ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ: ಏಳು ಗ್ರಾಮಗಳಲ್ಲಿ ಹೋಳಿ ನಿಷಿದ್ಧ!

ಹೋಳಿ ಆಚರಿಸಿದರೆ ರುದ್ರನ ಕೋಪಕ್ಕೆ ತುತ್ತಾಗುತ್ತೇವೆಂಬ ನಂಬಿಕೆ
Last Updated 5 ಮಾರ್ಚ್ 2023, 6:10 IST
ಅಕ್ಷರ ಗಾತ್ರ

ಗಜೇಂದ್ರಗಡ: ಹೋಳಿ ಹುಣ್ಣಿಮೆ ಬಂತೆಂದರೆ ಸಾಕು ಎಲ್ಲೆಡೆ ಮಕ್ಕಳು, ಯುವಕರು ತಿಂಗಳುಗಟ್ಟಲೇ ಮೊದಲೇ ಹಲಗೆ ಬಾರಿಸುತ್ತ, ಬಾಯಿ ಬಡಿದುಕೊಳ್ಳುತ್ತ ಊರಲ್ಲಿ ತಿರುಗಾಡಿ ಹುಣ್ಣಿಮೆ ದಿನ ಕಾಮದಹನ ಮಾಡಿ ಹೋಳಿಗೆ ಉಂಡು ಹೋಳಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಆದರೆ, ಕಾಲಕಾಲೇಶ್ವರ ಹಾಗೂ ಇದರ ವ್ಯಾಪ್ತಿಗೆ ಬರುವ ಏಳು ಗ್ರಾಮಗಳಲ್ಲಿ ಬಾಯಿ ಬಡಿದುಕೊಳ್ಳುವುದು, ಹಲಗೆ ಬಾರಿಸುವುದು, ಓಕುಳಿ ಆಡುವುದು, ಕಾಮದಹನ ಮಾಡುವುದು ನಿಷಿದ್ಧ!

ಹೌದು, ಸಮೀಪದ ರಾಜೂರ, ಭೈರಾಪುರ, ಜಿಗೇರಿ, ದಿಂಡೂರ, ಲಕ್ಕಲಕಟ್ಟಿ, ನಾಗೇಂದ್ರಗಡ ಗ್ರಾಮಗಳನ್ನು ಒಳಗೊಂಡ ಕಾಲಕಾಲೇಶ್ವರ ಸುಕ್ಷೇತ್ರ ಒಂದು ಕಾಲದಲ್ಲಿ ಸ್ಮಶಾನ ಆಗಿತ್ತಂತೆ. ಐತಿಹ್ಯದ ಪ್ರಕಾರ ಹಿಂದೆ ಈ ಬೆಟ್ಟದಲ್ಲಿ ಗಜಾಸುರನೆಂಬ ರಾಕ್ಷಸ ನೆಲೆಸಿದ್ದನೆಂದು ಅವನ ಉಪಟಳ ತಾಳಲಾರದೆ ಋಷಿ-ಮುನಿಗಳು ಶಿವನಿಗೆ ಮೊರೆಯಿಟ್ಟಾಗ ಶಿವನು ಆ ರಾಕ್ಷಸನನ್ನು ಸಂಹರಿಸಿ ಅವನ ಚರ್ಮವನ್ನು ಸುತ್ತಿಕೊಂಡಿದ್ದರಿಂದ ಗಜಚರ್ಮಾಂಬರನಾಗಿ ಇಲ್ಲಿಯೇ ನೆಲೆಸಿದನೆಂದು ಹೇಳಲಾಗುತ್ತದೆ.

ಹೀಗಾಗಿ ಇಲ್ಲಿ ರುದ್ರ ನೆಲೆಸಿರುವುದರಿಂದ ಈ ಗ್ರಾಮಗಳಲ್ಲಿ ಹೋಳಿ ಆಚರಣೆ ನಿಷಿದ್ಧ. ಇಂತದ್ದೊಂದು ಸಂಪ್ರದಾಯವನ್ನು ಈ ಗ್ರಾಮಗಳ ಜನರು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದು, ಈ ನಿಯಮ ಮೀರಿದರೆ ಊರಿಗೆ ಕೇಡಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಈ ಗ್ರಾಮಗಳಲ್ಲಿ ಹೋಳಿ ಹುಣ್ಣಿಮೆ ಆಚರಣೆ ಇರುವುದಿಲ್ಲ.

ಹಲವು ದಶಕಗಳ ಹಿಂದೆ ಈ ಗ್ರಾಮಗಳ ಕೆಲ ಯುವಕರು ಹೋಳಿ ಆಚರಿಸಿ ಕಾಮದಹನ ಮಾಡಿದ ಸಂದರ್ಭದಲ್ಲಿ ಊರಲ್ಲಿರುವ ಅನೇಕ ಗುಡಿಸಲುಗಳಿಗೆ ಬೆಂಕಿ ಬಿದ್ದು ಸುಟ್ಟು ಹೋಗಿದ್ದವಂತೆ. ನಂತರ ಕೆಲವು ವರ್ಷಗಳ ನಂತರ ಆಚರಿಸಿದಾಗಲೂ ಮತ್ತೆ ಬೆಂಕಿ ಅವಘಡ ಸಂಭವಿಸಿತ್ತಂತೆ. ಹೀಗಾಗಿ ಇಲ್ಲಿಯ ಜನರು ಹೋಳಿ ಆಚರಿಸಿದರೆ ರುದ್ರನ ಕೋಪಕ್ಕಿಡಾಗುತ್ತೇವೆಂಬ ನಂಬಿಕೆಯಿಂದ ಹೋಳಿ ಆಚರಿಸುವುದಿಲ್ಲ.

‘ಕಳಕಮಲ್ಲಯ್ಯನ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಮದಹನ ಮಾಡಿದರೆ ಊರಿಗೆ ಕೇಡಾಗುತ್ತದೆ ಎಂದು ಹಿಂದಿನಿಂದಲೂ ನಮ್ಮ ಹಿರಿಯರು ಹೋಳಿ ಹುಣ್ಣಿಮೆ ಆಚರಿಸಿಲ್ಲ. ಹೀಗಾಗಿ ನಾವು ಸಹ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ' ಎನ್ನುತ್ತಾರೆ ಲಕ್ಕಲಕಟ್ಟಿ, ರಾಜೂರ ಗ್ರಾಮಗಳ ಯುವಕರಾದ ಹನಮಂತ ರಾಠೋಡ, ಸುರೇಶಗೌಡ ಪಾಟೀಲ, ಶರಣಪ್ಪ ಪಾಟೀಲ.

ಇದು ಕಾಲಕಾಲೇಶ್ವರನ ರುದ್ರಭೂಮಿ. ಇಲ್ಲಿ ಕಾಮದಹನ ಮಾಡುವಂತಿಲ್ಲ. ಮಾಡಿದರೆ ಆತನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅದು ಊರಿಗೆ ಕೇಡು ತರುತ್ತದೆ.

-ನಾಗಪ್ಪ ವ್ಯಾಪಾರಿ, ರಾಜೂರ ಗ್ರಾಮದ ಹಿರಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT