ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್: ಉದ್ಘಾಟನೆಯಾಗಿ ಪಾಳುಬಿದ್ದ ಸಮುದಾಯ ಆರೋಗ್ಯ ಕೇಂದ್ರ

ಚಂದ್ರು ಎಂ. ರಾಥೋಡ್
Published 22 ಜನವರಿ 2024, 8:43 IST
Last Updated 22 ಜನವರಿ 2024, 8:43 IST
ಅಕ್ಷರ ಗಾತ್ರ

ನರೇಗಲ್: ಪಟ್ಟಣದ 6 ಹಾಸಿಗೆಯುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಗತ್ಯಕ್ಕೆ ತಕ್ಕಂತೆ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವೆಂದು ಉನ್ನತೀಕರಿಸಿ ಎರಡೂವರೆ ವರ್ಷಕ್ಕಿಂತ ಹೆಚ್ಚು ದಿನಗಳಾಗಿವೆ. ಆದರೆ, ಇಂದಿಗೂ ಸರ್ಕಾರದಿಂದ ಅನುಮತಿ ದೊರೆಯದ ಕಾರಣ ಉಪಯೋಗಕ್ಕೆ ಬಾರದೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ನಿರ್ಮಿಸಲಾದ ನೂತನ ಕಟ್ಟಡ ಪಾಳು ಬಿದ್ದಿದೆ. ಈಗಿರುವ ಕಿರಿದಾದ ಕಟ್ಟಡದಲ್ಲಿ ದಿನವೂ ರೋಗಿಗಳು ಪರದಾಡುತ್ತಿದ್ದಾರೆ. ಹೀಗಾಗಿ, ಕೆಲವು ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಮಾಜಿ ಶಾಸಕ ಕಳಕಪ್ಪ ಜಿ. ಬಂಡಿ 2021ರ ಜುಲೈ 7ರಂದು ಉದ್ಘಾಟಿಸಿದ್ದರು. ವೈದ್ಯರ ಕೊರತೆ ನಿಭಾಯಿಸುವ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದರು. ಆಗಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ ಅವರು ಇಲ್ಲಿನ ನೂತನ ಆಸ್ಪತ್ರೆಗೆ ವೈದ್ಯರು, ಅರವಳಿಕೆ ತಜ್ಞರ, ಸ್ಕ್ಯಾನಿಂಗ್‌ ತಂತ್ರಜ್ಞರ ಸೇರಿದಂತೆ ಸಿಬ್ಬಂದಿ ಕೊರತೆ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಆದಷ್ಟು ಬೇಗ ಅವಶ್ಯಕ ಉಪಕರಣ ಹಾಗೂ ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸುವ  ಭರವಸೆ ನೀಡಿದ್ದರು. ಆದರೆ ಇಂದಿಗೂ ಯಾವ ಜನಪ್ರತಿನಿಧಿಗಳೂ, ಅಧಿಕಾರಿಗಳೂ ಜನರ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಕಟ್ಟಡವನ್ನು ಸರ್ಕಾರದಿಂದ ಅನುಮತಿ ಪಡೆದು ಬಳಕೆಗೆ ಮುಂದಾಗಿಲ್ಲ ಎನ್ನುವುದು ಸಾರ್ವಜನಿಕರ  ಆರೋಪವಾಗಿದೆ.‌

ನಾಲ್ಕು ಜನ ವೈದ್ಯರು, ಒಬ್ಬರು ಅರಿವಳಿಕೆ ತಜ್ಞರು ಸೇರಿದಂತೆ ನೂತನ ಕಟ್ಟಡಕ್ಕೆ ಅಂದಾಜು 35 ಮಂದಿ ಸಿಬ್ಬಂದಿ ಬೇಕಾಗುತ್ತದೆ. ತಂತ್ರಜ್ಞರ ಉಪಕರಣಗಳು ಸರಬರಾಜು ಮಾಡಿಲ್ಲ. ಸುತ್ತಲೂ ಕಾಂಪೌಂಡ್‌ ನಿರ್ಮಾಣ ಮಾಡಿಲ್ಲ. ಆದರೆ, ಇಲ್ಲಿನ ಆಸ್ಪತ್ರೆಯಲ್ಲಿ ನರೇಗಲ್‌ ಹೋಬಳಿ ಅನೇಕ ಹಳ್ಳಿಗಳು ಹಾಗೂ ಕಲ್ಯಾಣ ಕರ್ನಾಟಕದ ಗಡಿ ಭಾಗದ ಹಳ್ಳಿಯ ಜನರು ಅವಲಂಬಿತರಾಗಿದ್ದಾರೆ. ಆದ್ದರಿಂದ ಪ್ರತಿದಿನ 300ರಿಂದ 500ರವರೆಗೆ ಹೊರರೋಗಿಗಳು ಬರುವುದು ಸಾಮಾನ್ಯವಾಗಿದೆ. ಆದರೆ, ಕಿರಿದಾದ ಕಟ್ಟಡ ಹಾಗೂ ಸೌಲಭ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

‘ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಡ್‌ ಆಫ್‌ ಅಕೌಂಟ್‌ ಎನ್ನುವುದು ಇದೆ. ಅದಕ್ಕೆ ತಕ್ಕಂತೆ ಸಿಬ್ಬಂದಿ ನೇಮಕಾತಿ ಹಾಗೂ ವೇತನಕ್ಕೆ ಸರ್ಕಾರ ಅನುಮತಿ ನೀಡುತ್ತಿದೆ. ಈಗಿನದು ಸಮುದಾಯ ಆರೋಗ್ಯ ಕೇಂದ್ರವೆಂದು ಉನ್ನತೀಕರಣಗೊಂಡರೆ ಹೆಡ್‌ ಆಫ್‌ ಅಕೌಂಟ್‌ ಬದಲಾಗುವುದರ ಜೊತೆಯಲ್ಲಿ ಸಿಬ್ಬಂದಿ ನೇಮಕಾತಿ ಹಾಗೂ ವೇತನ ಎಲ್ಲವೂ ಬದಲಾಗುತ್ತದೆ. ಅದಕ್ಕೆ ಸರ್ಕಾರದ ವಿವಿಧ ಇಲಾಖೆಯಿಂದ ಅನುಮತಿ ಬೇಕಾಗುತ್ತದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ. ಡಿ. ಸಾಮುದ್ರಿ ತಿಳಿಸಿದರು.

ಹಣಕಾಸು ಇಲಾಖೆ ಅನುಮತಿ ದೊರೆತಿಲ್ಲ: ರಾಜ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ 23 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇಲ್ಲಿನದೂ ಒಂದಾಗಿದೆ. ಅನುಮತಿಗಾಗಿ ಕಾಯ್ದಿರುವ‌ ರಾಜ್ಯ 11 ಪಿ.ಎಚ್.ಸಿಯಲ್ಲಿ ನರೇಗಲ್ ಪಟ್ಟಣದ ಹೆಸರು ಇದೆ. ಈಗಾಗಲೇ ಇಲ್ಲಿನ ನೂತನ ಕಟ್ಟಡ ಪೂರ್ಣಗೊಂಡಿರುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಹಣಕಾಸು ಇಲಾಖೆಯಿಂದ ಇನ್ನೂ ಅನುಮತಿ ದೊರೆತಿಲ್ಲ. ಹಾಗಾಗಿ ಬಳಕೆಗೆ ಮುಂದಾಗಿಲ್ಲ. ಈ ಕುರಿತು ನಿರಂತರ ಗಮನ ಹರಿಸುತ್ತಿದ್ದೇವೆ. ಆದಷ್ಟು ಬೇಗ ಸರ್ಕಾರದಿಂದ ಅನುಮತಿ ಸಿಗುವೆ ಸಾಧ್ಯತೆ ನಿರೀಕ್ಷೆ ಇದೆ ಎಂದು ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ತಿಳಿಸಿದರು.

ಆಸ್ಪತ್ರೆ ಆವರಣ ಬಯಲು ಶೌಚಕ್ಕೆ ಬಳಕೆ:

‘ಇಲ್ಲಿನ ಆಸ್ಪತ್ರೆಗೆ ಸುತ್ತಲೂ ಕಾಂಪೌಂಡ್‌ ವ್ಯವಸ್ಥೆ ಇಲ್ಲದಿರುವ ಕಾರಣ ನಾಗರಕೆರೆ ಹಾಗೂ ಭಾಗ್ಯ ನಗರದ ಮತ್ತು ಅಲ್ಲಿನ ಸುತ್ತಮುತ್ತಲಿನ ಜನರು ಆಸ್ಪತ್ರೆಯ ಆವರಣವನ್ನು ಬಯಲು ಶೌಚಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಸಂಜೆ ವೇಳೆ ಕುಡುಕರು, ಪುಂಡರು ಪಾರ್ಟಿ ಮಾಡಲು ಉಪಯೋಗಿಸುತ್ತಿದ್ದಾರೆ. ಆಸ್ಪತ್ರೆಗೆ ಬರುವ ಮಹಿಳೆಯರು, ರೋಗಿಗಳು, ವೈದ್ಯರು ಮೂಗು ಮುಚ್ಚಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರು ಎಷ್ಟೇ ತಿಳಿವಳಿಕೆ ನೀಡಿದರು ಜನರು ಬಯಲು ಶೌಚವನ್ನು ನಿಲ್ಲಿಸುತ್ತಿಲ್ಲ. ಆದ್ದರಿಂದ ಕಾಂಪೌಂಡ್‌ ನಿರ್ಮಾಣ ತ್ವರಿತವಾಗಿ ಆಗಬೇಕಿದೆ. ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕಿದೆ’ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಆಂಬುಲೆನ್ಸ್‌ ವ್ಯವಸ್ಥೆ ಇಲ್ಲ

ಸುತ್ತಲೂ 21 ಹಳ್ಳಿಯ ಜನರು ಅವಲಂಬಿತವಾಗಿರುವ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು 20ಕ್ಕೂ ಹೆಚ್ಚು ಹೆರಿಗೆಗಳು ನಡೆಯುತ್ತವೆ. ಆದರೆ ಇಂದಿಗೂ ಆಂಬುಲೆನ್ಸ್‌ ವ್ಯವಸ್ಥೆ ಇಲ್ಲ ಎಂಬುದು ಶೋಚನೀಯವಾಗಿದೆ.

‘ಈ ಮೊದಲು ಒಂದು ಆಂಬುಲೆನ್ಸ್‌ ತೆಗೆದುಕೊಳ್ಳಲು ಹೆಡ್‌ ಆಫ್‌ ದಿ ಅಕೌಂಟ್‌ಗೆ ಅನುದಾನ ಬರುತಿತ್ತು. ಆದರೆ ಈಗ ಅದನ್ನು ರದ್ದು ಪಡಿಸಲಾಗಿದೆ. ಈ ಕುರಿತು ಹಣಕಾಸು ಇಲಾಖೆಯನ್ನು ಸಂಪರ್ಕ ಮಾಡಿದಾಗ ಸರ್ಕಾರವೇ ಒದಗಿಸುತ್ತದೆ ಎನ್ನುವ ಮಾಹಿತಿಯನ್ನು ನೀಡಿದರು. ಹಾಗಾಗಿ ಸರ್ಕಾರದಿಂದ ಬಂದ ತಕ್ಷಣವೇ ನರೇಗಲ್‌ ಪಟ್ಟಣಕ್ಕೆ ಆಂಬುಲೆನ್ಸ್‌ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ತಿಳಿಸಿದರು.

ಮುಳ್ಳಿನ ಕಂಟಿ

ಉನ್ನತೀಕರಣಗೊಂಡ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರದ ಸುತ್ತಲೂ ಸೇರಿದಂತೆ ಹಳೇ ಆಸ್ಪತ್ರೆ, ಪೋಸ್ಟ್‌ಮಾರ್ಟ್ಂ ಕಟ್ಟಡದ ಸುತ್ತಲೂ ಮುಳ್ಳಿನ ಕಂಟಿಗಳು ಬೃಹತ್‌ ಆಕಾರದಲ್ಲಿ ಬೆಳೆದು ನಿಂತಿವೆ. ಕುರಿ  ಹಾಗೂ ದನಗಾಹಿಗಳು ಮಧ್ಯಾಹ್ನದ ವೇಳೆ ವಿಶ್ರಾಂತಿ ಪಡೆಯುವ ತಾಣಗಳಾಗಿವೆ.

ನೂತನ ಕಟ್ಟಡದ ಒಳಗೆ ಉದ್ಘಾಟನೆಯಲ್ಲಿ ಹಾಕಲಾಗಿದ್ದ ಹೂವಿನ ಮಾಲೆ ಹಾಗೂ ಇತರೆ ಕಸಗಳು ಹಾಗೆ ಉಳಿದಿವೆ.

ಅಷ್ಟೇ ಅಲ್ಲದೆ ನೂತನ ಕಟ್ಟಡ ಕೆಲವೆಡೆ ಪೈಪುಗಳು

ಒಡೆದಿವೆ.

ಜನರು ಏನಂತಾರೆ?

ಸಿಬ್ಬಂದಿ ನೇಮಿಸಿ

ಬಡ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಿನ ಪ್ರಮಾಣದಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ಅಗತ್ಯಕ್ಕೆ ತಕ್ಕಂತೆ ನೂತನ ಕಟ್ಟಡ ಬಳಕೆಗೆ, ವೈದ್ಯರು, ಸಿಬ್ಬಂದಿ ನೇಮಕ್ಕೆ ಮುಂದಾಗಬೇಕು
–ರಾಜೇಂದ್ರ ಜಕ್ಕಲಿ, ಹಿರಿಯ ನಾಗರಿಕ ನರೇಗಲ್

ಆಂಬುಲೆನ್ಸ್‌ ಒದಗಿಸಿ

ನರೇಗಲ್‌ ಪಟ್ಟಣಕ್ಕೆ ಆಂಬುಲೆನ್ಸ್‌ ವ್ಯವಸ್ಥೆ ಮಾಡುವಂತೆ ನಮ್ಮ ಸಂಘಟನೆಯಿಂದ ಡಿಸಿಯವರಿಗೆ ಅನೇಕಬಾರಿ ಮನವಿ ಸಲ್ಲಿಸಲಾಗಿದೆ. ಈಗಲೂ ನಿರ್ಲಕ್ಷ ಮಾಡಿದರೆ ಉಗ್ರವಾದ ಹೋರಾಟಕ್ಕೆ ಮುಂದಾಗುತ್ತೇವೆ
–ಮೈಲಾರಪ್ಪ ವೀ. ಚಳ್ಳಮರದ, ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ಉಪಾಧ್ಯಕ್ಷ

ಜನರ ಕಷ್ಟಕ್ಕೆ ಸ್ಪಂದಿಸಿ

ಜನರ ಆರೋಗ್ಯಕ್ಕೆ ತುರ್ತಾಗಿ ಬೇಕಾಗಿರುವ ಕಟ್ಟಡದ ಬಳಕೆಗೆ ಸರ್ಕಾರ ಆದಷ್ಟು ಬೇಗ ಅನುಮತಿ ನೀಡುವ ಮೂಲಕ ಗ್ರಾಮೀಣರ ಕಷ್ಟಕ್ಕೆ ಸ್ಪಂದಿಸಬೇಕು
–ಶಣಪ್ಪ ಧರ್ಮಾಯತ, ರೈತ ಸೇನಾ ಸಮಿತಿ ಅಧ್ಯಕ್ಷ

ಇಕ್ಕಟ್ಟಿನಿಂದಾಗಿ ಪರದಾಟ

ಇಲ್ಲಿನ ವೈದ್ಯರ ಉಪಚಾರ ಚೆನ್ನಾಗಿರುವ ಕಾರಣ ದಿನವೂ ರೋಗಿಗಳಿಂದ ತುಂಬಿರುತ್ತದೆ. ಆದರೆ ಇಲ್ಲಿನ ಕಿರಿದಾದ ಆಸ್ಪತ್ರೆಯ ಕಟ್ಟಡದ ಇಕ್ಕಟ್ಟನಲ್ಲಿ ಜನರು ಪರದಾಡುತ್ತಿದ್ದಾರೆ
–ಸಿ.ಕೆ.ಹೊನವಾಡ, ರೈತ ಮುಖಂಡರು

ಗರ್ಭಿಣಿಯರಿಗೆ ತೊಂದರೆ

ಪ್ರತಿ ತಿಂಗಳು ಅನೇಕ ಹೆರಿಗೆಗಳು ನಡೆದರು ತುರ್ತು ಸಂದರ್ಭದಲ್ಲಿ ಬೇಕಾಗುವ ಅಂಬುಲೆನ್ಸ್‌ ಹಾಗೂ ಇತರೆ ವ್ಯವಸ್ಥೆ ಇಲ್ಲದಕಾರಣ ಗರ್ಭಿಣಿಯರಿಗೆ ತೊಂದರೆಯಾಗುತ್ತಿದೆ
–ನಿರ್ಮಲಾ ಹಿರೇಮಠ, ಮುಖ್ಯ ಶಿಕ್ಷಕಿ

ಯಕ್ಷಪ್ರಶ್ನೆಗೆ ಉತ್ತರ ಸಿಗಲಿ

ನೂತನ ಕಟ್ಟಡ ಉದ್ಘಾಟನಾ ದಿನದಂದು ವೈದ್ಯಾಧಿಕಾರಿಯವರು ಕಾಂಪೌಂಡ್‌ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು ಆದರೆ ಯಾಕೆ ಇನ್ನೂ ನಿರ್ಮಾಣ ಕಾರ್ಯ ಆರಂಭವಾಗಿಲ್ಲ ಎನ್ನುವುದು ಯಕ್ಷಪ್ರಶ್ನೆಯಾಗಿದೆ?
–ಸಂತೋಷ ಮಣ್ಣೊಡ್ಡರ, ಚಂದ್ರಮೌಳೇಶ್ವರ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT