ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮೋತ್ಸವ ರಾಜಕೀಯ ಜಾತ್ರೆ; ಲೇವಡಿ

ರಾಜಕೀಯವಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿರುವ ಕಾಂಗ್ರೆಸ್‌– ಸಚಿವ ಹಾಲಪ್ಪ ಆಚಾರ್‌
Last Updated 16 ಜುಲೈ 2022, 4:02 IST
ಅಕ್ಷರ ಗಾತ್ರ

ಗದಗ: ‘ಕಾಂಗ್ರೆಸ್‌ ಪಕ್ಷಲ್ಲೇ ಒಳಜಗಳವಿದ್ದು, ನಾಯಕರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿ, ಸಿದ್ದರಾಮೋತ್ಸವ ಎಂಬುದು ಕಾಂಗ್ರೆಸ್‌ನವರು ಕಾಂಗ್ರೆಸ್‌ನವರಿಗಾಗಿಯೇ ಮಾಡಿಕೊಳ್ಳುತ್ತಿರುವ ಉತ್ಸವ ಅಷ್ಟೇ’ ಎಂದು ಸಚಿವ ಹಾಲಪ್ಪ ಆಚಾರ್‌ ಲೇವಡಿ ಮಾಡಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್‌ಗೆ ಭಯ ಬೀಳುವ ಪ್ರಶ್ನೆಯೇ ಇಲ್ಲ. ರಾಜಕೀಯವಾಗಿ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನುಸಂಪೂರ್ಣ ಕಳೆದುಕೊಂಡಿದೆ. ಅದನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಕೇರಳದಿಂದ ಆಂಧ್ರದವರೆಗೆ ಬೇಕಾದರೂ ಪಾದಯಾತ್ರೆ ಮಾಡುತ್ತಾರೆ’ ಎಂದು ಕಾಲೆಳೆದರು.

‘ದೇಶದ ಬಹುತೇಕ ಭಾಗದಲ್ಲಿ ಕಾಂಗ್ರೆಸ್‌ ಮುಳುಗಿದ್ದು, ರಾಜ್ಯದಲ್ಲಿ ಅಲ್ಪಸ್ವಲ್ಪ ಉಳಿದುಕೊಂಡಿದೆ. ಅದಕ್ಕಾಗಿಯೇ ಇಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಹೆಸರಿನಲ್ಲಿ ರಾಜಕೀಯ ಜಾತ್ರೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹಂಗಿಸಿದರು.

‘60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕರಿಗೆ ಆಗ ಜನರ ಸಮಸ್ಯೆಗಳು ನೆನಪಾಗಲಿಲ್ಲವೇ? ಅಧಿಕಾರ ಕಳೆದುಕೊಂಡ ನಂತರವಷ್ಟೇ ಜನರು ನೆನಪಾದರೆ? ಈಗಾಗಲೇ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್‌, ಜನರ ಮಧ್ಯೆ ಹೆಸರು ಉಳಿಯಲಿ ಎಂಬ ಕಾರಣಕ್ಕೆ ಉತ್ಸವ ಆಯೋಜಿಸಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಜನರ ಬಳಿಗೆ ಹೋಗಲು ಅವರಿಗೆ ಒಂದು ಕಾರಣ ಬೇಕಿತ್ತು. ಹಾಗಾಗಿ, ಸಿದ್ದರಾಮೋತ್ಸವ ಎಂಬುದು ರಾಜಕೀಯ ಗಿಮಿಕ್‌ ಅಷ್ಟೇ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಎಲ್ಲ ಮುಖಂಡರನ್ನು ಕಟ್ಟಿಕೊಂಡು ಕಾಂಗ್ರೆಸ್‌ ನಡಿಗೆ ಕೃಷ್ಣೆ ಕಡೆಗೆ ಎಂದು ಪಾದಯಾತ್ರೆ ಮಾಡಿದರು. ಪ್ರತಿ ವರ್ಷ ಬಜೆಟ್‌ನಲ್ಲಿ ಕೃಷ್ಣಾ ನದಿ ನೀರಿನ ಯೋಜನೆಗೆ ₹10 ಸಾವಿರ ಕೋಟಿ ಕೊಡುವುದಾಗಿ ಘೋಷಿಸಿದರು. ಆದರೆ, ಅವರು ಹೇಳಿದಂತೆ ನಡೆದುಕೊಳ್ಳಲಿಲ್ಲ’ ಎಂದು ದೂರಿದರು.

‘ನೂತನ ಮರಳು ನೀತಿ ಪ್ರಕಾರ ಬ್ಲಾಕ್‌ಗಳನ್ನು ಮಾಡಿಕೊಡಲಾಗಿದೆ. ಗ್ರಾಮೀಣ ಭಾಗದಲ್ಲಿ ಸಣ್ಣ ಹಳ್ಳ ತೊರೆ ಇದ್ದರೆ ಪಂಚಾಯ್ತಿ ಮೂಲಕ ಕೊಡುವ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗಬೇಕು ಎಂಬುದಷ್ಟೇ ನಮ್ಮ ಗುರಿಯಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ತುಂಡು ತುಂಡಾಗಿರಬಹುದು. ಆದರೆ, ಭಾರತ ದೇಶ ಏಕವಾಗಿದೆ. ಹಾಗಾಗಿ, ಕಾಂಗ್ರೆಸ್‌ನವರಿಗೆ ದೇಶವನ್ನು ಜೋಡಿಸುವ ಕೆಲಸ ಬೇಕಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಬಿಜೆಪಿ
ಹಾಲಪ್ಪ ಆಚರ್‌, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT