ಸೋಮವಾರ, ಮಾರ್ಚ್ 27, 2023
22 °C
ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 3 ತಿಂಗಳಿಂದ ಜಿಸಿಎಲ್‌

ಬಾಡಿಗೆ ಬಾಕಿ; ಲೋಕಾಯುಕ್ತಕ್ಕೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಬಿಜೆಪಿ ಮುಖಂಡ ಅನಿಲ್‌ ಮೆಣಸಿನಕಾಯಿ ಸಂಸ್ಥಾಪಕರಾಗಿರುವ ಗದಗ ಸ್ಪೋರ್ಟ್ಸ್‌ ಆ್ಯಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ತಿಂಗಳಿಂದ ಗದಗ ಕ್ರಿಕೆಟ್‌ ಲೀಗ್‌ (ಜಿಸಿಎಲ್‌) ನಡೆಯುತ್ತಿದ್ದು, ಕ್ರೀಡಾಂಗಣದ ಬಾಡಿಗೆ ಪಾವತಿಸಿಲ್ಲ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಜೆಡಿಎಸ್ ಮುಖಂಡ ವೆಂಕನಗೌಡ ಆರ್. ಗೋವಿಂದಗೌಡ್ರ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರಿಕೆಟ್ ಆಡಿಸಲು ಕ್ರೀಡಾಂಗಣ ಬಳಸಿಕೊಳ್ಳುವುದಕ್ಕೆ ಯಾವುದೇ ತಕರಾರಿಲ್ಲ. ಆದರೆ, ಸರ್ಕಾರಿ ಕ್ರೀಡಾಂಗಣವನ್ನು ಉಪಯೋಗಿಸುವವರು ಮುಂಚಿತವಾಗಿಯೇ ಬಳಸುವಷ್ಟು ದಿನಗಳ ಬಾಡಿಗೆ ತುಂಬುವುದು ನಿಯಮ. ಈ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ’ ಎಂದು ತಿಳಿಸಿದರು.

‘ಕ್ರೀಡಾಂಗಣ ಬಳಸುತ್ತಿದ್ದರೂ ಬಾಡಿಗೆ ಕಟ್ಟಿಸಿಕೊಳ್ಳದಿರುವುದು ಸರ್ಕಾರಕ್ಕೇ ನಷ್ಟ. ಆದ್ದರಿಂದ, ಕೂಡಲೇ ಸಂಬಂಧಿಸಿದವರಿಂದ ಬಾಡಿಗೆ ಕಟ್ಟಿಸಿಕೊಳ್ಳಬೇಕು. ಇಲ್ಲವೇ, ಕ್ರೀಡಾಂಗಣಕ್ಕೆ ಅನುಮತಿ ನೀಡಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯಿಂದ ತುಂಬಿಸಿಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದೇವೆ’ ಎಂದು ದಾಖಲೆ ನೀಡಿದರು.

‘ಅನಿಲ್‌ ಮೆಣಸಿನಕಾಯಿ ಅವರು ಗದಗ ನಗರದಲ್ಲಿ ಫ್ಲೈ ಓವರ್, ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹೊಂಬಳ ನಾಕಾ ರೈಲ್ವೆ ಮೇಲ್ಸೇತುವೆಯನ್ನು ಮೊದಲು ಪೂರ್ಣಗೊಳಿಸಿ, ನಂತರ ಫ್ಲೈ ಓವರ್ ಮಾಡಲಿ’ ಎಂದರು.

‘ಮನೆಗೊಂದು ರೊಟ್ಟಿ; ₹1 ನಾಣ್ಯ’ ಅಭಿಯಾನ ರಾಜಕೀಯ ಗಿಮಿಕ್ ಎಂಬುದು ಜನರಿಗೆ ಅರ್ಥವಾಗಿದೆ. ಬೆಂಗಳೂರಿನಲ್ಲಿ ಫೈವ್‌ಸ್ಟಾರ್ ಹೋಟೆಲ್‍ಗಳಲ್ಲಿ ಉಳಿಯುವವರಿಗೆ ₹1 ನಾಣ್ಯ ಯಾವುದಕ್ಕೆ ಸಾಕಾಗಬೇಕು?’ ಎಂದು ವ್ಯಂಗ್ಯವಾಡಿದರು.

ಗದಗ-ಬೆಟಗೇರಿಗೆ 24/7 ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಹತ್ತು ವರ್ಷಗಳಲ್ಲಿ ₹203 ಕೋಟಿ ಖರ್ಚಾಗಿದೆ. ವಿಸ್ತರಣಾ ಯೋಜನೆಯ ಒಟ್ಟು ಅನುದಾನವೇ ₹216 ಕೋಟಿ. ಇಷ್ಟು ಹಣ ಖರ್ಚಾದರೂ ಅವಳಿ ನಗರದ ಜನರಿಗೆ 24 ದಿನಕ್ಕೊಮ್ಮೆ ನೀರು ಬರುತ್ತಿದೆ. ಹಾಗಾದರೆ, ಆ ಹಣವೆಲ್ಲಾ ಎಲ್ಲಿ ಹೋಯಿತು? ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿರಲು ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹೊಣೆ’ ಎಂದು ಆರೋಪ ಮಾಡಿದರು.

24/7 ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗುವುದು ಎಂದು ಹೇಳಿದರು.

ಜೆಡಿಎಸ್‌ ಮುಖಂಡರಾದ ಬಸವರಾಜ ಅಪ್ಪಣ್ಣವರ, ಹಾಜೇರಿ ಕೊಪ್ಪಳ, ಸಿರಾಜ್‌ ಕದಡಿ, ಪ್ರಫುಲ್‌ ಪುಣೇಕರ, ರಾಘವೇಂದ್ರ, ರಮೇಶ ಕಲಬುರಗಿ ಇದ್ದರು.

‘ರೋಡ್‌ ಶೋ ವೇಳೆ ಸ್ಮೃತಿ ಪಲಾಯನ’

‘ಹಿಂದೆ ಅಡುಗೆ ಅನಿಲ ದರ ₹50 ಏರಿಕೆ ಆದಾಗ ರಸ್ತೆಗಿಳಿದು ಹೋರಾಡಿದ್ದ ಇಂದಿನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಈಗ ಪ್ರತಿಭಟನೆ ಎದುರಿಸಲಾರದೇ ಪಲಾಯನ ಮಾಡಿದರು’ ಎಂದು ವೆಂಕನಗೌಡ ವ್ಯಂಗ್ಯವಾಡಿದರು.

‘ಗದಗ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಮಾರ್ಗ ಮಧ್ಯೆ ಮಹಿಳೆಯರು ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದನ್ನು ಕಂಡ ಅವರು, ಯಾತ್ರೆಯ ಮೆರವಣಿಗೆಯುದ್ದಕ್ಕೂ ಪಾಲ್ಗೊಳ್ಳದೇ ಅರ್ಧದಲ್ಲೇ ಮೊಟಕುಗೊಳಿಸಿ, ಹಿಂದಿರುಗಿದರು’ ಎಂದು ಹೇಳಿದರು.

ಕ್ರಿಕೆಟ್ ಆಡಿಸಲು ಕಳೆದ ಮೂರು ತಿಂಗಳಿಂದ ಜಿಲ್ಲಾ ಕ್ರೀಡಾಂಗಣವನ್ನು ಬಳಸುತ್ತಿರುವವರು ಬಾಡಿಗೆಯನ್ನೇ ಕಟ್ಟಿಲ್ಲ. ಬಾಕಿ ಉಳಿಸಿಕೊಂಡಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ ವೆಂಕನಗೌಡ ಆರ್. ಗೋವಿಂದಗೌಡ್ರ, ಜೆಡಿಎಸ್‌ ಮುಖಂಡ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು