ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃಪ್ತಿ ನೀಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಸಚಿವ ಎಚ್‌.ಕೆ.ಪಾಟೀಲ

Published 21 ಜನವರಿ 2024, 16:18 IST
Last Updated 21 ಜನವರಿ 2024, 16:18 IST
ಅಕ್ಷರ ಗಾತ್ರ

ಗದಗ: ‘ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸಿದ್ಧತೆ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್‌ ಜೈಕುಮಾರ್‌ ಅವರು ಜಿಲ್ಲಾ ಮಟ್ಟದ ಹಿರಿಯ ನಾಯಕರ ಜತೆಗೆ ಚರ್ಚಿಸಿ, ಕೆಲವೊಂದು ನಿರ್ದೇಶನ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ನಗರದ ಕಾಟನ್‌ ಸೇಲ್‌ ಸೊಸೈಟಿ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜೈಕುಮಾರ್‌ ಮಯೂರ್‌ ಅವರು ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಬೇರೆ ಸಮಿತಿಗಳನ್ನು ನೇಮಕ ಮಾಡುವುದರ ಕುರಿತಾಗಿ ಹಿರಿಯ ನಾಯಕರ ಜತೆಗೆ ಚರ್ಚಿಸಿದರು. ಜತೆಗೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡಿದ ಬಗ್ಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಭಿನಂದನಾ ಪತ್ರ ಕಳುಹಿಸುವ ನಿರ್ಣಯ ಮಾಡಲಾಯಿತು’ ಎಂದು ತಿಳಿಸಿದರು.

‘ಭಾನುವಾರ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಅನುಷ್ಠಾನದ ಪ್ರಗತಿಪರಿಶೀಲನೆ ಮಾಡಲಾಯಿತು. ಗ್ಯಾರಂಟಿ ಯೋಜನೆಗಳು ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಾಡಿರುವ ಕ್ರಾಂತಿಕಾರ ಸಾಧನೆ. ಒಂದು ಕೋಟಿಗೂ ಹೆಚ್ಚು ಬಡ ಕುಟುಂಬಗಳನ್ನು ಈ ಮೂಲಕ ಮೇಲೆತ್ತುವ ಕೆಲಸ ಮಾಡಲಾಗಿದೆ. ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ₹60 ಸಾವಿರ ಆದಾಯ ಬರುವುದನ್ನು ಗ್ಯಾರಂಟಿಗೊಳಿಸಲಾಗಿದೆ. ಪಂಚ ಗ್ಯಾರಂಟಿಗಳ ಅನುಷ್ಠಾನ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆದಿದ್ದು, ನಾಯಕರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.

ಗ್ಯಾರಂಟಿಗಳ ಅನುಷ್ಠಾನದ ಸಂದರ್ಭದಲ್ಲಿ ಯಾವ ಕೊರತೆಯೂ ಆಗಬಾರದು. ಯೋಜನೆಗಳಿಂದ ಈವರೆಗೆ ಹೊರಗುಳಿದಿರುವ ಅಲ್ಪ ಸಲ್ಪ ಜನರನ್ನು ಇದರ ವ್ಯಾಪ್ತಿಯೊಳಗೆ ತರುವ ಸಂಬಂಧ ಮತ ಕ್ಷೇತ್ರ ವ್ಯಾಪ್ತಿ, ಜಿಲ್ಲಾ ವ್ಯಾಪ್ತಿ, ರಾಜ್ಯ ವ್ಯಾಪ್ತಿ ಸಮಿತಿ ಮಾಡಲು ನಿರ್ಣಯಿಸಲಾಗಿದೆ. ಅದರಂತೆ, ಜಿಲ್ಲಾ ಮಟ್ಟದ ಸಮಿತಿ ಬೇಗ ಕಾರ್ಯಾರಂಭ ಮಾಡಲಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಜನತಾ ದರ್ಶನ ಮಾಡಿದ್ದು, ಇದು ಕೇವಲ ಅರ್ಜಿ ಸ್ವೀಕರಿಸುವ ಕಾರ್ಯಕ್ರಮ ಅಲ್ಲ. ಜನತಾ ದರ್ಶನದಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿ, ಯಾವುದು ಸಾಧ್ಯವೋ ಆ ಅರ್ಜಿಗಳನ್ನು ಸ್ಥಳದಲ್ಲೇ ನಿರ್ಣಯ ಮಾಡಲಾಗಿದೆ. ಜನತಾ ದರ್ಶನದಲ್ಲಿ ಬಂದ 921 ಅರ್ಜಿಗಳ ಪೈಕಿ 759 ಅರ್ಜಿಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ಉಳಿದ 162 ಅರ್ಜಿಗಳನ್ನು ಮೂರ್ನಾಲ್ಕು ದಿನಗಳಲ್ಲಿ ಬಗೆಹರಿಸುವಂತೆ ಸೂಚಿಸಲಾಗಿದೆ. ಅರ್ಜಿ ವಿಲೇವಾರಿಯಲ್ಲಿ ಗದಗ ಜಿಲ್ಲೆ ಶೇ 82.05 ಫಲಿತಾಂಶ ದಾಖಲಿಸಿದೆ’ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್‌ ಜೈಕುಮಾರ್ ಮಾತನಾಡಿ, ‘ಸುರ್ಜೆವಾಲಾ ನಿರ್ದೇಶನದಂತೆ ಗದಗ ಜಿಲ್ಲಾ ಉಸ್ತುವಾರಿ ವಹಿಸಿದ್ದು, ಭಾನುವಾರ ನಡೆದ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

‘ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಆ ಬೆಂಬಲ ಲೋಕಸಭಾ ಚುನಾವಣೆಯಲ್ಲೂ ದೊರಕಬೇಕು. ಅದಕ್ಕೆ ಸಿದ್ಧತೆ ನಡೆಸುವಂತೆ ಸೂಚಿಸಲಾಗಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಲು ರಾಜ್ಯ ನಾಯಕರು 24/7 ಹೋರಾಟ ನಡೆಸಿದ್ದರು. ಆ ಬದ್ಧತೆ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಬೇಕು ಎಂದು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌.ಪಾಟೀಲ ಮಾತನಾಡಿದರು. ಮುಖಂಡರಾದ ಬಿ.ಆರ್‌.ಯಾವಗಲ್‌, ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ವಾಸಣ್ಣ ಕುರಡಗಿ, ಐ.ಎಸ್‌.ಪಾಟೀಲ. ವಿ.ವಿ.ಸೋಮನಕಟ್ಟಿಮಠ, ಬೋಳಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT