ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಸ್ಪರ್ಧಾತ್ಮಕ ತರಬೇತಿ ಕೇಂದ್ರ ಸ್ಥಾಪನೆಗೆ ಒತ್ತು: ಸಿ.ಎಸ್‌.ಷಡಾಕ್ಷರಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿಕೆ
Last Updated 22 ನವೆಂಬರ್ 2022, 5:52 IST
ಅಕ್ಷರ ಗಾತ್ರ

ಗದಗ: ‘ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಸಂಘದ ವತಿಯಿಂದ ಉಚಿತವಾಗಿ ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲಾಗುವುದು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ನಗರದ ಅಂಬೇಡ್ಕರ್‌ ಭವನದಲ್ಲಿ ಸೋಮವಾರ ನಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, 2021–22ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಹಾಗೂ ಸರ್ಕಾರಿ ನೌಕರರ ಸಮುದಾಯ ಭವನದ ಮೊದಲನೇ ಮಹಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸರ್ಕಾರಿ ನೌಕರರ ಮಕ್ಕಳಿಗೆ ಒಂದು ರೂಪಾಯಿ ಖರ್ಚಿಲ್ಲದೇ ತರಬೇತಿ ಕೊಡಿಸಲಾಗುವುದು. ಅದಕ್ಕಾಗಿ ತಜ್ಞರ ತಂಡವೊಂದನ್ನು ರಚಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ತಂಡಗಳನ್ನಾಗಿ ವಿಂಗಡಿಸಿ, ತರಬೇತಿ ಕೊಡಿಸಲಾಗುವುದು’ ಎಂದು ಹೇಳಿದರು.

‘ಸರ್ಕಾರಿ ನೌಕರರ ಸಂಘ ಅತ್ಯಂತ ಬಲಿಷ್ಠವಾಗಿ ಬೆಳೆದಿದ್ದು, ₹21 ಕೋಟಿ ಹಣ ಹೊಂದಿದೆ. ರಾಜ್ಯದೆಲ್ಲೆಡೆ ಇರುವ ಒಟ್ಟು 10 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದು, ₹1 ಕೋಟಿ ಹಣ ವ್ಯಯಿಸಲಾಗುತ್ತಿದೆ. ಇದೊಂದು ಶಾಶ್ವತ ಕಾರ್ಯಕ್ರಮವಾಗಿದ್ದು, ಮುಂದೆಯೂ ನಡೆಸಿಕೊಂಡು ಹೋಗಲಾಗುವುದು. ಸರ್ಕಾರಿ ನೌಕರರ ಕುಟುಂಬದವರೆಲ್ಲರಿಗೂ ಶೇ 100ರಷ್ಟು ನಗದುರಹಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗುವುದು. ಈ ಯೋಜನೆ ಜನವರಿಯಿಂದ ಜಾರಿಗೆ ಬರಲಿದೆ’ ಎಂದು ಹೇಳಿದರು.

‘ಮಕ್ಕಳು ತಂದೆ ತಾಯಿಗೆ ಭಾರ ಆಗದಂತೆ ಭವಿಷ್ಯ ಕಟ್ಟಿಕೊಳ್ಳಬೇಕು. ಮೊಬೈಲ್‌ ಅನೇಕರ ದಾರಿ ತಪ್ಪಿಸುತ್ತಿದೆ. ಯುವಜನತೆ ದುಶ್ಚಟಗಳಿಗೆ ಬಲಿಯಾಗದೇ ಕುಟುಂಬದ ಗೌರವ ಕಾಪಾಡಬೇಕು’ ಎಂದು ಹೇಳಿದರು.

‘ಮಾರ್ಚ್‌ ಒಳಗೆ ಸರ್ಕಾರಿ ಆದೇಶ ಹೊರಡಿಸಿ, ಏಳನೇ ವೇತನ ಆಯೋಗವನ್ನು ನೂರಕ್ಕೆ ನೂರು ಜಾರಿ ಮಾಡಿಸಿಕೊಡುವುದಾಗಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಪುಣ್ಯಕೋಟಿ ಯೋಜನೆಗೆ ಪ್ರತಿಯೊಬ್ಬ ನೌಕರರನೂ ₹400 ಕೊಡಬೇಕು. ನಾವು ಸರ್ಕಾರದ ಈ ಯೋಜನೆಗೆ ನೆರವು ಮಾಡಿಕೊಟ್ಟರೆ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ಬಲ ಬರಲಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ, ‘ರಾಜ್ಯದಲ್ಲಿ ವೇತನ ಆಯೋಗ ರಚನೆಯಾಗಿ ಐದು ವರ್ಷ ಪೂರ್ಣಗೊಳ್ಳುವುದರೊಳಗೆ ಹೊಸ ವೇತನ ಆಯೋಗ ರಚನೆಯಾಗಿದ್ದು ಇತಿಹಾಸ ನಿರ್ಮಾಣವಾಗಿದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಲ್ಲಿ ನೌಕರರ ಪಾತ್ರ ಪ್ರಮುಖವಾಗಿದೆ’ ಎಂದು ಹೇಳಿದರು.

‘ಸರ್ಕಾರಿ ನೌಕರರ ಮಕ್ಕಳ ಐಎಎಸ್‌, ಐಪಿಎಸ್‌ ಕನಸಿಗೆ ನೀರೆರೆಯಲು ಸಂಘವು ತರಬೇತಿ ಕೇಂದ್ರ ತೆರೆಯಬೇಕು. ಎನ್‌ಪಿಎಸ್ ಬದಲು ಒಪಿಎಸ್‌ ವ್ಯವಸ್ಥೆ ಜಾರಿಗೊಳಿಸಲು ಸಂಘದ ಶಕ್ತಿ ಬೇಕಿದೆ. ಜತೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸುವಂತೆ ಒತ್ತಡ ಹಾಕಬೇಕು’ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ರವಿ ಗುಂಜೀಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಳ್ಳಾರಿ, ಆರ್.ಮೋಹನಕುಮಾರ, ಜಿ.ಎಂ.ಬಸವಲಿಂಗಪ್ಪ, ಜಿಲ್ಲಾ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ಎಸ್.ಡಿ.ಗಾಂಜಿ, ವಿ.ಎಂ.ಹಿರೇಮಠ, ಪಿ.ಎಚ್.ಕಡಿವಾಲ, ಶರಣು ಗೋಗೇರಿ, ಕೆ.ಬಿ.ಕೊಣ್ಣೂರ, ಸತೀಶ ಕಟ್ಟಿಮನಿ, ಸಿದ್ದಪ್ಪ ಲಿಂಗದಾಳ ಇದ್ದರು.

ಹಾಸ್ಯದಾಟಿಯಲ್ಲಿ ಮಾತಿನ ಚಾಟಿ; ನಕ್ಕು ಚಪ್ಪಾಳೆ ತಟ್ಟಿದ ಸಭಿಕರು!

‘ಸರ್ಕಾರಿ ನೌಕರರ ಹಿತಾಸಕ್ತಿಯನ್ನು ಸಂಘ ಕಾಯುತ್ತಿದೆ. ಆದರೆ, ಸಂಘದಲ್ಲಿನ ಕೆಲವರು ನಮ್ಮ ಕೆಲಸವನ್ನು ಮೆಚ್ಚಿಕೊಳ್ಳದೇ ಟೀಕೆ ಟಿಪ್ಪಣಿ ಮಾಡುತ್ತಾರೆ’ ಎಂದು ಸಿ.ಎಸ್‌.ಷಡಾಕ್ಷರಿ ಸಂಘದ ಸದಸ್ಯರನ್ನು ಹಾಸ್ಯದಾಟಿಯಲ್ಲೇ ನಿಂದಿಸಿದರು.

‘ಕೋವಿಡ್‌–19 ಸಂದರ್ಭದಲ್ಲಿ ಸಂಘದಿಂದ ಸರ್ಕಾರಕ್ಕೆ ₹200 ಕೋಟಿ ಕೊಡಲಾಯಿತು. ಅದಕ್ಕೆ ಸಂಘದಲ್ಲಿನ ಕೆಲವರು ಒಂದೊಂದು ರೀತಿಯಾಗಿ ಮಾತನಾಡಿದರು. ಬಿಎಸ್‌ವೈ ಜತೆಗೆ ಷಡಾಕ್ಷರಿ ಚೆನ್ನಾಗಿದ್ದಾನೆ. ಮುಂದೆ ಬಿಜೆಪಿಯಿಂದ ಟಿಕೆಟ್‌ ಗಿಟ್ಟಿಸಿ ಎಂಎಲ್‌ಎ, ಎಂಎಲ್‌ಸಿ ಆದರೂ ಆಗಬಹುದು ಎಂದು ಕಾಲೆಳೆದರು’ ಎಂದು ದೂರಿದರು.

‘ಇವರೇನು ಕಡಿಮೆ ಇಲ್ಲಾ ಸಾರ್‌. ಮಾತಿಗೆ ಚಪ್ಪಾಳೆ ತಟ್ಟುತ್ತಾರೆ ಅಂತ ನಂಬಬೇಡಿ. ಮೂರು ನಾಮವನ್ನೂ ಚೆನ್ನಾಗಿ ಇಡುತ್ತಾರೆ’ ಎಂದು ತಿವಿದರು.

‘ಈಗ ಏಳನೇ ವೇತನ ಆಯೋಗವನ್ನು ಅವಧಿಗೂ ಮುನ್ನವೇ ರಚಿಸಲಾಗಿದೆ. ಅದರಲ್ಲೂ ಸಂಶಯ ಇವರಿಗೆ. ಪರಿಷ್ಕೃತ ವೇತನ ಎಲೆಕ್ಷನ್‌ಗೂ ಮುಂಚಿತವಾಗಿಯೇ ಸಿಗುತ್ತದಾ? ಮುಗಿದ ಮೇಲೆ ಸಿಗುತ್ತದಾ? ಎಂಬ ಗೊಂದಲದಲ್ಲಿದ್ದಾರೆ. ಸರ್ಕಾರಿ ನೌಕರರು ಯಾವಾಗಲೂ ಗೊಂದಲದಲ್ಲೇ ಇರುತ್ತಾರೆ. ಜೀವನವನ್ನೇ ಗೊಂದಲ ಮಾಡಿಕೊಂಡಿದ್ದಾರೆ. ಅವಧಿಗೂ ಮುನ್ನವೇ ಪ್ರಕ್ರಿಯೆ ಆರಂಭಿಸಿದ್ದರಿಂದಾಗಿ, ಒಂದೂವರೆ ವರ್ಷ ಆರ್ಥಿಕ ಸೌಲಭ್ಯದಿಂದ ವಂಚಿತರಾಗುವುದು ತಪ್ಪಿದೆ. ಇದನ್ನು ಅರಿತುಕೊಳ್ಳದೇ ಕೆಲವು ಅಲ್ಪ ಜ್ಞಾನಿಗಳು ನನ್ನನ್ನು ಟೀಕಿಸಿದರು. ಯಾವುದೇ ಹೋರಾಟ ಇಲ್ಲದೇ ನಾಲ್ಕು ಗೋಡೆಗಳ ಮಧ್ಯೆ ಸಿಎಂ ಜತೆಗೆ ಚರ್ಚಿಸಿ ಓಕೆ ಮಾಡಿಸಿದ್ದು ಸುಮ್ಮನೇನಾ’ ಎಂದು ಪ್ರಶ್ನಿಸಿದರು.

‘ಎನ್‌ಪಿಎಸ್‌ ನೌಕರರು ಕೂಡ ಕಡಿಮೆ ಇಲ್ಲ. ಒಂದು ಪದ ಹೆಚ್ಚು ಕಡಿಮೆ ಮಾತನಾಡಿದರೂ ರೆಕಾರ್ಡ್‌ ಮಾಡಿಟ್ಟುಕೊಂಡು ವೈರಲ್‌ ಮಾಡುತ್ತಾರೆ’ ಎಂದು ದೂರಿದರು.

ಹಾಸ್ಯದಾಟಿಯಲ್ಲಿ ಮಾತಿನ ಚಾಟಿ ಬೀಸುತ್ತಿದ್ದರೂ ಅಲ್ಲಿದ್ದವರು ಮಾತ್ರ ಷಡಾಕ್ಷರಿ ಮಾತಿಗೆ ಚಪ್ಪಾಳೆ ತಟ್ಟುತ್ತಿದ್ದರು!

ರಾಜ್ಯದಲ್ಲಿ ಸರ್ಕಾರಿ ನೌಕರರ ಹಲವಾರು ಸಂಘಟನೆಗಳಿದ್ದು ಅವುಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ದೊಡ್ಡಣ್ಣನ ರೀತಿ ಕಾರ್ಯನಿರ್ವಹಿಸುತ್ತಿದೆ. ನೌಕರರಿಗೆ ಅನ್ಯಾಯವಾಗಿದ್ದಲ್ಲಿ ತಕ್ಷಣವೇ ಸ್ಪಂದಿಸುತ್ತಿದೆ.

- ಎಸ್‌.ವಿ.ಸಂಕನೂರ, ವಿಧಾನ ಪರಿಷತ್‌ ಸದಸ್ಯ

ಗದಗ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರಿಂದ ₹2 ಕೋಟಿ ಹಣ ಕೊಡಿಸಲಾಗುವುದು. ನಮ್ಮ ಮಾತಿಗೆ ಬೆಲೆ ಕೊಡುತ್ತಾರೆ ಎಂಬ ನಂಬಿಕೆ ಇದೆ.

- ಸಿ.ಎಸ್‌.ಷಡಾಕ್ಷರಿ, ನೌಕರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT