ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೂಂಡಾ ಸಂಸ್ಕೃತಿ ನಡೆಯುವುದಿಲ್ಲ: ಬೊಮ್ಮಾಯಿ

ತಳಮಟ್ಟದ ಆಡಳಿತ ಗಟ್ಟಿಗೊಳಿಸಲು ಸಮಾವೇಶ
Last Updated 29 ನವೆಂಬರ್ 2020, 13:30 IST
ಅಕ್ಷರ ಗಾತ್ರ

ಗದಗ: ‘ಕಾಂಗ್ರೆಸ್ ಮುಳುಗುವ ಹಡಗು ಅಲ್ಲ; ಈಗಾಗಲೇ ಮುಳುಗಿದ ಹಡಗು. ಮಹಾತ್ಮ ಗಾಂಧೀಜಿ ಹೆಸರನ್ನು ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಭಾನುವಾರ ನಡೆದ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರು, ದಲಿತರು, ಮಹಿಳೆಯರು ಹಾಗೂ ಯುವಕರ ಭವಿಷ್ಯವನ್ನು ಕಾಂಗ್ರೆಸ್ ಪಕ್ಷ ಹಾಳು ಮಾಡಿದೆ. ಗ್ರಾಮ ಪಂಚಾಯ್ತಿ ಅಧಿಕಾರ ರಾಷ್ಟ್ರಭಕ್ತರ ಕೈಗೆ ಸೇರಬೇಕು. ಅಂದಾಗ ಮಾತ್ರ ಸುಭದ್ರ ದೇಶ ನಿರ್ಮಾಣ ಮಾಡಲು ಸಾಧ್ಯ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಧಮಕಿ ನಡೆಯುವುದಿಲ್ಲ. ಗೂಂಡಾ ಸಂಸ್ಕೃತಿಗೆ ಅವಕಾಶವಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಅವಶ್ಯಕತೆ ಇದ್ದರೆ ನಾನು ಬಂದು ನಿಲ್ಲುತ್ತೇನೆ’ ಎಂದು ಹೇಳಿದರು.

‘ರಾಜಕೀಯ ಪಕ್ಷಗಳು ಅಧಿಕಾರ ಹಿಡಿದ ನಂತರ ಕಾರ್ಯಕರ್ತರನ್ನು ಮರೆತು ಬಿಡುತ್ತವೆ. ಆದರೆ, ಬಿಜೆಪಿ ಹಾಗಲ್ಲ. ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರ ಗೆಲುವಿಗೆ ನಾಯಕರೆಲ್ಲರೂ ಶ್ರಮಿಸಲಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಚುನಾಯಿತರಾಗಬೇಕು. ಹೀಗಾಗಿ ಈ ಚುನಾವಣೆಯಲ್ಲಿ ಶೇ 80ರಷ್ಟು ಮತದಾನ ಆಗಬೇಕು, ತಳಮಟ್ಟದ ಆಡಳಿತ ಗಟ್ಟಿಗೊಳಿಸಬೇಕು ಎನ್ನುವುದೇ ಈ ಸಮಾವೇಶದ ಉದ್ದೇಶ’ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಇದೊಂದು ಹೊಸ ಆಯಾಮ. ಮಂತ್ರಿಮಂಡಲ ಸದೃಢವಾಗಿ ಇರಬೇಕು ಎಂದರೆ ಗ್ರಾಮ ಪಂಚಾಯ್ತಿಗಳು ಸದೃಢವಾಗಿ ಇರಬೇಕು. ಹೀಗಾಗಿ ಪಕ್ಷದ ಕಾರ್ಯಕರ್ತರನ್ನು ಸದೃಢ ಮಾಡುವ ನಿಟ್ಟಿನಲ್ಲಿ ಈ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಕಲಿ ಮತದಾನ ಆಗದ ರೀತಿ ನೋಡಿಕೊಳ್ಳಬೇಕು. ಯಾವುದೇ ಲೋಪದೋಷ ಕಂಡುಬಂದರೆ ಗಮನಕ್ಕೆ ತನ್ನಿ, ಸರಿಪಡಿಸೋಣ. ಗ್ರಾಮ ಪಂಚಾಯ್ತಿಗಳು ರಾಜ್ಯ ಹಾಗೂ ರಾಷ್ಟ್ರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮಾಧ್ಯಮಗಳಾಗಿವೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ಡಾ. ಸಂದೀಪ್ ಕುಮಾರ್, ಪಕ್ಷದ ಕಾರ್ಯಕರ್ತರು ಇದ್ದರು.

ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸಿ: ಅನಿಲ
ಬಿಜೆಪಿಯ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಮಾತನಾಡಿ, ‘ಗದಗ ವಿಧಾನಸಭಾ ಕ್ಷೇತ್ರ ಸೂಕ್ಷ್ಮ ಪ್ರದೇಶ. ಇಲ್ಲಿ ಗೂಂಡಾ ಸಂಸ್ಕೃತಿ ಇದೆ. ಅಂತೂರು, ಬೆಂತೂರು, ಹುಲಕೋಟಿ, ಬಿಂಕದಕಟ್ಟಿ ಈ ಕ್ಷೇತ್ರದಲ್ಲಿ ಮುಕ್ತ ಮತದಾನ ಹಾಗೂ ಪ್ರಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಗೃಹ ಮಂತ್ರಿಗಳಿಗೆ ವೇದಿಕೆಯಲ್ಲಿ ಮನವಿ ಮಾಡಿದರು.

‘ನೀವು ಸಹಕಾರ ನೀಡಿದ್ದೇ ಆದಲ್ಲಿ, ಗದಗ ಕಾಂಗ್ರೆಸ್ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಹೇಳಿದರು.

ಕಾರ್ಯಕರ್ತರಿಗೆ ರಾಜಕೀಯ ಶಕ್ತಿ
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ‘ಕಾರ್ಯಕರ್ತರು ಪಕ್ಷದ ಆಸ್ತಿ. ಪಕ್ಷದ ತತ್ವ ಸಿದ್ಧಾಂತಗಳನ್ನು ಗ್ರಾಮ ಮಟ್ಟದ ಜನರಿಗೆ ತಲುಪಿಸುವವರು ಕೂಡ ಅವರೇ. ಪಕ್ಷದ ಕಾರ್ಯಕರ್ತರು ನಾಯಕರಾಗುವ ಅವಕಾಶ ಪಂಚಾಯ್ತಿ ಚುನಾವಣೆ ಮೂಲಕ ಒದಗಿ ಬಂದಿದೆ’ ಎಂದು ಹೇಳಿದರು. ‌‌

‘ಒಂದು ಪಕ್ಷಕ್ಕೆ ಭದ್ರ ಬುನಾದಿ ಹಾಕುವವರು. ಹಾಗಾಗಿ ಇಲ್ಲಿ ಅವರ ನೆಲೆ ಬಹಳ ಮುಖ್ಯ. ಪಕ್ಷಾತೀತ ಚುನಾವಣೆ ಇದು. ಆದರೆ, ಬಿಜೆಪಿ ಗ್ರಾಮ ಪಂಚಾಯ್ತಿ ಸದಸ್ಯರನ್ನು ಬೆಂಬಲಿಸುವ ಮೂಲಕ ಅವರಿಗೆ ರಾಜಕೀಯ ಶಕ್ತಿ ನೀಡಲಿದೆ’ ಎಂದರು.

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ: ಬೊಮ್ಮಾಯಿ
ಗದಗ:
‘ಪಕ್ಷದಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯ ಇಲ್ಲ. ಪ್ರತಿಯೊಬ್ಬ ನಾಯಕರು ಕೂಡ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರಿದ್ದೇವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. 17 ಮಂದಿ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಿ ತದನಂತರ ಚುನಾವಣೆಯಲ್ಲಿ ಗೆದ್ದು ಬಂದ ಮೇಲೆ ನಮಗೆ ಅಧಿಕಾರ ಸಿಕ್ಕಿತು. ಅದಕ್ಕೆ ಪೂರ್ವದಲ್ಲಿ ನಡೆದ ಮಾತುಕತೆಯಂತೆ ನಮ್ಮ ಪಕ್ಷಕ್ಕೆ ಸಹಾಯ ಮಾಡಿದವರಿಗೆ ಸೂಕ್ತ ಸ್ಥಾನಮಾನವನ್ನು ಸಿಎಂ ಒದಗಿಸಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT