರಾರು ಕೋಟಿ ಹೂಡಿಕೆ ಮಾಡಲು ಸಿದ್ಧರಿದ್ದಾರೆ. ಆದರೆ, ನಮಗೆ ಅವರೆಲ್ಲಾ ಬೇಡ. ಹೆಚ್ಚು ಉದ್ಯೋಗ ಸೃಷ್ಟಿಸುವ ಹಾಗೂ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಅವಕಾಶ ನೀಡುವವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT