ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ನರೇಗಾ ಅಡಿ ಕೂಲಿ ಪಾವತಿಗೆ ಆಗ್ರಹ

ಅಪೌಷ್ಟಿಕ ಮಕ್ಕಳ ಸುಧಾರಣಾ ಶಿಬಿರಕ್ಕೆ ಶಾಸಕ ಎಚ್‌.ಕೆ.ಪಾಟೀಲ ಭೇಟಿ
Last Updated 26 ಜುಲೈ 2021, 2:56 IST
ಅಕ್ಷರ ಗಾತ್ರ

ಗದಗ: ‘ಮಕ್ಕಳ ಅಪೌಷ್ಟಿಕತೆ ನೀಗಿಸಲುಜಿಲ್ಲಾಡಳಿತ ವಿಶೇಷ ಶಿಬಿರ ಆಯೋಜಿಸಿರುವುದು ಸರಿಯಷ್ಟೇ. ಆದರೆ, ಮಗುವಿನ ಜತೆಗೆ ಬಂದಿರುವ ಪೋಷಕರಿಗೆ 14 ದಿನಗಳ ಕೂಲಿಯನ್ನು ನರೇಗಾ ಯೋಜನೆ ಅಡಿ ನೀಡಲು ಕ್ರಮವಹಿಸಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಒತ್ತಾಯಿಸಿದರು.

ನಗರದ ಬಾಲಕಿಯರ ವಸತಿ ನಿಲಯದಲ್ಲಿ ತೆರೆದಿರುವ ತೀವ್ರ ಅಪೌಷ್ಟಿಕ ಮಕ್ಕಳ ಸುಧಾರಣಾ ಶಿಬಿರಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು.

‘ಗದಗ ತಾಲ್ಲೂಕಿನಲ್ಲಿ ಒಟ್ಟು 68 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಆ ಮಕ್ಕಳಿಗೆ ಎರಡು ಶಿಬಿರ ನಡೆಸಲಾಗಿದೆ. ಇಲ್ಲಿಗೆ ಬಂದು ಹೋದ ಮಕ್ಕಳ ತೂಕ ಸರಾಸರಿ 200 ಗ್ರಾಂನಷ್ಟು ಏರಿಕೆ ಆಗಿದೆ. ಶಿಬಿರದಲ್ಲಿ ಮಕ್ಕಳಿಗೆ ಮೊಟ್ಟೆ ಸೇರಿದಂತೆ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ಮನೆಯಲ್ಲಿ ಕೂಡ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಂತೆ ತಿಳಿವಳಿಕೆ ಮೂಡಿಸಲಾಗಿದೆ. ಶಿಬಿರದಿಂದ ಹೋದ ಮಕ್ಕಳ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ನಿಗಾವಹಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಮತ್ತಷ್ಟು ತೀವ್ರಗೊಳಿಸಬೇಕು. ಜಿಲ್ಲೆಯಲ್ಲಿ ಈವರೆಗೆ 4,17,202 ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಇದರಲ್ಲಿ 3,21,825 ಜನರಿಗೆ ಮೊದಲ ಲಸಿಕೆ, 95,378 ಜನರಿಗೆ ಎರಡನೇ ಲಸಿಕೆ ಲಭಿಸಿದೆ. ಇನ್ನೂ ಎರಡರಿಂದ ಮೂರು ಪಟ್ಟು ಲಸಿಕೆ ಅಗತ್ಯತೆ ಜಿಲ್ಲೆಗೆ ಇದೆ. ಸರ್ಕಾರ ಈ ಕೂಡಲೇ ಲಸಿಕೆ ಪೂರೈಕೆ ಹೆಚ್ಚಳ ಮಾಡಲು ಕ್ರಮವಹಿಸಬೇಕು’ ಎಂದು ಹೇಳಿದರು.

ಟಿಎಚ್‍ಒ ಡಾ.ಎಸ್.ಎಸ್. ನೀಲಗುಂದ, ಗದಗ ತಾಲ್ಲೂಕು ಪಂಚಾಯ್ತಿ ಇಒ ಡಾ.ಎಚ್.ಎಸ್.ಜನಗಿ, ಸಿಡಿಪಿಒ ಹುಲಿಗೆವ್ವ ಜೋಗೇರ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಮುಖಂಡರಾದ ಸಿದ್ದು ಪಾಟೀಲ, ರಾಜೂಗೌಡ ಕೆಂಚನಗೌಡ್ರ, ಪ್ರಭು ಬುರಬುರೆ, ಉಮರಫಾರೂಕ್ ಹುಬ್ಬಳ್ಳಿ, ಬಸವರಾಜ ಕಡೇಮನಿ ಇದ್ದರು.

ಮೋದಿ, ಶಾ ರಾಜೀನಾಮೆಗೆ ಆಗ್ರಹ
‘ಪ್ರಧಾನಮಂತ್ರಿ ಮೋದಿ ಅವರು ಚುನಾಯಿತ ಸರ್ಕಾರಗಳನ್ನು ಕೆಡವಲು ಪೆಗಾಸಸ್ ಕಣ್ಗಾವಲು ತಂತ್ರಾಂಶ ಬಳಸಿದ್ದು ದುರ್ದೈವದ ಸಂಗತಿ’ ಕಾಂಗ್ರೆಸ್‌ ಹಿರಿಯ ಮುಖಂಡ ಎಚ್‌.ಕೆ.ಪಾಟೀಲ ದೂರಿದರು.

‘ರಕ್ಷಣಾ ವಲಯ, ಆಂತರಿಕ ಭದ್ರತೆ ಬಗ್ಗೆ ಬೇಹುಗಾರಿಕೆ ನಡೆಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಪೆಗಾಸಸ್ ಕಣ್ಗಾವಲು ತಂತ್ರಾಂಶ ಬಳಸಿ ದೇಶದ ಮಾನಕ್ಕೆ ಧಕ್ಕೆ ಮಾಡಿದ್ದಾರೆ. ಕೂಡಲೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ದೇಶದಲ್ಲಿ ಈವರೆಗೆ ಕೇವಲ ಫೋನ್ ಕದ್ದಾಲಿಕೆ ಪ್ರಕರಣ ಕಾಣುತ್ತಿದ್ದೆವು. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನ್ಯಾಯಾಧೀಶರು, ಚುನಾವಣಾ ಆಯೋಗದ ಸದಸ್ಯರು, ವಿರೋಧ ಪಕ್ಷದ ನಾಯಕರು, ಆಯಕಟ್ಟಿನ ಅಧಿಕಾರಿಗಳಷ್ಟೇ ಅಲ್ಲದೇ ಸರ್ಕಾರದ ಭಾಗವಾಗಿರುವ ಕೆಲವು ಸಚಿವರ ಫೋನ್ ಕದ್ದಾಲಿಕೆ ಜೊತೆಗೆ ಅವರ ವಾಟ್ಸ್‌ಆ್ಯಪ್, ಇ– ಮೇಲ್ ಮತ್ತು ಅವರ ಖಾಸಗಿತನದ ಮೇಲೂ ಬೇಹುಗಾರಿಕೆ ಮಾಡಿದ್ದು ಅಪರಾಧ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT