ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಶಿಬಿರ, ಹಲವರು ಭಾಗಿ

Last Updated 1 ಡಿಸೆಂಬರ್ 2022, 5:22 IST
ಅಕ್ಷರ ಗಾತ್ರ

ಗದಗ: ‘ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಆದ ಉತ್ತಮ ಕೆಲಸವು ವೈಯಕ್ತಿಕವಾಗಿ ನನಗೆ ಬಹಳ ಸಮಾಧಾನ ತಂದುಕೊಟ್ಟಿದೆ. ಶಿಬಿರದ ಮೂಲಕ 25 ಮಂದಿ ಅಂಗವಿಕಲರಿಗೆ ಸ್ವತಂತ್ರವಾಗಿ ಓಡಾಡುವ ಶಕ್ತಿ ತುಂಬಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲಾಗಿದೆ. ಇದು ಸಣ್ಣ ಕೆಲಸವಲ್ಲ. ಈ ಬಗೆಯ ಸೇವೆ ನಿರಂತರವಾಗಿ ಮುಂದುವರಿಯಲಿದೆ’ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

ನಗರದ ಕಾಟನ್‌ ಸೇಲ್‌ ಸೊಸೈಟಿ ಆವರಣದಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಶಾಸಕ ಎಚ್‌.ಕೆ. ಪಾಟೀಲ ಸೇವಾ ತಂಡ ಹಾಗೂ ಆಲ್‌ ಇಂಡಿಯಾ ಯೂತ್‌ ಫೆಡರೇಷನ್‌ನ ಮಹಾವೀರ ಲಿಂಬ್‌ ಸೆಂಟರ್‌ ವತಿಯಿಂದ ನಡೆದ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೋಡಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಸೇವಾ ತಂಡದ ಜತೆಗೂಡಿ ಆಲ್‌ ಇಂಡಿಯಾ ಜೈನ್‌ ಯೂತ್‌ ಫೆಡರೇಷನ್‌ನವರು ಕೃತಕ ಕಾಲು ಜೋಡಣಾ ಶಿಬಿರ ಗದುಗಿನಲ್ಲಿ ಆಯೋಜಿಸುವ ಮೂಲಕ ಅಗತ್ಯವುಳ್ಳವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ನಾನು ಜೈನ್‌ ಸಮಾಜ ಹಾಗೂ ಮಹಾವೀರ ಲಿಂಬ್‌ ಸೆಂಟರ್‌ನ ಅಧ್ಯಕ್ಷರಾದ ಮಹೇಂದ್ರ ಸಿಂಘಿ ಅವರಿಗೆ ಧನ್ಯವಾದ ಸಲ್ಲಿಸುವೆ’ ಎಂದು ಹೇಳಿದರು.

‘ಶಾಸಕ ಎಚ್‌.ಕೆ.ಪಾಟೀಲ ಸೇವಾ ತಂಡದಲ್ಲಿ ಈ ವಿಭಾಗಕ್ಕೆ ಸಂಬಂಧಪಟ್ಟಂತೆ ಗುರಣ್ಣ ಬಳಗಾನೂರ, ಅಸೂಟಿ, ಪ್ರಭು, ಬರ್ಕತ್‌ ಅಲಿ, ಸಿದ್ದು ಪಾಟೀಲ, ಎಂ.ಸಿ.ಶೇಖ್‌, ಅಶೋಕ್‌ ಮಂದಾಲಿ ಅವರು ಸಂಯೋಜಕರಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾವೀರ ಲಿಂಬ್‌ ಸೆಂಟರ್‌ನ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ‘ಅಂಗವಿಕಲರು ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂಬುದು ಸಂಸ್ಥೆಯ ಆಶಯ. ಅದಕ್ಕಾಗಿ ಈ ಬೃಹತ್‌ ಶಿಬಿರ ಆಯೋಜಿಸಲಾಗಿದೆ’ ಎಂದು ಹೇಳಿದರು.

ಬುಧವಾರ ಗದಗ ನಗರದಲ್ಲಿ ನಡೆದ ಉಚಿತ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಹಲವರು ಭಾಗವಹಿಸಿದ್ದರು. ಅಂಗವಿಕಲ ಮಕ್ಕಳು, ವಯಸ್ಕರು ಹಾಗೂ ವೃದ್ಧರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಕೃತಕ ಕಾಲು ಜೋಡಣಾ ಶಿಬಿರದಿಂದ ಆತ್ಮವಿಶ್ವಾಸ ವೃದ್ಧಿಸಿದೆ. ಅನ್ಯರ ಸಹಾಯವಿಲ್ಲದೇ ನಡೆಯಬಹುದು ಎಂಬ ವಿಶ್ವಾಸ ಮೂಡಿದೆ
ಲಕ್ಷ್ಮೀ ಅನಂತಪುರ, ಗದಗ ನಗರದ ಫಲಾನುಭವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT