ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ | ಶಂಕಿತ ಡೆಂಗಿಗೆ ಬಾಲಕಿ ಬಲಿ: ವೈದ್ಯರ ನಿರ್ಲಕ್ಷ್ಯ ಆರೋಪ

Published : 14 ಆಗಸ್ಟ್ 2024, 16:03 IST
Last Updated : 14 ಆಗಸ್ಟ್ 2024, 16:03 IST
ಫಾಲೋ ಮಾಡಿ
Comments

ಶಿರಹಟ್ಟಿ: ತೀವ್ರ ಜ್ವರದಿಂದ ಬಳಲುತ್ತಿದ್ದ ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದ ಬಾಲಕಿ ಬೇಬಿ ವಿಠ್ಠಲ ತುಮ್ಮಿನಕಟ್ಟೆ (13) ಎಂಬ ಬಾಲಕಿ ಬುಧವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಜ್ವರ ಕಾಣಿಸಿಕೊಂಡ ಕಾರಣ ಆಗಸ್ಟ್‌ 11ರಂದು ಆಕೆಗೆ ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಶಂಕಿತ ಡೆಂಗಿ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು.

‘ಬಾಲಕಿಯನ್ನು ಆಸ್ಪತ್ರೆಗೆ ಕರೆತಂದ ವೇಳೆಗೆ ತೀವ್ರಜ್ವರದಿಂದ ಬಳಲುತ್ತಿದ್ದಳು. ಎಲ್ಲ ಪರೀಕ್ಷೆಗಳನ್ನು ಮಾಡಿದ ನಂತರ ಆಕೆಗೆ ವೈರಲ್ ಮಯೋಕಾರ್ಡಿಟಿಸ್ ಅಂದರೆ ಹೃದಯದ ಪದರಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿತು. ಈ ರೀತಿಯ ಆರೋಗ್ಯ ಸಮಸ್ಯೆ ಎದುರಾದಾಗ ರಕ್ತದೊತ್ತಡ ಕಡಿಮೆ ಆಗುತ್ತದೆ. ರೋಗಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆತರುವುದು ಮುಖ್ಯ. ಲೈಫ್‌ ಅವರ್‌ನಲ್ಲಿ ಚಿಕಿತ್ಸೆ ಸಿಗದೇ ಹೋದರೆ ಪ್ರಾಣ ಉಳಿಸುವುದು ಕಷ್ಟವಾಗುತ್ತದೆ’ ಎಂದು ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ– ಪೋಷಕರ ಆರೋಪ: ಬೇಬಿ ತುಮ್ಮಿನಕಟ್ಟಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕಿಯ ಪೋಷಕರು ಆರೋಪ ಮಾಡಿದ್ದಾರೆ.

ಶಂಕಿತ ಡೆಂಗಿ ಪ್ರಕರಣ ಎಂದು ಹೇಳಿ ಶಿರಹಟ್ಟಿ ತಾಲ್ಲೂಕು ಆಸ್ಪತ್ರೆ ವೈದ್ಯರು ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದರು. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರು ಮಗುವಿನ ಆರೈಕೆಯಲ್ಲಿ ನಿಷ್ಕಾಳಜಿ ತೋರಿದರು. ಹಿರಿಯ ವೈದ್ಯರು ಮಗುವಿಗೆ ಚಿಕಿತ್ಸೆ ನೀಡದೇ ಎಂಬಿಬಿಎಸ್‌ ಕಲಿಕಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ಸಾವಿಗೆ ಕಾರಣ ಎಂದು ಗ್ರಾಮದ ಮುಖಂಡ ಶಂಕರ ಮರಾಠೆ ಆರೋಪಿಸಿದರು.

ಜಿಮ್ಸ್‌ನಲ್ಲಿ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮವಹಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT