ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಂ ನಬಿ ಆಜಾದ್‌ರಿಂದ ಜನದ್ರೋಹಿ ನಿರ್ಣಯ: ಎಚ್‌.ಕೆ.ಪಾಟೀಲ ಕಿಡಿ

Last Updated 27 ಆಗಸ್ಟ್ 2022, 13:08 IST
ಅಕ್ಷರ ಗಾತ್ರ

ಗದಗ: ‘ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್‌ ದೇಶವ್ಯಾಪಿ ಸಕ್ರಿಯ ಹೋರಾಟ ಪ್ರಾರಂಭಿಸಿರುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ ತ್ಯಜಿಸುವ ನಿರ್ಣಯ ಕೈಗೊಂಡಿರುವುದು ಕೋಮುವಾದಿಗೆ ಬಲ ತುಂಬುವ ಪ್ರಯತ್ನವೇ ಹೊರತು ಬೇರೆನೂ ಅಲ್ಲ. ಕಾಂಗ್ರೆಸ್‌ನ ಪ್ರತಿ ಕಾರ್ಯಕರ್ತನೂ ಅವರ ನಿಲುವನ್ನು ತೀಕ್ಷ್ಣವಾಗಿ ವಿರೋಧಿಸುತ್ತಾನೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪಕ್ಷ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಆಜಾದ್‌ ಜನದ್ರೋಹಿ ನಿರ್ಣಯ ಕೈಗೊಂಡಿದ್ದಾರೆ. ಆದರೆ, ಅವರ ಈ ನಿರ್ಧಾರ ಕಾಂಗ್ರೆಸ್‌ ಇನ್ನಷ್ಟು ಗಟ್ಟಿಯಾಗಿ ಹೋರಾಟ ನಡೆಸುವ ಸಂದರ್ಭ ಸೃಷ್ಟಿಸಿದೆ’ ಎಂದು ಹೇಳಿದರು.

‘ಭಾರತ್‌ ಜೋಡೋ ಪಾದಯಾತ್ರೆ ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯ ಸರ್ವಾನುಮತದ ನಿರ್ಣಯ. ಹಿರಿಯ ನಾಯಕರಾಗಿದ್ದ ಆಜಾದ್‌ ಅವರು ಪಕ್ಷ ತ್ಯಜಿಸಿ ಆರೋಪ ಮಾಡುವ ಬದಲು, ಪಕ್ಷದಲ್ಲಿದ್ದಾಗಲೇ ಕಾಂಗ್ರೆಸ್‌ ಜೋಡೋ ಕಾರ್ಯಕ್ರಮ ಮಾಡಿ ಅಂತ ಹೇಳಬೇಕಿತ್ತು’ ಎಂದು ವಾಗ್ದಾಳಿ ನಡೆಸಿದರು.

‘ಸುಮಾರು 50 ವರ್ಷಗಳ ಕಾಲ ಪಕ್ಷ ಅವರಿಗೆ ಒಂದಿಲ್ಲೊಂದು ಗೌರವ, ಅಧಿಕಾರ, ಘನತೆ ಕಲ್ಪಿಸಿತ್ತು. ಪಕ್ಷದಲ್ಲಿದ್ದಷ್ಟು ಸಮಯ ಅವರಲ್ಲಿ ಅಸಮಾಧಾನ, ಆರೋಪಗಳೆಂಬುದೇ ಇರಲಿಲ್ಲ. ಆದರೆ, ಪಕ್ಷ ತ್ಯಜಿಸಿದ ನಂತರ ಶಿಷ್ಟಾಚಾರವನ್ನು ಮೀರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಬಿಜೆಪಿ ರಾಜ್ಯ ಸರ್ಕಾರಗಳ ಸರಣಿ ಹಂತಕ’ ಎಂಬ ಕೇಜ್ರಿವಾಲ್ ಟ್ವೀಟ್‌ಗೆ ಧ್ವನಿಗೂಡಿಸಿದ ಅವರು, ‘ಕೇಜ್ರಿವಾಲ್ ಅವರು ಹೇಳಿದ್ದನ್ನೇ ಕಾಂಗ್ರೆಸ್ ನಾಯಕರು ಹತ್ತು ಹಲವು ಬಾರಿ ಹೇಳಿದ್ದಾರೆ’ ಎಂದು ಹೇಳಿದರು.

ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳ ಕನಸಿಗೆ ತಣ್ಣೀರು ಎರಚುತ್ತಿರುವ ಬಿಜೆಪಿ:ಪಾಟೀಲ ಆರೋಪ
ಗದಗ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಯುವಜನರನ್ನು ಸಂಕಷ್ಟಕ್ಕೆ ದೂಡಿವೆ. ಅಲ್ಲದೇ ಎಲ್ಲೆಡೆ ಹೊರಗುತ್ತಿಗೆ ಪದ್ಧತಿ ಜಾರಿಗೊಳಿಸುವ ಮೂಲಕ ಒಂದು ತಲೆಮಾರಿನ ಸಾಂವಿಧಾನಿಕ ಮೀಸಲಾತಿಯನ್ನೇ ಕಸಿದುಕೊಂಡಿದೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅರ್ಹತೆ ಆಧಾರದ ಮೇಲೆ ನಡೆಯುವ ನೇಮಕಾತಿ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮೂರು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾರಿ ಪ್ರಮಾಣದಲ್ಲಿ ಅನ್ಯಾಯ ಆಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಪಿಎಸ್‌ಐ, ಎಂಜಿನಿಯರಿಂಗ್‌, ಕೆಪಿಟಿಸಿಎಲ್‌ ಸೇರಿದಂತೆ ಹಲವು ಇಲಾಖೆಗಳ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರಗಳು ನಡೆದಿರುವುದು ತನಿಖೆಯಿಂದ ದೃಢಪಟ್ಟಿದೆ. ಭ್ರಷ್ಟ ವ್ಯವಸ್ಥೆಯಲ್ಲಿ ಅರ್ಹತೆಗಿಂತ ಹಣವೇ ಮೇಲುಗೈ ಸಾಧಿಸುತ್ತಿರುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಆಸೆಗೆ ತಣ್ಣೀರು ಎರಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಕಿಡಿಕಾರಿದರು.

‘ಅರ್ಹತೆ ಇರುವವರಿಗೆ ಉದ್ಯೋಗ ಒದಗಿಸಬೇಕು. ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಬಯಲಿಗೆಳೆದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಅಂದಾಜು ಮೂರು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಬೇಕಿದ್ದರೂ ಸರ್ಕಾರಗಳು ಸುಮ್ಮನೆ ಕುಳಿತಿವೆ. ರಾಜ್ಯ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಗೋಪ್ಯತೆ ಮತ್ತು ಭದ್ರತೆ ಕಾಯ್ದುಕೊಳ್ಳಬೇಕಿರುವ ಕಡೆಗಳಲ್ಲೂ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು. ಹೊರಗುತ್ತಿಗೆ ಪದ್ಧತಿಯನ್ನು ಸಂಪೂರ್ಣ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿಯು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇಟ್ಟಿಲ್ಲ. ರಾಷ್ಟ್ರದಲ್ಲಿ ಸಂಪೂರ್ಣ ಅಧಿಕಾರ ಇಟ್ಟುಕೊಂಡು ನಿರಂಕುಶವಾದಿಯಾಗಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ಚುನಾಯಿತ ಸರ್ವಾಧಿಕಾರಿ ವ್ಯವಸ್ಥೆ ಇದೆ. ದೇಶದಲ್ಲಿ ಗುಣಮಟ್ಟದ ಪ್ರಜಾಪ್ರಭುತ್ವ ಇಲ್ಲ ಎಂದು ವಿಶ್ವವಿದ್ಯಾಲಯಗಳು ಸಂಶೋಧನೆ ಮಾಡಿ ವರದಿ ನೀಡಿವೆ’ ಎಂದು ಹೇಳಿದರು.

ಹಿರಿಯ ಮುಖಂಡ ವಾಸಣ್ಣ ಕುರಡಗಿ, ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಮಂದಾಲಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಉಮರ್‌ ಫಾರೂಕ್‌ ಹುಬ್ಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT