ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಮ್ ಮೀಟಿಂಗ್‌ ಮೂಲಕ ಸೋಂಕಿತರೊಂದಿಗೆ ಶಾಸಕ ಎಚ್‌.ಕೆ.ಪಾಟೀಲ ಸಂವಾದ

ಆನ್‌ಲೈನ್‌ ವೇದಿಕೆಯಲ್ಲಿ ಅಭಯ ಹಸ್ತ
Last Updated 30 ಏಪ್ರಿಲ್ 2021, 3:20 IST
ಅಕ್ಷರ ಗಾತ್ರ

ಗದಗ: ಶಾಸಕ ಎಚ್.ಕೆ.ಪಾಟೀಲ ಅವರು ಗುರುವಾರ ಜೂಮ್ ಆ್ಯಪ್ ಮೂಲಕ ವಿಶೇಷ ಸಭೆ ನಡೆಸಿ, ಕೋವಿಡ್‌ ಸೋಂಕಿತರ ಆರೋಗ್ಯ ವಿಚಾರಿಸಿದರು.

ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಿಂದ ಗದಗ ವಿಧಾನಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಂಕಿಗೆ ತುತ್ತಾಗಿ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಜತೆಗೆ ಮಾತನಾಡಿದರು. ಪ್ರೇರಣಾದಾಯಕ ಮಾತುಗಳ ಮೂಲಕ ಅವರಲ್ಲಿ ಹೊಸ ವಿಶ್ವಾಸ ಮೂಡಿಸಿದರು.

‘ಕೋವಿಡ್‌–19 ಸೋಂಕು ಕೆಲವೊಂದು ಸಂದರ್ಭದಲ್ಲಿ ದೇಹದ ಮೇಲೆ ವಿವಿಧ ರೀತಿಯ ಪರಿಣಾಮ ಬೀರುತ್ತದೆ. ಆದ್ದರಿಂದ ಸೋಂಕಿತರೆಲ್ಲರೂ ಬಹಳ ಜಾಗ್ರತೆಯಿಂದ ಇರಬೇಕು. ಉಸಿರಾಟದ ತೊಂದರೆ, ವೈದ್ಯರ ಬಳಿ ಹೋಗಬೇಕು ಅಂತ ಬಲವಾಗಿ ಅನ್ನಿಸಿದರೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ವಿಳಂಬ ಆದಷ್ಟು ಸಮಸ್ಯೆ ಜಟಿಲಗೊಳ್ಳುತ್ತದೆ’ ಎಂದು ಕಿವಿಮಾತು ಹೇಳಿದರು.

‘ಸೋಂಕಿತರಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರು 14 ದಿನಗಳ ಕಾಲ ಜಾಗ್ರತೆ ವಹಿಸಬೇಕು. ಔಷಧ, ಮಾರ್ಗದರ್ಶನದ ಕೊರತೆ, ವೈದ್ಯರು ಅಥವಾ ಆಡಳಿತದ ಗಮನಕ್ಕೆ ಯಾವುದಾದರೂ ವಿಷಯ ತಿಳಿಸಬೇಕು ಅಂತ ಅನ್ನಿಸಿದರೆ ಅದನ್ನು ಆನ್‌ಲೈನ್‌ ವೇದಿಕೆ ಮೂಲಕ ನನ್ನ ಬಳಿ ಹಂಚಿಕೊಳ್ಳಬಹುದು’ ಎಂದು ತಿಳಿಸಿದರು.

‘ಜನಪ್ರತಿನಿಧಿಯಾಗಿ, ಶಾಸಕನಾಗಿ ನಿಮ್ಮೆಲ್ಲರನ್ನೂ ಭೇಟಿ ಮಾಡಬೇಕಿತ್ತು. ಆದರೆ, ಕೋವಿಡ್‌–19 ಸಂದರ್ಭದಲ್ಲಿ ಅದಕ್ಕೂ ಕೆಲವೊಂದು ನಿರ್ಬಂಧಗಳಿವೆ. ನೀವು ಹುಷಾರಿಲ್ಲದ ಪರಿಸ್ಥಿತಿಯಲ್ಲಿ ನಿಮ್ಮ ಕಷ್ಟಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ಅದಕ್ಕಾಗಿಯೇ ವಿಶೇಷ ವೇದಿಕೆಯೊಂದನ್ನು ರೂಪಿಸಿದ್ದೇನೆ’ ಎಂದು ತಿಳಿಸಿದರು.

‘ಸರ್ಕಾರಿ ಅಧಿಕಾರಿಗಳು ಹಾಗೂ ನಮ್ಮ ಸಂಸ್ಥೆಯ ವೈದ್ಯರ ತಂಡವನ್ನು ನಿಮ್ಮ ಸೇವೆಗೆ ಸದಾ ಲಭ್ಯವಿರುತ್ತದೆ. ಸಮಸ್ಯೆಗಳನ್ನು ಪರಿಹರಿಸಲು ಎಷ್ಟರ ಮಟ್ಟಿಗೆ ಸಾಧ್ಯವೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂದು ತಿಳಿಸಿದರು.

‘ಯಾವುದೇ ಸಮಸ್ಯೆ ಎದುರಾಗಿದ್ದರೂ ಅದನ್ನು ಮುಕ್ತವಾಗಿ ತಿಳಿಸಿ. ನೀವಿರುವಲ್ಲಿಗೆ ಆಶಾ ಕಾರ್ಯಕರ್ತೆಯರು ಅಥವಾ ಬೇರೆ ಯಾರನ್ನಾದರೂ ಕಳುಹಿಸಿ ನಿಮ್ಮನ್ನು ಉಪಚರಿಸುವ ವ್ಯವಸ್ಥೆ ಮಾಡಲಾಗುವುದು. ಔಷಧಿಗಳು ಸಿಕ್ಕಿರದಿದ್ದರೆ ಅವುಗಳನ್ನು ಕೂಡ ಒದಗಿಸಲಾಗುವುದು. ಆಸ್ಪತ್ರೆಗೆ ಹೋಗಿ ಅಡ್ಮಿಟ್‌ ಆಗಬೇಕು ಅಂತ ಅನ್ನಿಸಿದರೆ ಅದಕ್ಕೂ ಅನುಕೂಲ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

‘ಕೆಲವರ ಬಳಿ ಸ್ಮಾರ್ಟ್‌ಫೋನ್‌ ಇರುವುದಿಲ್ಲ. ಅಂತಹವರಿಗೆ ಟೆಲಿಫೋನ್‌ ಮೂಲಕ ಸಂಪರ್ಕ ಮಾಡುವ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಹೇಳಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ನೀಲಗುಂದ, ಹಿರಿಯ ವೈದ್ಯರಾದ ಡಾ.ನಾಗನೂರ, ಡಾ. ನೂರಾನಿ, ಮನೋರೋಗ ತಜ್ಞ ಡಾ.ಮುಗಳಿ, ಯೋಗ ತಜ್ಞ ಡಾ.ಸತೀಶ ಹೊಂಬಳಿ ಜೂಮ್ ಆ್ಯಪ್ ಮೂಲಕ ನಡೆದ ಸಭೆಯಲ್ಲಿ ಪಾಲ್ಗೊಂಡು ಸೋಂಕಿತರಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

ಶಾಸಕ ಎಚ್.ಕೆ.ಪಾಟೀಲ ಸೋಂಕಿತರನ್ನು ಮಾತನಾಡಿಸಿ, ಯಾವುದೇ ಸಹಾಯ ಬೇಕಿದ್ದರೂ ಕೇಳುವಂತೆ ತಿಳಿಸಿದರು.
ಆನ್‌ಲೈನ್‌ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಸೋಂಕಿತರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT