ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಮುಖ್ಯ ಶಿಕ್ಷಕಿ ಕೊಠಡಿಗೆ ಬೀಗ ಹಾಕಿದ ಸಹಶಿಕ್ಷಕರು

Published 2 ಫೆಬ್ರುವರಿ 2024, 16:23 IST
Last Updated 2 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ (ಗದಗ ಜಿಲ್ಲೆ): ತಾಲ್ಲೂಕಿನ ಶಿಗ್ಲಿ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಜನವರಿ 26ರ ಧ್ವಜಾರೋಹಣ ವಿಷಯದಲ್ಲಿ ಮುಖ್ಯ ಶಿಕ್ಷಕಿ ಮತ್ತು ಸಹಶಿಕ್ಷಕರ ನಡುವೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿಯ ಕೊಠಡಿಗೆ ಸಹಶಿಕ್ಷಕರು ಶುಕ್ರವಾರ ಬೀಗ ಹಾಕಿದರು.

ಕೆಲ ದಿನಗಳಿಂದ ಮುಖ್ಯ ಶಿಕ್ಷಕಿ ಎನ್.ಎಂ. ಕೊಟಗಿ ಮತ್ತು ಶಿಕ್ಷಕರಲ್ಲಿ ಭಿನ್ನಾಭಿಪ್ರಾಯ ಮುಂದುವರೆದಿದೆ. ಮುಖ್ಯ ಶಿಕ್ಷಕಿಯನ್ನು ಮೂರು ದಿನಗಳಿಂದ ಹೊರಗೆ ಕುಳ್ಳಿರಿಸಲಾಗಿತ್ತು. ಮುಖ್ಯ ಶಿಕ್ಷಕಿ ಕೂಡ ಹೊರಗೇ ಕುಳಿತು ಹೋಗುತ್ತಿದ್ದರು.

ಮುಖ್ಯ ಶಿಕ್ಷಕಿ ಶಾಲೆಗೆ ಬರುವುದರೊಳಗಾಗಿ ಸಹಶಿಕ್ಷಕರು ಕೊಠಡಿಗೆ ಬೀಗ ಹಾಕಿದ್ದರು. ಶಾಲೆಗೆ ಬಂದ ಅವರು ಇದನ್ನು ನೋಡಿ ವಿಚಲಿತರಾಗಿ ಬೀಗ ಹಾಕಿದ ಕೊಠಡಿ ಎದುರೇ ಕೂತರು.

‘ಶಾಲೆಯಲ್ಲಿ ಎರಡು ಹಾಜರಾತಿ ಪುಸ್ತಕ ಇವೆ. ಸಹಶಿಕ್ಷಕರು ಮನ ಬಂದಂತೆ ವರ್ತಿಸುತ್ತಾರೆ. ನನಗೂ ಹೇಳದೇ ಶಾಲೆ ಬಿಟ್ಟು ಹೋಗುತ್ತಾರೆ’ ಎಂದು ಮುಖ್ಯ ಶಿಕ್ಷಕಿ ಕೊಟಗಿ ಆರೋಪಿಸಿದರು.

ಸಿಆರ್‌ಸಿ ಜ್ಯೋತಿ ಗಾಯಕವಾಡ ಶಾಲೆಗೆ ಭೇಟಿ ನೀಡಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ  ನೀಡಿದರು. ‘ಶಿಕ್ಷಕರ ನಡುವೆ ಹೊಂದಾಣಿಕೆ ಇರದ ಕಾರಣ ಇಂಥ ಗಲಾಟೆ ನಡೆಯುತ್ತಲೇ ಇವೆ. ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು’ ಎಂದು ಎಸ್‍ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಪಟ್ಟು ಹಿಡಿದರು.

ನಂತರ, ಜ್ಯೋತಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ‘ಶನಿವಾರ ಮುಖ್ಯ ಶಿಕ್ಷಕಿ ಕೊಟಗಿ ಅವರನ್ನು ಈ ಶಾಲೆಯಿಂದ ಬಿಡುಗಡೆ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ’ ಎಂದರು. ಆಗ ಗ್ರಾಮಸ್ಥರು ಶಾಲೆಯಿಂದ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT